ಸೋಮವಾರ, ಫೆಬ್ರವರಿ 24, 2020
19 °C

ಸಂಪರ್ಕ ಸಾಧನದಿಂದ ಸಂಬಂಧ ದೂರ: ಚಂದ್ರಶೇಖರ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಸಂಪರ್ಕ ಸಾಧನಗಳಿಗೆ ಅಂಟಿಕೊಳ್ಳುವ ಇಂದಿನ ಯುವಜನತೆಯು ಮಾನವೀಯ ಸಂಬಂಧಗಳಿಂದ ದೂರವಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು. 

ನಗರದ ನೌಕರರ ಭವನದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಜೊತೆಗೇ ಹೆಚ್ಚಾದ ನಂಟು ಹೊಂದಿರುವ ಇಂದಿನ ಪೀಳಿಗೆಯ ಮಧ್ಯೆ ಇರುವ ಹೊಸ ಸಾಹಿತಿಗಳೂ ಅನೇಕ ಗೊಂದಲದಿಂದ ಕೂಡಿದ್ದಾರೆ ಎಂದರು.

ಆರು ದಶಕಗಳ ಬಳಿಕ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಂದು ಕುವೆಂಪು ಅಧ್ಯಕ್ಷತೆ ವಹಿಸಿದ್ದರು. ಆಗ ನಾನು ಹಾವೇರಿಯಲ್ಲಿ ಪ್ರೌಢಶಾಲೆ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿಗೆ ಸೇರಿಕೊಂಡಿದ್ದೆನು. ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆನು. ಇಂದು, ಅದೇ ನೆಲದಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಕಂಬಾರರು ಆಯ್ಕೆಯಾಗಿರುವುದು ಸಂತಸ ನೀಡಿದೆ ಎಂದರು.

ಗದಗದಲ್ಲಿ ‘ಸಂಕ್ರಮಣ ಸಾಹಿತ್ಯ ಬಳಗ’ದ ಉದ್ಘಾಟನೆ ಮಾಡಲಾಗಿದೆ. ಹಾವೇರಿ ಹಾಗೂ ವಿವಿಧ ಜಿಲ್ಲೆಗಳಲ್ಲಿಯೂ ಬಳಗಗಳನ್ನು ಸ್ಥಾಪಿಸಲಾಗುವುದು. ಯುವ ಸಾಹಿತಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕವಿಗೋಷ್ಠಿ, ಲೇಖನಗಳ ಕುರಿತು ಚರ್ಚೆ, ಸಂವಾದ, ಅಭಿಪ್ರಾಯಗಳನ್ನು ಮಂಡಿಸುವ ಅವಕಾಶ ಸೃಷ್ಟಿಸಲಾಗುವುದು. ಯುವ ಸಾಹಿತಿಗಳ ಕೃತಿ, ಕಾದಂಬರಿ, ಪುಸ್ತಕಗಳನ್ನು ಪ್ರಕಟಿಸಿ, ಸಾಹಿತ್ಯದ ನೆಲೆಯನ್ನು ಗಟ್ಟಿಗೊಳಿಸಲಾಗುವುದು ಎಂದರು.

ಲೇಖಕ ಗಂಗಾಧರ ಕೊಳಗಿ ಮಾತನಾಡಿ, ಸಾಹಿತ್ಯ ವಲಯದಲ್ಲಿ ಒಂದು ರೀತಿಯ ಶೂನ್ಯ ನಿರ್ಮಾಣವಾಗಿದೆ. ಅದು ತನ್ನ ಉದ್ದೇಶವನ್ನು ಮರೆತು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ ಆಲದಕಟ್ಟಿ, ಸಾಹಿತಿ ಸತೀಶ ಕುಲಕರ್ಣಿ, ಡಾ.ಜಾನ್‌ ದೇವಧರ್, ರೇಣುಕಾ ಗುಡಿಮನಿ, ಧರಣೇಂದ್ರ ಕುಲಕರ್ಣಿ, ಪ್ರಕಾಶ ಮನ್ನಂಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು