ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ

ಸಮಯ ಬದಲಾವಣೆ: ಮತ್ತೊಂದು ಅವಕಾಶ ನೀಡುವಂತೆ ಎಸ್‌ಎಫ್‌ಐ ಮನವಿ
Last Updated 16 ಮಾರ್ಚ್ 2023, 15:26 IST
ಅಕ್ಷರ ಗಾತ್ರ

ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪರೀಕ್ಷೆ ವೇಳಾಪಟ್ಟಿಯಲ್ಲಿ ಸಮಯ ಬದಲಾವಣೆ ಎಡವಟ್ಟಿನಿಂದ ಗಾಂಧಿಪುರ ಸರ್ಕಾರಿ ಪದವಿ ಕಾಲೇಜಿನ 23ಕ್ಕೂ ಅಧಿಕ ವಿದ್ಯಾರ್ಥಿಗಳು ಬುಧವಾರ ನಡೆಯಬೇಕಾದ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಸಿಸುತ್ತಿದ್ದ 15 ಹಾಗೂ ಇತಿಹಾಸ ವಿಷಯದ 8 ವಿದ್ಯಾರ್ಥಿಗಳು ತಮಗೆ ನೀಡಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ನಮೂದಿಸಿದಂತೆ, ಮಧ್ಯಾಹ್ನ 2ರಿಂದ ಸಂಜೆ 5ರ ಪರೀಕ್ಷೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಆಗಲೇ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವೆಗೆ ಸಮಯ ನೀಡಿದ್ದ ಅರ್ಥಶಾಸ್ತ್ರ ಹಾಗೂ ಇತಿಹಾಸ ಪರೀಕ್ಷೆ ಮುಗಿಯುವ ಹಂತದಲ್ಲಿತ್ತು. ಇದರಿಂದ ಪರೀಕ್ಷಾರ್ಥಿಗಳು ಕಂಗಾಲಾಗಿ ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡರೂ ಅವಕಾಶ ಕಲ್ಪಿಸಿಲ್ಲ.

'ಪರೀಕ್ಷಾ ಪ್ರವೇಶ ಪತ್ರದಲ್ಲಿ ಇರುವ ಸಮಯದಂತೆ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದೆವು. ಆದರೆ ಅದಾಗಲೇ ಪರೀಕ್ಷೆ ಬಹುತೇಕ ಮುಕ್ತಾಯದ ಹಂತದಲ್ಲಿತ್ತು. ಇದನ್ನು ಪ್ರಾಚಾರ್ಯರ ಬಳಿ ಪ್ರಶ್ನಿಸಿದರೆ, ವಿಶ್ವವಿದ್ಯಾಲಯದಿಂದ ಬಂದ ಬದಲಾದ ವೇಳಾಪಟ್ಟಿ ಸೂಚನಾ ಫಲಕಕ್ಕೆ ಅಂಟಿಸಲಾಗಿದೆ ಎನ್ನುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡರು.

ವಿಷಯ ತಿಳಿದ ತಕ್ಷಣ ಎಸ್‌ಎಫ್‌ಐ ನಿಯೋಗ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲ ಡಾ.ಡಿ.ಟಿ.ಪಾಟೀಲ್ ಅವರೊಂದಿಗೆ ಚರ್ಚಿಸಿ, ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇನ್ನೊಂದು ಅವಕಾಶ ಕೊಡುವಂತೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಗಣೇಶ್ ರಾಠೋಡ್, ಎಸ್‌ಎಫ್‌ಐ ಮುಖಂಡ ವಿವೇಕ್ ಫನಸೆ, ಕಾವ್ಯ ಸೂರದ, ಬಸವರಾಜ ಹೊಂಬಳ, ಕಲ್ಲಪ್ಪ ಹೊಟ್ಟೆಪ್ಪನವರ, ಮಹಮ್ಮದ್ ಕೆ. ಎಣ್ಣಿ, ದರ್ಶನ ಅಂಬಿಗೇರ್, ಚಂದ್ರಶೇಖರಗೌಡ ಕೆ ಪಿ, ಲೋಕೇಶ್ ಹುಚ್ಚಮ್ಮನವರ, ಮಹೇಶ್ ಹುಲ್ಲಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT