ಭಾನುವಾರ, ಸೆಪ್ಟೆಂಬರ್ 26, 2021
28 °C
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಸರ್ಕಾರಿ ಗೌರವದೊಂದಿಗೆ ರಾಜಶೇಖರ ಸಿಂಧೂರ ಅಂತ್ಯಕ್ರಿಯೆ: ಕಂಬನಿ ಮಿಡಿದ ಸವಣೂರ ಜನ

ಗಣೇಶಗೌಡ ಎಂ.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಸವಣೂರ: ಶಿಗ್ಗಾವಿ–ಸವಣೂರ ಕ್ಷೇತ್ರದ ಮಾಜಿ ಶಾಸಕ, ರೈತರ ಕಣ್ಮಣಿ ರಾಜಶೇಖರ ಸಿಂಧೂರ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವದೊಂದಿಗೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಶನಿವಾರ ನೆರವೇರಿತು.

ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ದರ್ಶನವನ್ನು ಪಡೆದ ಸಾರ್ವಜನಿಕರು ಕಂಬನಿ ಮಿಡಿದು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. 

ಸಚಿವರಾದ ಬಿ.ಸಿ.ಪಾಟೀಲ, ಸಿ.ಸಿ.ಪಾಟೀಲ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಿಜೋತ್ಪನ್ನ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮೆಣಸಿನಕಾಯಿ, ಧಾರವಾಡ ಕೆಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ವೈ.ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮಾಜಿ ಶಾಸಕರ ಅಂತಿಮ ದರ್ಶನ ಪಡೆದರು.

ಬಡ ಕುಟುಂಬಗಳ ಅನ್ನದಾತ: ಸವಣೂರಿನ ಗಣ್ಯ ವರ್ತಕ ಗುರುಸಿದ್ದಪ್ಪ ಸಿಂಧೂರ ಮತ್ತು ಲಲಿತಾದೇವಿ ದಂಪತಿಯ ಸುಪುತ್ರರಾಗಿ 1962ರ ಅಕ್ಟೋಬರ್‌ 22ರಂದು ರಾಜಶೇಖರ ಸಿಂಧೂರ ಜನಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಸವಣೂರ ನಗರದಲ್ಲಿ ಮುಗಿಸಿ ನಂತರ ತಂದೆಯೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಂಡು, ಸಾವಿರಾರು ಬಡ ಕುಟುಂಬಗಳಿಗೆ ಅನ್ನದಾತರಾಗಿದ್ದರು.

ರಾಜಕೀಯ ಬೆಳವಣಿಗೆ: 1996ರಲ್ಲಿ ನಾಗರಿಕರ ವೇದಿಕೆಯನ್ನು ಕಟ್ಟುವ ಮೂಲಕ ಉದ್ಯಮದೊಂದಿಗೆ ಸಮಾಜ ಸೇವೆಗೆ ಪದಾರ್ಪಣೆ ಮಾಡಿದರು. 2000 ರಲ್ಲಿ ಪ್ರಥಮ ಬಾರಿಗೆ ಪುರಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಗೊಂಡು, ಪುರಸಭೆ ಅಧ್ಯಕ್ಷರಾಗಿ ಸವಣೂರ ಪಟ್ಟಣದ ಅಭಿವೃದ್ಧಿಗೆ ಚಾಲನೆ ನೀಡಿದರು. 2004ರವರೆಗೆ ಉತ್ತಮ ಆಡಳಿತವನ್ನು ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಶಾಸಕರಾಗಿ ಆಯ್ಕೆ: 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ, ಟಿಕೆಟ್‌ ಕೈತಪ್ಪಿದ ಕಾರಣ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ವಿರುದ್ಧ 787 ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 

ಒಂದು ವರ್ಷದ ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.

2005ರಿಂದ ನಿರಂತರವಾಗಿ ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ ನಿರ್ದೇಶಕರಾಗಿ ನೇಮಕವಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ನೂರಾರು ರೈತರಿಗೆ ಸಾವಯವ ಕೃಷಿ ಅಭಿವೃದ್ಧಿಗೆ ಪ್ರೇರಣೆ ನೀಡಿದ್ದಾರೆ.

ಕಸಾಪ ತಾಲೂಕು ಘಟಕದ ಅದ್ಯಕ್ಷರಾಗಿ ಸಾಹಿತ್ಯಾಸಕ್ತರಿಗೆ ಉತ್ತೇಜನ ನೀಡಿ, ನೂರಾರು ಜನರನ್ನು ಆಜೀವ ಸದಸ್ಯರನ್ನು ಮಾಡುವ ಮೂಲಕ ಸಾಹಿತ್ಯ ಪರಿಷತ್‌ಗೆ ಜೀವಕಳೆ ತಂದಿರುವ ಹೆಗ್ಗಳಿಕೆ ರಾಜಶೇಖರ ಅವರದ್ದು. ಸವಣೂರ ತಾಲ್ಲೂಕಿನ ಸುಕ್ಷೇತ್ರ ಕಾರಡಗಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷರಾಗಿ, ದೇವಸ್ಥಾನದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.

ಬೊಮ್ಮಾಯಿಗೆ ಬೆಂಬಲ ನೀಡಿದ್ದ ಸಿಂಧೂರ

2008ರ ಶಿಗ್ಗಾವಿ–ಸವಣೂರ ವಿಧಾನಸಭಾ ಚುನಾವಣೆಯಲ್ಲಿ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಂದಿನ ಹಾಲಿ ಶಾಸಕರಾಗಿದ್ದ ರಾಜಶೇಖರ ಸಿಂಧೂರ ಅವರು ಬೆಂಬಲ ನೀಡಿದರು. ಆ ಚುನಾವಣೆಯಲ್ಲಿ ಬೊಮ್ಮಾಯಿ ಅವರು ಜಯ ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ ಬೊಮ್ಮಾಯಿ ಅವರು ಮೂರು ಬಾರಿ ಇದೇ ಕ್ಷೇತ್ರದಿಂದ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿ, ಮುಖ್ಯಮಂತ್ರಿ ಪಟ್ಟಕ್ಕೆ ಏರಿರುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು