ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊರತೆ: ಆಟಗಾರರಿಗೆ ತಪ್ಪದ ಕಿರಿಕಿರಿ

ಮೈದಾನದಲ್ಲಿ ನಡೆಯುವ ಸಮಾವೇಶಗಳಿಂದ ಕ್ರೀಡಾಭ್ಯಾಸಕ್ಕೆ ಅಡ್ಡಿ
Last Updated 16 ಏಪ್ರಿಲ್ 2018, 8:44 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಕ್ರೀಡಾಪಟುಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾ ಪಟುಗಳು ಅಭ್ಯಾಸಕ್ಕೆ ಬರುತ್ತಾರೆ. ಜತೆಗೆ ಪುರುಷರು, ಮಹಿಳೆಯರು, ವೃದ್ಧರು ಮಕ್ಕಳೊಂದಿಗೆ ವಾಯುವಿಹಾರಕ್ಕೆ ಬರುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಶೌಚಾಲಯಗಳ ನಲ್ಲಿಗಳು ಮುರಿದು ಬಿದ್ದಿವೆ, ನಿರ್ವಹಣೆ ಇಲ್ಲದೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ.

ಕ್ರೀಡಾಂಗಣದ ಕಚೇರಿ ಆವರಣದಲ್ಲಿನ ಕುಡಿಯುವ ನೀರಿನ ನಲ್ಲಿಗಳಿಂದ ನೀರು ಸೋರಿಕೆಯಾಗುತ್ತಿದ್ದು, ಈ ಸ್ಥಳದಲ್ಲಿ ತ್ಯಾಜ್ಯ ಬಿಸಾಡಿ ಗಲೀಜು ಮಾಡಲಾಗಿದೆ. ಕ್ರೀಡಾಭ್ಯಾಸದ ನಂತರ ದಾಹ ನೀಗಿಸಿಕೊಳ್ಳಲು ಇದೇ ನೀರನ್ನು ಕುಡಿಯಬೇಕು. ಕಚೇರಿ ಪಕ್ಕ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಅದರಲ್ಲಿ ನೀರು ಇರುವುದಿಲ್ಲ. ಕ್ರೀಡಾಪಟುಗಳು ಮನೆಯಿಂದಲೇ ಬಾಟಲ್ ಗಳಲ್ಲಿ ಕುಡಿಯುವ ನೀರು ತರುತ್ತಿದ್ದಾರೆ.

ವಾಯುವಿಹಾರಕ್ಕೆ ಬರುವ ಸಮಾನ ಮನಸ್ಕರು ‘ಮುಂಜಾನೆ ಮಿತ್ರರು’ ಎಂಬ ಸಂಘಟನೆ ಕಟ್ಟಿಕೊಂಡು, ಕ್ರೀಡಾಂಗಣದ ಕೆಲವು ಕಡೆ ಕಸದ ತೊಟ್ಟಿಗಳನ್ನು ಅಳವಡಿಸಿದ್ದಾರೆ. ಇದರಿಂದ ಕಸದ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಆಗಿದೆ.

ಬೆಳಗಿನ ಜಾವ 5 ಗಂಟೆಯಿಂದಲೇ ಜನರು ಇಲ್ಲಿಗೆ ವಾಯು ವಿಹಾರಕ್ಕೆ ಬರುತ್ತಾರೆ. ಆದರೆ, ಕೆಲವು ಕಡೆ ಬೀದಿ ದೀಪ ಬೆಳಗುವುದಿಲ್ಲ. ಹಲವೆಡೆ ಬಿಡಾಡಿ ನಾಯಿಗಳು ದಾಳಿ ಮಾಡಿರುವ ಕಾರಣ ಭಯದಿಂದ ಓಡಾಡಬೇಕಿದೆ.

‘ಕ್ರೀಡಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಮತ್ತು ಖಾಸಗಿಯವರಿಗೆ ಸಮಾವೇಶ ನಡೆಸಲು ಅವಕಾಶ ನೀಡಲಾಗುತ್ತದೆ. ಸಮಾವೇಶಕ್ಕೂ ಎರಡು ದಿನ ಮೊದಲೇ ವೇದಿಕೆ ಹಾಕುತ್ತಾರೆ. ಕಾರ್ಯಕ್ರಮ ಮುಗಿದ ಮೇಲೆ ವೇದಿಕೆ ತೆರವುಗೊಳಿಸಲು ಒಂದು ದಿನ ಬೇಕಾಗುತ್ತದೆ. ಇದರಿಂದಾಗಿ 3–4 ದಿನ ಕ್ರೀಡಾಪಟುಗಳು ಅಭ್ಯಾಸದಿಂದ ದೂರ ಉಳಿಯಬೇಕಾಗಿದೆ’ ಎಂದು ಕ್ರೀಡಾಪಟು ಗೌತಮ್ ಆರೋಪಿಸುತ್ತಾರೆ.

‘ಕ್ರೀಡಾಂಗಣದಲ್ಲಿ ಅಗತ್ಯ ಸೌಲಭ್ಯ ನೀಡಲಾಗಿದೆ. ಇತ್ತೀಚೆಗೆ ಶೌಚಾಲಯಗಳನ್ನು ರಿಪೇರಿ ಮಾಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶುದ್ಧ ಕುಡಿಯುವ ನೀರು ಘಟಕ ಆರಂಭಿಸಲಾಗಿದೆ. ಸಮಾವೇಶಗಳಿಗೆ ನೀಡುವುದರಿಂದ ಕ್ರೀಡಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂಬ ದೂರು ಅನೇಕ ದಿನಗಳಿಂದ ಇದ್ದು, ಈ ಬಗ್ಗೆ ಗಮನ ಹರಿಸಲಾಗುವುದು’ ಎಂದು ಯುವಜನ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಎಂ. ಸರಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜೆ.ಎಸ್‌.ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT