ಬುಧವಾರ, ಅಕ್ಟೋಬರ್ 21, 2020
21 °C
ಆರೋಗ್ಯ ಇಲಾಖೆ ವಿರುದ್ಧ ಕರ್ಜಗಿ ಗ್ರಾಮಸ್ಥರ ಆಕ್ರೋಶ

ಹಾವೇರಿ: ಕೋವಿಡ್‌ನಿಂದ 16 ದಿನದಲ್ಲಿ 31 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ 16 ದಿನಗಳಲ್ಲಿ 31 ಮಂದಿ ಮೃತಪಟ್ಟಿದ್ದು ಜನರು ಭಯಭೀತರಾಗಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಮತ್ತು ವೈದ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿತ್ಯ ಒಂದು, ಎರಡು ಸಾವು ಸಂಭವಿಸುತ್ತಿವೆ. ಕೆಲವೊಮ್ಮೆ ಒಂದೇ ದಿನ ನಾಲ್ಕೈದು ಸಾವುಗಳಾಗಿವೆ. ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾವು ಕಡಿತ, ಹೃದಯಾಘಾತ, ವಯೋಸಹಜ ಕಾಯಿಲೆ ಮುಂತಾದ ಕಾರಣಗಳಿಂದ ಜನರು ಸತ್ತಿದ್ದಾರೆ. ಸಣ್ಣಪುಟ್ಟ ಕಾಯಿಲೆ ಇರುವವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮದ ಜನರು ಅಳಲು ತೋಡಿಕೊಂಡಿದ್ದಾರೆ. 

ಸಿಗದ ಚಿಕಿತ್ಸೆ

‘ಕೆಮ್ಮು, ನೆಗಡಿ, ಕಫಾ ಅಂತಾ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಕೋವಿಡ್ ತಪಾಸಣೆ ಮಾಡಿಸಿಕೊಂಡು ಬನ್ನಿ ಎಂದು ವಾಪಸ್ ಕಳುಹಿಸುತ್ತಾರೆ. ಹೀಗಾಗಿ ಗ್ರಾಮಸ್ಥರು ಆಸ್ಪತ್ರೆ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಸಾವಿನ ಸಂಖ್ಯೆ ಹೆಚ್ಚುತ್ತಿದೆ’ ಎಂದು ಗ್ರಾಮದ ವಕೀಲ ನಾರಾಯಣ ಕಾಳೆ ವ್ಯಕ್ತಪಡಿಸಿದರು.

ಧೈರ್ಯ ತುಂಬಲಿ

‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ವೈದ್ಯರ ತಂಡ ಗ್ರಾಮಕ್ಕೆ ಬಂದು ಆರೋಗ್ಯ ಶಿಬಿರ ನಡೆಸಿ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ ನೀಡಬೇಕು. ಜಾಗೃತಿ ಜಾಥಾ ಮಾಡಿ ಜನರಿಗೆ ಧೈರ್ಯ ತುಂಬಬೇಕು. ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಬೇಕು’ ಎಂದು ಊರಿನ ಮುಖಂಡರು ಒತ್ತಾಯಿಸಿದ್ದಾರೆ. 

ಪ್ರಯೋಜನವಾಗಿಲ್ಲ

‘ಖಾಸಗಿ ಆಸ್ಪತ್ರಗಳಲ್ಲಿ ರೋಗಿಗಳನ್ನು ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಸಣ್ಣಪುಟ್ಟ ಕಾಯಿಲೆಗಳಿದ್ದ ವ್ಯಕ್ತಿಗಳು ನರಳಿ ಸಾವನಪ್ಪುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಶೇಖಪ್ಪ ದೂರಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು