ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್‌ ಕಡ್ಡಾಯ: ಚಾಲಕರ ಪರದಾಟ

ಹಣ ತುಂಬಿಸಿಕೊಂಡು ವಾಹನ ಬಿಡುವಂತೆ ಆಗ್ರಹ: ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ
Last Updated 16 ಫೆಬ್ರುವರಿ 2021, 16:42 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ನಾಕಾದಲ್ಲಿ ಮಂಗಳವಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಅಳವಡಿಸದ ವಾಹನಗಳನ್ನು ಹೆದ್ದಾರಿ ಬದಿಗೆ ನಿಲ್ಲಿಸಿರುವ ದೃಶ್ಯ ಕಂಡು ಬಂದಿತು.

ಫಾಸ್ಟ್ಯಾಗ್‌ ಅಳವಡಿಸದ ವಾಹನ ಚಾಲಕರು ಮತ್ತು ಟೋಲ್‌ ಗೇಟ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಹಣ ತುಂಬಿ ವಾಹನ ಬಿಡುವಂತೆ ಚಾಲಕರು ಒತ್ತಾಯಿಸಿದರು. ಆದರೆ, ಸಿಬ್ಬಂದಿ ಅವಕಾಶ ಕೊಡದ ಕಾರಣ ಗೊಂದಲ ಉಂಟಾಯಿತು.

‘ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿ ಪ್ರಕಾರ ನಗದು ಹಣ ತುಂಬಿಸಿಕೊಳ್ಳುವುದಿಲ್ಲ. ಪ್ರತಿ ವಾಹನ ಚಾಲಕರು ಕಡ್ಡಾಯವಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳಬೇಕು. ಫಾಸ್ಟ್ಯಾಗ್ ಇಲ್ಲದ ವಾಹನ ಚಾಲಕರು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇಂದಿನಿಂದ ಕಡ್ಡಾಯಗೊಳಿಸಲಾಗಿದೆ’ ಎಂದು ಬಂಕಾಪುರ ಟೋಲ್ ನಾಕಾ ಮ್ಯಾನೇಜರ್ ಎಸ್.ಎಸ್. ಬೆಂಡಿಗೇರಿ ತಿಳಿಸಿದರು.

ವಾಹನ ಚಾಲಕರು ಫಾಸ್ಟ್ಯಾಗ್ ಅಳವಡಿಕೆಯಿಂದ ಇಂಧನ ಉಳಿತಾಯ, ಪರಿಸರ ಮಾಲಿನ್ಯ ತಡೆಯಲು ಸಾಧ್ಯವಿದೆ. ಅಲ್ಲದೆ ಸಮಯ ಉಳಿತಾಯವಾಗುತ್ತದೆ. ನಗದು ಹಣವಿಲ್ಲದೆ ಪ್ರತಿ ಟೋಲ್‌ ನಾಕಾದಲ್ಲಿ ಸರತಿಯಿಲ್ಲದೆ ಸುಲಭವಾಗಿ ಸಾಗಬಹುದು. ಅಲ್ಲದೆ ಸುತ್ತಲಿನ 20 ಕಿ.ಮೀ. ಯಲ್ಲಿನ ವೈಟ್ ಬೊರ್ಡ್ ಹೊಂದಿರುವ ವಾಹನ ಚಾಲಕರಿಗೆ ₹275 ರೂಪಾಯಿ ತಿಂಗಳ ಪಾಸ್ ನೀಡಲಾಗುತ್ತಿದೆ. ರಾಷ್ಟ್ರೀಯ ಪರವಾನಗಿ ಪಡೆದ ಹಾವೇರಿ ಜಿಲ್ಲಾ ವಾಹನಗಳಿಗೆ ಶೇ 50 ರಿಯಾಯತಿ ನೀಡಲಾಗುತ್ತಿದೆ ಎಂದು ಹೇಳಿದರು.

ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಇನ್ನೂ ಸಮಯಾವಕಾಶ ಕಲ್ಪಿಸಬೇಕು. ದಿಢೀರ್‌ ಫಾಸ್ಟ್ಯಾಗ್ ಅಳವಡಿಸಿಕೊಳ್ಳಬೇಕು ಎಂದರೆ ಹೇಗೆ ಸಾಧ್ಯ. ಫಾಸ್ಟ್ಯಾಗ್ ಮಾಡಿಸುವ ಸಂಬಂಧಿತ ದಾಖಲಾತಿ ಒದಗಿಸಲು ಮತ್ತು ಹಣ ಹೊಂದಾಣಿಕೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ನಗದು ಶುಲ್ಕ ಪಾವತಿಸಿಕೊಂಡು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಾಲ್ಲೂಕಿನ ಶೀಲವಂತ ಸೋಮಾಪುರ ಗ್ರಾಮದ ವಾಹನ ಚಾಲಕ ಮಹಬೂಬ ನಾಕಾಬಂದಿ ಮತ್ತು ಇತರ ಚಾಲಕರು ಒತ್ತಾಯಿಸಿದರು.

ಫಾಸ್ಟ್ಯಾಗ್ ಇಲ್ಲದ ವಾಹನಗಳು ಗಂಟೆಗಟ್ಟಲೆ ಕಾದು, ಮರಳಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT