ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್ ಬೆಡ್‌‌ ಕೊರತೆಯಾಗದಂತೆ ಎಚ್ಚರವಹಿಸಿ

ಕೋವಿಡ್‌ ಪರೀಕ್ಷೆ ಮತ್ತು ಲಸಿಕೆ ಕಾರ್ಯ ದ್ವಿಗುಣಗೊಳಿಸಿ: ಸಚಿವ ಬಸವರಾಜ ಬೊಮ್ಮಾಯಿ ಸೂಚನೆ
Last Updated 21 ಏಪ್ರಿಲ್ 2021, 16:28 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ, ಆಕ್ಸಿಜನ್, ಬೆಡ್‍ಗಳ ಕೊರತೆಯಾಗದಂತೆ ಎಚ್ಚರವಹಿಸಿ. ಕೋವಿಡ್‌ ಪರೀಕ್ಷೆ ಮತ್ತು ಲಸಿಕೆ ಕಾರ್ಯವನ್ನು ದ್ವಿಗುಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ತಹಶೀಲ್ದಾರ್‌ ಹಾಗೂ ವೈದ್ಯಾಧಿಕಾರಿಗಳೊಂದಿಗೆ ಬುಧವಾರ ಸಂಜೆ ಬೆಂಗಳೂರು ವಿಕಾಸಸೌಧದಿಂದ ಅವರು ‘ವಿಡಿಯೊ ಸಂವಾದ’ ನಡೆಸಿದರು.

ಪ್ರತಿದಿನ ಒಂದೊಂದು ತಾಲ್ಲೂಕಿಗೆ ಪ್ರತ್ಯೇಕವಾಗಿ ಜಿಲ್ಲಾಧಿಕಾರಿ, ಸಿಇಒ ಹಾಗೂ ಎಸ್ಪಿ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಬೇಕು.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇವೆ ಎಂದು ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಕೆ ನೀಡಿದರು.

ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಳಂಬವಾಗಬಾರದು. ದಾಖಲಾದ ಅರ್ಧ ಗಂಟೆಯೊಳಗಾಗಿ ಚಿಕಿತ್ಸೆ ಆರಂಭಿಸಬೇಕು. ಲಸಿಕೆ ಮತ್ತು ಮಾತ್ರೆಗಳ ಕೊರತೆ, ಆಕ್ಸಿಜನ್ ಕೊರತೆ, ಬೆಡ್‍ಗಳ ಕೊರತೆ, ವೆಂಟಿಲೇಟರ್ ಸಮಸ್ಯೆ ಸೇರಿದಂತೆ ಯಾವುದೇ ಕೊರತೆ ಉಂಟಾಗದಂತೆ ಮೂರು ದಿನದೊಳಗಾಗಿ ಎಲ್ಲವನ್ನೂ ಸುಸಜ್ಜಿತಗೊಳಿಸಿಬೇಕು ಎಂದು ಸೂಚನೆ ನೀಡಿದರು.

ನಿತ್ಯ 3 ಸಾವಿರ ಟೆಸ್ಟ್‌ ಮಾಡಿ:

ನಿರಂತರವಾಗಿ ಆರ್.ಟಿ.ಪಿ.ಆರ್. ತಪಾಸಣೆ ನಡೆಸಬೇಕು. ಈಗಿರುವ ಒಂದೂವರೆ ಸಾವಿರ ಗುರಿಯ ಬದಲು ಕನಿಷ್ಠ ಮೂರು ಸಾವಿರ ತಪಾಸಣೆ ನಡೆಸಬೇಕು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ತುರ್ತಾಗಿ ತಪಾಸಣೆಗೆ ಒಳಪಡಿಸಬೇಕು. ಒಬ್ಬ ಪಾಸಿಟಿವ್ ವ್ಯಕ್ತಿಗೆ ಕನಿಷ್ಠ 30 ಜನ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸಬೇಕು. ಹೆಚ್ಚುವರಿ ಲ್ಯಾಬ್ ಟೆಕ್ನಿಷಿಯನ್‍ಗಳ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಕಳ್ಳತನ, ಮಟ್ಕಾ ನಿಯಂತ್ರಿಸಿ:

ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸಭೆ ನಡೆಸಿ ಜಾತ್ರಾ ಸಮಿತಿಗಳ ಮನವೊಲಿಸಿ ಜಾತ್ರೆ ನಡೆಸದಂತೆ ಕ್ರಮವಹಿಸಬೇಕು. ಎಲ್ಲೂ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು. ಕೋವಿಡ್ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗದಂತೆ ಕ್ರಮವಹಿಸಬೇಕು. ಅನಧಿಕೃತ ಕ್ಲಬ್‍ಗಳನ್ನು ಬಂದ್‌ ಮಾಡಬೇಕು. ಮಟ್ಕಾ ಚಟುವಟಿಕೆಗಳನ್ನು ಮುಲಾಜಿಲ್ಲದೆ ಬಂದ್ ಮಾಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಅವರಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿ, 256 ಪಾಸಿಟಿವ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2.80ರಷ್ಟು ಪಾಸಿಟಿವ್ ದರವಿದೆ. ರೆಮಿಡಿಸಿವರ್ ಲಸಿಕೆ ಸೇರಿದಂತೆ ಕೋವಿಡ್ ಲಸಿಕೆ ಕೊರತೆ ಇಲ್ಲ, ಆಕ್ಸಿಜನ್ ಕೊರತೆ ಇಲ್ಲ. ಈಗಾಗಲೇ 150 ಬೆಡ್‍ನ ಬಸಾಪುರ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.ಈ ತಿಂಗಳಲ್ಲಿ ಪೊಲೀಸ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಮಾಸ್ಕ್ ಹಾಕದವರಿಂದ 3.13 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

‘ಟಿಎಚ್‌ಒ’ಗಳಿಗೆ ಸಚಿವರ ತರಾಟೆ

ಶಿಗ್ಗಾವಿ ಮತ್ತು ಸವಣೂರ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಉಭಯ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಸ್ವಚ್ಛತೆ, ಚಿಕಿತ್ಸೆಗೆ ಬರುವ ಸಾರ್ವಜನಿಕರನ್ನು ನಿರ್ಲಕ್ಷ್ಯದಿಂದ ಕಾಣುತ್ತಿರುವ ಕುರಿತಂತೆ ದೂರುಗಳು ಬರುತ್ತಿವೆ. ಈ ಕುರಿತಂತೆ ತಹಶೀಲ್ದಾರ್‌ಗಳು ಪರಿಶೀಲಿಸಿ ಕೊರತೆ ನೀಗಿಸಲು ತುರ್ತು ಕ್ರಮವಹಿಸಬೇಕೆಂದು ತಾಕೀತು ಮಾಡಿದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್‌, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ ಹಾಗೂ ಶಿವಾನಂದ ಉಳ್ಳಾಗಡ್ಡಿ, ಡಿಎಚ್‌ಒ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT