ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು: ಸಮಸ್ಯೆ ನೂರಾರು

ಗ್ರಾಮ ಸಂಚಾರ
Last Updated 23 ಜುಲೈ 2014, 7:49 IST
ಅಕ್ಷರ ಗಾತ್ರ

ರಾಮನಾಥಪುರ: ಕೊಣನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಬೇಡ್ಕರ್‌ನಗರ ಎಲ್ಲಿ ನೋಡಿದರೂ ಗುಂಡಿ ಕೆಸರಿನಿಂದ ಕೂಡಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಈ ಅಂಬೇಡ್ಕರ್‌ನಗರದಲ್ಲಿ ಸುಮಾರು 600 ಮನೆಗಳು ಹಾಗೂ 1600 ಮತದಾರರಿದ್ದಾರೆ. ಆದರೆ, ಚರಂಡಿ, ಶೌಚಾಲಯ ಇನ್ನಿತರ ಸೌಕರ್ಯಗಳಿಂದ  ವಂಚಿತವಾಗಿದೆ.

ಚರಂಡಿ ಅವ್ಯವಸ್ಥೆ: ಆದಿ ಕರ್ನಾಟಕ ಕಿರಿಯ ಪ್ರಾಥಮಿಕ ಶಾಲೆ ಇರುವ ಮುಖ್ಯ ಬೀದಿಯಲ್ಲಿ ಸುಮಾರು 50 ರಿಂದ 100 ಮನೆಗಳಿವೆ. ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಳೆಗಾಲದಲ್ಲಿ ಹೇಮಾವತಿ ಮತ್ತು ಹಾರಂಗಿ ಎಡದಂಡೆ ನಾಲೆಗೆ ಬಿಡುವ ನೀರು ಇಲ್ಲಿನ ವಾಸದ ಮನೆಗಳಿಗೆ ನುಗ್ಗಿ ಗ್ರಾಮಸ್ಥರು ಮನೆಗಳ ತಳಪಾಯ ಬಿರುಕು ಬಿಟ್ಟಿದ್ದು, ಮನೆ ಕುಸಿಯುವ ಭೀತಿ ಎದುರಾಗಿದೆ. ಕೆಲವು ಚರಂಡಿ ಕಟ್ಟಿಕೊಂಡಿದ್ದರೂ ಸಂಬಂಧಪಟ್ಟವರು ಈ ಕಡೇ ಗಮನ ಹರಿಸದೇ ಈ ಚರಂಡಿಯ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿವೆ.

ಶೌಚಾಲಯದ ಸಮಸ್ಯೆ: ಅಂಬೇಡ್ಕರ್‌ನಗರದಲ್ಲಿ 600 ಮನೆಗಳಲ್ಲಿ 200 ಮನೆಗಳಿಗೆ  ಶೌಚಾಲಯದ ವ್ಯವಸ್ಥೆ ಇದೆ. ಉಳಿದವರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ‘ಮಹಿಳೆಯರು ಪ್ರತಿ ನಿತ್ಯ ಸೂರ್ಯ ಮುಳುಗುವುದನ್ನು ಕಾದು ಬಹಿರ್ದೆಸೆಗೆ ಹೋಗಬೇಕಾಗುತ್ತಿದೆ. ಇದರಿಂದ ಸಮಾಜ ತಲೆ ತಗ್ಗಿಸುವಂತಾಗಿದೆ’ ಎನ್ನುತ್ತಾರೆ ಗ್ರಾಮಸ್ಥರಾದ ಲೋಕನಾಥ್.

ಇಲ್ಲಿನ ಗುಂಡಿ ಬಿದ್ದ ರಸ್ತೆಯ ಅಕ್ಕ ಪಕ್ಕ ನೀರು ತುಂಬಿ ಸಣ್ಣ ಕೆರೆಯಂತೆ ಇದ್ದು, ಈ ನೀರು ಕೊಳೆತು ಸೊಳ್ಳೆಗಳ ಅವಾಸ ಸ್ಥಾನವಾಗಿದೆ. ರಾತ್ರಿ ಸೊಳ್ಳೆಗಳ ಕಾಟಕ್ಕೆ ಹೆದರಿ ಸಂಜೆಯಾದರೆ ಮನೆಯೊಳಗೆ ಕಾಯಿ ಮಟ್ಟೆಗೆ ಬೆಂಕಿ ಹಾಕಿ ಹೊಗೆ ಹಾಕಬೇಕಾಗಿದೆ ಎನ್ನುತ್ತಾರೆ ಗೀತಾ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಈ ಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ, ಮನೆಗೆ ನೀರು ನುಗ್ಗುತ್ತಿರುವ ವಿಚಾರವನ್ನು  ಪತ್ರ ಮೂಲಕ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇವೆ. ಆದರೆ, ಸಚಿವಾಲಯದಿಂದ ಇಲ್ಲಿಯವರೆಗೂ ಉತ್ತರ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT