ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋಣ್ ಕ್ಯಾಮೆರಾ ಬಳಸಿ ಬೆಳೆಹಾನಿ ಮರುಸಮೀಕ್ಷೆ

ಪ‍್ರಾಥಮಿಕ ವರದಿ ಪ್ರಕಾರ 1.22 ಹೆಕ್ಟೇರ್ ಬೆಳೆ ನಾಶ
Last Updated 23 ಆಗಸ್ಟ್ 2019, 20:31 IST
ಅಕ್ಷರ ಗಾತ್ರ

ಹಾವೇರಿ: ಪ್ರವಾಹದಿಂದ ಜಿಲ್ಲೆಯಲ್ಲಿ 1.22 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿರುವುದು ಜಿಲ್ಲಾಡಳಿತದ ಪ್ರಾಥಮಿಕ ಸಮೀಕ್ಷೆಯಿಂದ ಗೊತ್ತಾಗಿದ್ದು, ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಡ್ರೋಣ್ ಕ್ಯಾಮೆರಾ ಬಳಸಿ ಶುಕ್ರವಾರದಿಂದ ಮರುಸಮೀಕ್ಷೆ ಪ್ರಾರಂಭಿಸಿದ್ದಾರೆ.

‘ಹಾನಿ ಕುರಿತು ಜಿಲ್ಲಾಡಳಿತ ಮಾಡಿರುವ ಸಮೀಕ್ಷೆ ಸರಿಯಾಗಿಲ್ಲ. ವರದಿಯಲ್ಲಿ ಭೂಸವಕಳಿಯ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಹೀಗಾಗಿ, ಮರುಪರಿಶೀಲನೆ ನಡೆಸಿ ಮೂರು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಬೊಮ್ಮಾಯಿ ಗುರುವಾರದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಎಷ್ಟು ನಷ್ಟ: ಕೃಷಿ ಇಲಾಖೆಯ ಪ್ರಾಥಮಿಕ ಸಮೀಕ್ಷೆ ಪ್ರಕಾರ54,575 ಎಕರೆ ಗೋವಿನಜೋಳ, 27,822 ಎಕರೆ ಹತ್ತಿ, 18,016 ಎಕರೆ ಭತ್ತ,13,283 ಎಕರೆ ಶೇಂಗಾ, 6,550 ಎಕರೆ ಸೊಯಾ, 1,041 ಎಕರೆ ಕಬ್ಬು,400 ಎಕರೆ ತೊಗರಿ, 276ಎಕರೆ ಹೆಸರು,56 ಎಕರೆ ಜೋಳ ಹಾಗೂ 24 ಎಕರೆ ರಾಗಿ ಬೆಳೆ ನಷ್ಟವಾಗಿದೆ.

ಶಿಗ್ಗಾವಿ, ಸವಣೂರು ಹಾಗೂ ಹಾನಗಲ್ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೃಷಿ ಬೆಳೆಗಳು ನಾಶವಾಗಿವೆ. ಇನ್ನು 44 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳಗಳ ಪೈಕಿ, 8,215 ಹೆಕ್ಟೇರ್ ಬೆಳೆಗಳು ನೆಲಕಚ್ಚಿವೆ ಎಂದೂ ವರದಿ ಹೇಳುತ್ತದೆ.

‘ಪ್ರವಾಹದಿಂದ 53.84 ಹೆಕ್ಟೇರ್ ರೇಷ್ಮೆ ಬೆಳೆಯೂ ಹಾನಿಯಾಗಿದೆ. 30 ರೇಷ್ಮೆ ಹುಳು ಸಾಕಾಣಿಕೆ ಮನೆಗಳು ಜಲಾವೃತವಾಗಿದ್ದು, ಅವುಗಳ ಹಾನಿಯ ಪರಿಶೀಲನೆ ನಡೆಯುತ್ತಿದೆ. ಹಾವೇರಿ ತಾಲ್ಲೂಕಿನ 10 ಸ್ಥಳಗಳಲ್ಲಿ 2,280 ಹಾಗೂ ಸವಣೂರು ತಾಲ್ಲೂಕಿ
5 ಸ್ಥಳಗಳಲ್ಲಿ 1,170 ಮೊಟ್ಟೆಗಳು (ಒಟ್ಟು ಮೊತ್ತ ₹ 10.43 ಲಕ್ಷ) ನಾಶವಾಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋಣ್ ಅಂತಿಮವಲ್ಲ: ‘ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನಷ್ಟೇ ಆಧರಿಸಿ ವರದಿ ತಯಾರಿಸಬೇಡಿ. ನಿರ್ದಿಷ್ಟವಾಗಿ ಎಷ್ಟು ವ್ಯಾಪ್ತಿಯವರೆಗೆ ಹಾನಿಯಾಗಿದೆ ಎಂಬುದನ್ನು ಅದು ನಿರ್ಧರಿಸುವುದಿಲ್ಲ. ಆ ದೃಶ್ಯಗಳನ್ನು ನೋಡಿ ಹಾನಿಯ ಗಂಭೀರತೆ ತಿಳಿದುಕೊಳ್ಳಿ. ಆ ನಂತರ ಕ್ಷೇತ್ರ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ’ ಎಂದು ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರನ್ವಯ ಸಮಗ್ರ ಸಮೀಕ್ಷೆ ಆರಂಭವಾಗಿದೆ.

40 ಸಾವಿರ ಕೆ.ಜಿ ಅಕ್ಕಿ: ‘ಜಿಲ್ಲೆಯಲ್ಲಿ ಒಟ್ಟು 159 ಪರಿಹಾರ ಕೇಂದ್ರಗಳನ್ನು ತೆರೆಯಾಗಿತ್ತು. 5,324 ಕುಟುಂಬಗಳ 17,415 ಸಂತ್ರಸ್ತರು ಅಲ್ಲಿ ಆಶ್ರಯ ಪಡೆದಿದ್ದರು. ದಾನಿಗಳು ಕಳುಹಿಸಿದ್ದ ಸಾಮಗ್ರಿಗಳ ಹೊರತಾಗಿಯೂ, ಈವರೆಗೆ40 ಸಾವಿರ ಕೆ.ಜಿ ಅಕ್ಕಿ,
4 ಸಾವಿರ ಕೆ.ಜಿ ತೊಗರಿ, 4 ಸಾವಿರ ಕೆ.ಜಿ ಸಕ್ಕರೆ, 4 ಸಾವಿರ ಕೆ.ಜಿ ಉಪ್ಪು,4 ಸಾವಿರ ಲೀಟರ್ ಅಡುಗೆ ಎಣ್ಣೆ ಹಾಗೂ 20 ಸಾವಿರ ಲೀಟರ್ ಸೀಮೆಎಣ್ಣೆಯನ್ನು ಸಂತ್ರಸ್ತರಿಗೆ ಪೂರೈಸಲಾಗಿದೆ’ ಎಂದು ಅಧಿಕಾರಿಗಳು ಲೆಕ್ಕ ಕೊಟ್ಟಿದ್ದಾರೆ.

‘ಹಾನಿಯಾದ ಮನೆಗಳ ಮಾಲೀಕರು ಹಾಗೂ ದಿನಬಳಕೆಯ ಸಾಮಗ್ರಿಗಳನ್ನು ಕಳೆದುಕೊಂಡ ಎಲ್ಲ ಸಂತ್ರಸ್ತರಿಗೂ ತಕ್ಷಣ ₹ 10 ಸಾವಿರ ಪರಿಹಾರ ಕೊಡುವಂತೆ ಸಚಿವರು ಹೇಳಿದ್ದಾರೆ.ಹೀಗಾಗಿ, ತಹಶೀಲ್ದಾರ್‌ಗಳ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಯ ಸಂಖ್ಯೆ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಅವರ ಖಾತೆಗೆಹಣ ಜಮೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದರು.

ಶನಿವಾರ, ಭಾನುವಾರವೂ ಶಾಲೆ

‘ಪ್ರವಾಹದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ದೀರ್ಘಾವಧಿ ರಜೆ ನೀಡಲಾಗಿತ್ತು. ಇದರಿಂದ ಮಕ್ಕಳ ಕಲಿಕೆಗೆ ತೊಂದರೆ ಆಗಿದ್ದು, ಆ ಕೊರತೆ ಸರಿದೂಗಿಸಲು ಸತತವಾಗಿ 4 ಶನಿವಾರ (ಆ.24ರಿಂದ) ಹಾಗೂ 3 ಭಾನುವಾರದ ದಿನಗಳಂದು ಪೂರ್ಣಾವಧಿ ತರಗತಿಗಳನ್ನು ನಡೆಸಬೇಕು. ಹಾಗೆಯೇ, ಉರ್ದು ಶಾಲೆಗಳಿಗೆ ಸತತ 4 ಶುಕ್ರವಾರ (ಆ.23ರಿಂದ) ಹಾಗೂ 3 ಭಾನುವಾರ ಪೂರ್ತಿ ತರಗತಿ ನಡೆಸಬೇಕು’ ಎಂದೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

‘ಈ ಅವಧಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಪಠ್ಯಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ವ್ಯತ್ಯಯ ಕಂಡುಬಂದರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗುವುದು’ ಎಂಬ ಎಚ್ಚರಿಕೆ ಸಹ ಕೊಟ್ಟಿದ್ದಾರೆ.

ಅಧಿಕಾರಿಗಳಿಗೆ ರಜೆ ಇಲ್ಲ

‘ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕಿರುವ ಕಾರಣ ಆ.24 (4ನೇ ಶನಿವಾರ) ಹಾಗೂ ಆ.25ರಂದೂ (ಭಾನುವಾರ) ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು’ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT