ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: ಸಮುದಾಯ ಭವನದಲ್ಲಿ ಮಕ್ಕಳ ಕಲಿಕೆ!

ಮೂಲಸೌಕರ್ಯ ವಂಚಿತ ಸರ್ಕಾರಿ ಶಾಲೆ: ಜಾಗದ ಕೊರತೆಯಿಂದ ಮಕ್ಕಳ ವರ್ಗಾವಣೆ
Last Updated 8 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹಿರೇಕೆರೂರು: ಪಟ್ಟಣದ ಚೌಡೇಶ್ವರಿ ನಗರದಲ್ಲಿ ಹಳೆಯ ಸಮುದಾಯ ಭವನದಲ್ಲಿ ನಡೆಯುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಗತ್ಯ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಸುಮಾರು 22 ವರ್ಷಗಳ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣಗೊಂಡಿರುವ ಸಮುದಾಯ ಭವನದಲ್ಲಿ 2006ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ. ಸಮುದಾಯ ಭವನದ ಕಟ್ಟಡ ಕೂಡ ಶಿಥಿಲಗೊಳ್ಳುತ್ತಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ನಡೆಯಬೇಕು. ಆದರೆ, ಇಲ್ಲಿ 4ನೇ ತರಗತಿವರೆಗೆ ಮಾತ್ರ ನಡೆಯುತ್ತಿದೆ.

‘34 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಥಳಾವಕಾಶ ಇಲ್ಲದೇ ಇರುವುದರಿಂದ 5ನೇ ತರಗತಿ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿ, ಸಮೀಪದ ಶಾಲೆಗೆ ಕಳುಹಿಸಲಾಗಿದೆ’ ಎಂದು ಶಿಕ್ಷಕಿ ಎಸ್.ಎ.ದೊಡ್ಡಮನಿ ತಿಳಿಸಿದರು.

‘ಕಿರಿದಾಗಿರುವ ಸ್ಥಳದಲ್ಲಿ ಬಡ ಮಕ್ಕಳು ಓದುತ್ತಿದ್ದಾರೆ. ಶಾಲಾ ಆವರಣ, ಆಟದ ಮೈದಾನ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೇ ಮಕ್ಕಳು ವಂಚಿತರಾಗುತ್ತಿದ್ದಾರೆ. ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿ, ಎಲ್ಲ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ, ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು‌ ಚೌಡೇಶ್ವರಿ ನಗರದ ನಿವಾಸಿ ಹಸನ್‌ ನದಾಫ್ ಆಗ್ರಹಿಸಿದರು.

‘ಇದೇ ಕಟ್ಟಡದ ಒಂದು ಭಾಗದಲ್ಲಿ ಅಂಗನವಾಡಿ ಸಹ ನಡೆಯುತ್ತಿದೆ. ಕಿರಿದಾದ ಜಾಗದಲ್ಲಿ ಅನೇಕ ಮಕ್ಕಳನ್ನು ನಿಭಾಯಿಸಬೇಕಿದೆ. 2004ರಲ್ಲಿ ಆರಂಭವಾಗಿರುವ ಈ ಅಂಗನವಾಡಿಯಲ್ಲಿ 24 ಮಕ್ಕಳಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಮಮತಾ ಸಿರಿಗೇರಿ ತಿಳಿಸಿದರು.

ಚೌಡೇಶ್ವರಿ ನಗರದ ಮುಖ್ಯ ರಸ್ತೆಯಲ್ಲಿ ಇನ್ನೊಂದು ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿ 34 ಮಕ್ಕಳು ಓದುತ್ತಿದ್ದಾರೆ. ಸರ್ಕಾರದ ನಿವೇಶನ ಸಿಕ್ಕರೆ ಹೊಸ ಕಟ್ಟಡ ನಿರ್ಮಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದರೆ, ನಿವೇಶನ ಲಭ್ಯವಾಗುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಅನುಪಮಾ ಗಿರಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT