ಆರ್ಥಿಕತೆ ಅಂದ ಹೆಚ್ಚಿಸಿದ ಚೆಂಡು ಹೂ

7

ಆರ್ಥಿಕತೆ ಅಂದ ಹೆಚ್ಚಿಸಿದ ಚೆಂಡು ಹೂ

Published:
Updated:
Deccan Herald

ರಾಣೆಬೆನ್ನೂರು: ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಕಾಡಿದ ಬರ, ಅನಿಯಂತ್ರಿತ ಮಳೆಯ ಪರಿಣಾಮ ರೈತರು ದೀರ್ಘಾವಧಿ ಹಾಗೂ ಅಧಿಕ ನೀರು ಬೇಡುವ ಬೆಳೆಗಳನ್ನು ಕೈ ಬಿಡುವ ಹಂತಕ್ಕೆ ಬಂದಿದ್ದಾರೆ.

ಈ ನಡುವೆಯೇ ತಾಲ್ಲೂಕಿನ ಮೇಡ್ಲೇರಿಯ ಮಂಜುನಾಥ ಕೊಟ್ರಬಸಪ್ಪ ಮುಂಡಾಸದ ಹಾಗೂ ಪುತ್ರರಾದ ಚನ್ನಬಸಪ್ಪ ಮುಂಡಾಸದ ಮತ್ತು ಕೊಟ್ರೇಶ ಮುಂಡಾಸದ ಅವರು ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ಕೃಷಿ ಪದ್ಧತಿಯನ್ನು ರೂಢಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ಮಗ ಚನ್ನಬಸಪ್ಪ ಎಂ.ಎ. ಪದವೀಧರರು. ಆದರೆ, ಕೈ ಹಿಡಿದಿದ್ದು ಕೃಷಿಯನ್ನು. ಕೃಷಿಯಲ್ಲಿ ಸಾಧನೆ ಮಾಡುವ ಛಲ ಹೊಂದಿದ ಅವರು, ತಮ್ಮ ಒಟ್ಟು 14 ಎಕರೆ ಭೂಮಿಯ ಪೈಕಿ ತಮ್ಮ 2.5 ಎಕರೆ ಜಮೀನಿನಲ್ಲಿ ₹10 ಸಾವಿರ ಖರ್ಚು ಮಾಡಿ ಚೆಂಡು ಹೂ ಬೆಳೆದಿದ್ದಾರೆ. ಅದರ ಜೊತೆ ಹೈನುಗಾರಿಕೆ ಮಾಡುತ್ತಾ ಉತ್ತಮ ಆದಾಯ ಪಡೆಯುತ್ತಿದ್ದಾರೆ.

‘ವಾರಕ್ಕೆ 5.5 ಟನ್ ಚೆಂಡು ಹೂವನ್ನು ಹರಿಹರ ತಾಲ್ಲೂಕಿನ ತೆಲಗಿ ಗ್ರಾಮದಲ್ಲಿರುವ ಖಾಸಗಿ ಕಂಪನಿಯೊಂದಕ್ಕೆ ಕೊಡುತ್ತೇವೆ. ಉತ್ತಮ ಮಳೆಯಾದರೆ ಎಕರೆಗೆ 12 ಟನ್‌ ವರೆಗೂ ಇಳುವರಿ ಬರುತ್ತದೆ. ಮಳೆ ಕೊರತೆಯಿದ್ದರೂ 5 ರಿಂದ 6 ಟನ್‌ ಗ್ಯಾರೆಂಟಿ. ಒಂದು ಟನ್‌ ಹೂ ಕಟಾವು ಮಾಡಲು ಕನಿಷ್ಠ 4 ಆಳುಗಳು ಬೇಕಾಗುತ್ತಾರೆ. ಎಕರೆಗೆ ₹50 ಸಾವಿರದಿಂದ ₹1ಲಕ್ಷ ಆದಾಯ ಗಳಿಸಬಹುದು’ ಎನ್ನುತ್ತಾರೆ ಚನ್ನಬಸಪ್ಪ ಮುಂಡಾಸದ

‘ಚೆಂಡು ಹೂವಿನ ಕೃಷಿಯಲ್ಲಿ ಕ್ರಿಮಿನಾಶಕ ಸಿಂಪರಣೆ, ಕಳೆ ತೆಗೆಯುವ ಖರ್ಚು ಇಲ್ಲ. ನಿರ್ವಹಣೆ ಸುಲಭವಾಗಿದೆ. ಇದನ್ನು ಕೇವಲ ಅಂದಕ್ಕಾಗಿ ಮಾತ್ರವಲ್ಲ, ಕಾರ್ಖಾನೆಯಲ್ಲಿ ಸಂಸ್ಕರಿಸಿ, ತೈಲ ತೆಗೆದು ವಿದೇಶಕ್ಕೆ ರಪ್ತು ಮಾಡಲಾಗುತ್ತದೆ. ಹೀಗಾಗಿ ವಿವಿಧ ಕಂಪೆನಿಗಳು ಬೀಜ, ಗೊಬ್ಬರಗಳನ್ನು ಒದಗಿಸಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೂವನ್ನು ಅವರೇ ಖರೀದಿಸುತ್ತಾರೆ. ಪ್ರತಿ ವಾರಕ್ಕೊಮ್ಮೆ ಹಣ ನೀಡುತ್ತಾರೆ’ ಎಂದು ಅವರು ವಿವರಿಸಿದರು.

ಪೇರಲ ಹಣ್ಣಿನ ಸಾವಯವ ಕೃಷಿ:
ತಮ್ಮ 2 ಎಕರೆ ಜಮೀನಿನಲ್ಲಿ ಜಲಾನಯನ ಯೋಜನೆ ಮೂಲಕ ಸಾವಯವ ಕೃಷಿ ಮಾಡಿದ್ದಾರೆ. ಅಲ್ಲಿ 250 ಪೇರಲ ಹಣ್ಣಿನ ಗಿಡ ಬೆಳೆದಿದ್ದಾರೆ. ಇವು 6 ವರ್ಷಗಳಿಂದ ಫಲ ನೀಡುತ್ತಿವೆ.

‘ಸಣ್ಣ ವ್ಯಾಪಾರಸ್ಥರಿಗೆ ಪೇರಲ ಮಾರುತ್ತೇವೆ. ಇದರಿಂದ ಬರುವ ಆದಾಯವು ಮನೆಯ ಖರ್ಚಿಗೆ ಸಾಕಾಗುತ್ತದೆ. ಅಲ್ಲದೇ, ತರಕಾರಿಯನ್ನೂ ಬೆಳೆಯುತ್ತೇವೆ. ಜಮೀನಿನ ಸುತ್ತ ಹುಣಸೆ, ತೆಂಗು, ಮಾವು, ಕರಿಬೇವು ಹಚ್ಚಿದ್ದೇವೆ’ ಎಂದರು.

‘ನಮ್ಮ ಮಿತಿಗಿಂತ ಹೆಚ್ಚು ಸಾಲ ಮಾಡಬಾರದು. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಅಲ್ಲದೇ ದೀರ್ಘಾವಧಿ ಬೆಳೆ ಬೆಳೆದರೆ ಕೊಳವೆಬಾವಿಯನ್ನು ಅವಲಂಬಿಸಬೇಕಾಗುತ್ತದೆ. ಏಕೆ ಬೆಳೆಯಿಂದ ಭೂಮಿ ಫಲವತ್ತತೆ ಕುಂಠಿತಗೊಳ್ಳುತ್ತದೆ. ಅದಕ್ಕಾಗಿ, ಕಡಿಮೆ ನೀರು, ಸಾಲ ರಹಿತ, ಮಿಶ್ರ ಬೆಳೆ, ಯಾಂತ್ರೀಕರಣ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿಕೊಂಡು ಮಾರುಕಟ್ಟೆಯ ಫಾಲೋಅಪ್‌ ಮಾಡಬೇಕು. ಕೃಷಿ– ತೋಟಗಾರಿಕೆ ಇಲಾಖೆಗಳ ಸಬ್ಸಿಡಿ, ಸೌಲಭ್ಯಗಳನ್ನೂ ಪಡೆಯಬೇಕು‘ ಎನ್ನುತ್ತಾರೆ ರೈತ ಮಂಜುನಾಥ ಕೊಟ್ರಬಸಪ್ಪ ಮುಂಡಾಸದ.

ಹಬ್ಬಗಳಲ್ಲಿ ಬೇಡಿಕೆ ಹೆಚ್ಚು

ಈ ಬಾರಿ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ 300 ಎಕರೆಗೂ ಹೆಚ್ಚು ಚೆಂಡು ಹೂ‌ ಬೆಳೆದಿದ್ದು, ಮೇಡ್ಲೇರಿ ಹೋಬಳಿಯಲ್ಲಿ ಹೆಚ್ಚು ಇದೆ. ಇದು, ಅಲ್ಪಾವಧಿ ಬೆಳೆಯಾಗಿದ್ದು, ಕಡಿಮೆ ನೀರಿನ ಪ್ರದೇಶದಲ್ಲಿ ಬೆಳೆಯಬಹುದು. ಖರ್ಚು ಕಡಿಮೆಯಾಗಿದ್ದು, ಹೆಚ್ಚು ಆದಾಯವಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನೂರಅಹ್ಮದ ಹಲಗೇರಿ.

ಚೆಂಡು ಹೂವನ್ನು ಕೀಟನಾಶಕ, ಬಣ್ಣ, ಔಷಧಿ ಹಾಗೂ ಕೋಳಿ ಆಹಾರದಲ್ಲಿ ಕೂಡ ಬಳಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಾಗುತ್ತದೆ.ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದಲ್ಲಿ ಬೇಡಿಕೆ ಏರುತ್ತಲೇ ಹೋಗುತ್ತದೆ. ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !