ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ ನೌಕರರ ಕಾಯಮಾತಿಗೆ ಆಗ್ರಹ

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ
Last Updated 11 ಡಿಸೆಂಬರ್ 2018, 14:12 IST
ಅಕ್ಷರ ಗಾತ್ರ

ಹಾವೇರಿ:ಹಾಲಿ ಹುದ್ದೆಗಳಲ್ಲೇ ಕಾಯಮಾತಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸರ್ಕಾರಿ ದಿನಗೂಲಿ ನೌಕರರು ಮಂಗಳವಾರ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿಕೊಟ್ಟರು.

ರ್‍ಯಾಲಿ ಮೂಲಕ ನಗರದ ಪ್ರವಾಸಿ ಮಂದಿರದಿಂದಸಿದ್ದಪ್ಪ ಹೊಸಮನಿ ವೃತ್ತಕ್ಕೆ ಬಂದ ನೌಕರರು, ಅಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಧರಣಿ ಕುಳಿತು ನೇರ ನೇಮಕಾತಿ ನಿಲ್ಲಿಸಿ, ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಎಂದು ಆಗ್ರಹಿಸಿದರು.

ಕರ್ನಾಟಕ ನಾಗರಿಕ ಸೇವಾ ನಿಯಮಗಳ 247ಎ ಪ್ರಕಾರ ಕಾಯಂಗೊಂಡ ಹಾಗೂ ನಿವೃತ್ತಿಯಾದ ದಿನಗೂಲಿ ನೌಕರರ ಹೆಚ್ಚುವರಿ ಅರ್ಹತಾ ಸೇವೆಯಲ್ಲಿನ ತಾರತಮ್ಯ ನಿವಾರಿಸಬೇಕು. ನಿವೃತ್ತರಾದವರಿಗೆ 8 ವರ್ಷಗಳ ಗರಿಷ್ಠ ಅರ್ಹತಾ ಸೇವೆಯನ್ನು ನೀಡಬೇಕು. ದಿನಗೂಲಿ ನೌಕರರನ್ನು ಕಾಯಂ ಮಾಡಿ, 6ನೇ ವೇತನ ಆಯೋಗದ ಪರಿಷ್ಕೃತ ವೇತನವವನ್ನು ನೀಡಬೇಕು. ಅರ್ಹ ದಿನಗೂಲಿ ನೌಕರರಿಗೆ ನೂತನ ಪಿಂಚಣಿ ಯೋಜನೆಯು 2013 ಫೆಬ್ರುವರಿ 15ಕ್ಕೆ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು. ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆಯು ಶೇ 100ರಷ್ಟು ಜಾರಿಯಾಗಬೇಕು. ಗಳಿಕೆ ರಜೆಯ ನಗದೀಕರಣಕ್ಕೆ ಆದೇಶಿಸಬೇಕು. ಅನುಕಂಪದ ನೌಕರಿಯ ಸೌಲಭ್ಯ ವಿಸ್ತರಿಸಬೇಕು. ದಿನಗೂಲಿ ನೌಕರರನ್ನು ಖಾಲಿಯಿರುವ ವಿವಿಧ ಹುದ್ದೆಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಹೊರ ಹಾಗೂ ಒಳ ಗುತ್ತಿಗೆ ನೌಕರರಿಗೆ, ವಿಶೇಷವಾಗಿ ಇತರೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಸೇವೆಯನ್ನು ನಿರಂತರವಾಗಿ ವಿಸ್ತರಿಸಲು ಆದೇಶ ಹೊರಡಿಸಬೇಕು. ಗುತ್ತಿಗೆ ನೌಕರರಿಗೆ ಕಾಯಂ ನೌಕರರ ವೇತನವನ್ನೇ ನೀಡಬೇಕು. ಗುತ್ತಿಗೆ ನೌಕರರನ್ನು ಕೆಲಸ ಮಾಡುವ ಹುದ್ದೆಯಲ್ಲೇ ಕಾಯಂ ಮಾಡಬೇಕು. ಹೊರ ಹಾಗೂ ಒಳಗುತ್ತಿಗೆ ಪದ್ದತಿಗಳನ್ನು ರದ್ದುಗೊಳಿಸಬೇಕು. ಗುತ್ತಿಗೆ ನೌಕರರ ಸ್ಥಳಗಳಿಗೆ ನೇರ ನೇಮಕಾತಿಯನ್ನು ಸ್ಥಗಿತಗೊಳಿಸಬೇಕು. ಗುತ್ತಿಗೆ ನೌಕರರನ್ನೆಲ್ಲಾ ಕಾಯಂ ನೌಕರರಾಗಿ ವಿಲೀನ ಮಾಡಿದ ಬಳಿಕ ಉಳಿಯುವ ಹುದ್ದೆಗಳಿಗೆ ಮಾತ್ರ ನೇರ ನೇಮಕಾತಿ ಮಾಡಬಹುದು ಎಂದು ಮನವಿಯಲ್ಲಿ ಒತ್ತಾಯಿಸಿದರು.

ದಿನಗೂಲಿ ನೌಕರರ ಮಹಾಮಂಡಲದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಡೊಂಗಿ, ಪದಾಧಿಕಾರಿಗಳಾದ ರಾಜೇಂದ್ರ ಭಜಂತ್ರಿ, ಸುಭಾಸ ಕ್ಯಾಲಕೊಂಡ, ಶಿವಯ್ಯ ಗಡ್ಡದವರ, ರೂಪಾ ಹುಣಸಿಮರದ, ದುರ್ಗಮ್ಮ ಹಿರೇಕೆರೂರ, ಮಾರುತಿ ದೇವಿಹೊಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT