ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ’

Last Updated 14 ಆಗಸ್ಟ್ 2021, 16:48 IST
ಅಕ್ಷರ ಗಾತ್ರ

ಹಾವೇರಿ: ‘ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ಜಾರಿ ಮಾಡಿಹಾಗೂ ಹಾವೇರಿ ಜಿಲ್ಲೆಗೆ ಮಂಜೂರಾಗಿರುವ ಜವಳಿ ಪಾರ್ಕ್ ಆರಂಭಿಸಿ’ ಎಂದು ಒತ್ತಾಯಿಸಿನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ಸರ್ಕಾರಗಳು ರೂಪಿಸುತ್ತಿರುವ ನೀತಿಗಳು, ಆಡಳಿತದ ವೈಫಲ್ಯಗಳಿಂದಾಗಿ ನಿರುದ್ಯೋಗದ ದರ ಸ್ವತಂತ್ರ ಭಾರತದಲ್ಲಿ ಎಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದರಿಂದ ತಮ್ಮ ಅರ್ಹತೆಗೆ ಯೋಗ್ಯವಾದ ಉದ್ಯೋಗ, ಬದುಕಿನ ಭದ್ರತೆಗೆ ಬೇಕಾದ ಆದಾಯ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.70 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಬಿದ್ದಿವೆ. ಖಾಸಗಿ ಉದ್ಯಮಗಳು ಕಾರ್ಮಿಕರನ್ನು ಬಳಸಿ ಬಿಸಾಕುವ ನೀತಿ ಅನುಸರಿಸುತ್ತಿವೆ. ಗುತ್ತಿಗೆ ಪದ್ಧತಿಗಳು ಜೀತಪದ್ಧತಿಯ ಹೊಸ ರೂಪದಂತೆ ಮಾರ್ಪಾಡಾಗಿವೆ. ಜೀವನ ನಿರ್ವಹಣೆಗೆ ಬೇಕಾದ ವೇತನ, ಉದ್ಯೋಗ ಭದ್ರತೆ ಇಲ್ಲದೆ ಅಮಾನವೀಯ ದುಡಿಮೆ ಮಾಡುವಂತಾಗಿದೆ ಎಂದರು.

ಸಣ್ಣ ಉದ್ಯಮಗಳು ಸರ್ಕಾರದ ನೀತಿಗಳಿಂದ ಮುಚ್ಚಲ್ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ, ಕೈಗಾರಿಕೆಗಳ ಸ್ಥಾಪನೆಯ ದೃಷ್ಟಿಕೋನ ಸರ್ಕಾರಗಳಲ್ಲಿ ಇಲ್ಲವೇ ಇಲ್ಲ ಎಂಬಂತಾಗಿದೆ. ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ನೇಮಕಾತಿಯ ಸಂದರ್ಭ ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ ಹೊರಗಿನವರಿಗೆ ಮಣಿ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಫ್ಐ ಮುಖಂಡರಾದ ನಾರಾಯಣ ಕಾಳೆ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹಿಡಿದು ಹೊರ ಬರುವ ವಿದ್ಯಾವಂತ ಯುವ ಜನರು ತಮ್ಮ ಪದವಿಗೆ ಯೋಗ್ಯವಾದ ಉದ್ಯೋಗ ಇಲ್ಲದೆ ನರಳುತ್ತಿದ್ದಾರೆ’ ಎಂದು ಹೇಳಿದರು.

ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಅಂಗವಿಕಲ ಸಂಘಟನೆ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಶಶಿಧರ್ ಬಂಗಾರಿ, ಡಿವೈಎಫ್ಐ ಮುಖಂಡರಾದ ಮಲ್ಲೇಶ ಗೋಟನವರ, ಮಹೇಶ ನರೆಗಲ್, ಅರುಣ್ ಕಡಕೋಳ, ಶಿವರಾಜ ದೇವಿಹೊಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT