ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ

Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಅಕ್ಷರ ಗಾತ್ರ

ಪ್ರಮೀಳಾ ಹುನಗುಂದ

ಮಾರುಕಟ್ಟೆಯಲ್ಲಿ ಪಾರದರ್ಶಕ ತೂಕ, ಶೀಘ್ರ ಹಣ ಪಾವತಿ ಮತ್ತು ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ಬೆಲೆ ನೀಡುವಿಕೆ ರೈತರ ವಿಶ್ವಾಸ ಗಳಿಸಿದೆ. ರಾಜ್ಯದ ವಿವಿಧೆಡೆಯಿಂದ ಅಲ್ಲದೇ ಆಂಧ್ರ ಪ್ರದೇಶದಿಂದ ರೈತರು ಒಣಮೆಣಸಿನಕಾಯಿಯನ್ನು ಮಾರಾಟಕ್ಕೆ ತರುತ್ತಾರೆ.

ಬ್ಯಾಡಗಿ (ಹಾವೇರಿ ಜಿಲ್ಲೆ): ಒಣಮೆಣಸಿನಕಾಯಿಯನ್ನು ನಿತ್ಯದ ಅಡುಗೆ, ಮಸಾಲೆ ಪದಾರ್ಥಗಳ ಹೊರತಾಗಿ ಸೌಂದರ್ಯ ವರ್ಧಕಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ‘ಬ್ಯಾಡಗಿ ಮೆಣಸಿನಕಾಯಿ’ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಇಲ್ಲಿಯ ಮಾರುಕಟ್ಟೆ ಕಳೆದ ಹಣಕಾಸು ವರ್ಷದಲ್ಲಿ ವಾರ್ಷಿಕ ₹2,281 ಕೋಟಿ ದಾಖಲೆ ವಹಿವಾಟು ನಡೆಸಿದೆ.

ಮಾರುಕಟ್ಟೆಯಲ್ಲಿ ಪಾರದರ್ಶಕ ತೂಕ, ಶೀಘ್ರ ಹಣ ಪಾವತಿ ಮತ್ತು ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ಬೆಲೆ ನೀಡುವಿಕೆ ರೈತರ ವಿಶ್ವಾಸ ಗಳಿಸಿದೆ. ರಾಜ್ಯದ ವಿವಿಧೆಡೆಯಿಂದ ಅಲ್ಲದೇ ಆಂಧ್ರ ಪ್ರದೇಶದಿಂದ ರೈತರು ಒಣಮೆಣಸಿನಕಾಯಿಯನ್ನು ಮಾರಾಟಕ್ಕೆ ತರುತ್ತಾರೆ.

ಮುದ್ದೆಬಿಹಾಳ, ವಿಜಯಪುರ, ಬಾಗಲಕೋಟಿ, ಸಿಂದಗಿ, ರಾಮದುರ್ಗ ತಾಲ್ಲೂಕು‌ಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗಿದ್ದು ಉತ್ತಮ ಗುಣಮಟ್ಟದ ಮೆಣಸಿನಕಾಯಿ ಮಾರಾಟಕ್ಕೆ ಬಂದಿದೆ. ಹೀಗಾಗಿ ಉತ್ತಮ ಬೆಲೆ ದೊರೆತಿದೆ.
ವಿ.ಎಸ್‌.ಮೋರಿಗೇರಿ, ವರ್ತಕರ ಸಂಘದ ಗೌರವ ಕಾರ್ಯದರ್ಶಿ

‘ಎಂಡಿಎಚ್‌, ಎವರೆಸ್ಟ್‌ ನಂತಹ ಪ್ರತಿಷ್ಠಿತ ಮಸಾಲಾ ಕಂಪನಿಗಳು ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಮೆಣಸಿನಕಾಯಿ ಬೆಳೆಗಾರರಿಗೆ ಸ್ಪರ್ಧಾತ್ಮಕ ಬೆಲೆ ಸಿಗಲು ಕಾರಣವಾಗಿದೆ. ಸಂಸ್ಕರಿಸಿದ ಮೆಣಸಿನಕಾಯಿ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಗಣನೀಯ ಪ್ರಮಾಣದಲ್ಲಿ ವಿದೇಶಿ ವಿನಿಮಯ ಸಹ ಹೆಚ್ಚಳವಾಗಿದೆ’ ಎಂದು ಮೂಲಗಳು ತಿಳಿಸಿವೆ. 

2021–22ನೇ ಸಾಲಿನಲ್ಲಿ ವಾರ್ಷಿಕ ₹2,046 ಕೋಟಿ ವಹಿವಾಟು ನಡೆಸಿದೆ. ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಹರಿದು ಬಂದಿದ್ದು, ದರದಲ್ಲಿ ಸಾಕಷ್ಟು ಇಳಿಕೆಯಾಗಿತ್ತು. 2022–23ನೇ ಸಾಲಿನಲ್ಲಿ ಅತಿವೃಷ್ಟಿ ಪರಿಣಾಮ ಸಾಕಷ್ಟು ಬೆಳೆ ಹಾನಿಯಾಗಿತ್ತು. ಧಾರವಾಡ ಜಿಲ್ಲೆಯ ಕುಂದಗೋಳ, ಸಂಶಿ, ಗುಡಗೇರಿ, ಗದಗ ಜಿಲ್ಲೆಯ ಅಂತೂರ ಬೆಂತೂರ, ಅಣ್ಣಿಗೇರಿ, ರಾಯಚೂರು, ಕಲಬುರ್ಗಿ, ಬಳ್ಳಾರಿ ಮತ್ತಿತರ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು.

ಕಾಂಕ್ರೀಟ್‌ ರಸ್ತೆ ರೈತ ಭವನ ನಿರ್ಮಾಣಗೊಂಡಿದೆ. ಪಟ್ಟಣದ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಕೋಲ್ಡ್‌ ಸ್ಟೋರೇಜ್‌ಗಳು ತಲೆ ಎತ್ತಿವೆ. ಇ–ಟೆಂಡರ್‌ ಪದ್ಧತಿ ಅಳವಡಿಸಿದ್ದು ಸಂಜೆಯ ವೇಳೆಗೆ ಟೆಂಡರ್‌ ಡಿಕ್ಲೇರ್‌ ಮಾಡಲಾಗುತ್ತದೆ.
ಎಚ್‌.ವೈ.ಸತೀಶ, ಎಪಿಎಂಸಿ ಕಾರ್ಯದರ್ಶಿ

ಬಳ್ಳಾರಿ, ರಾಯಚೂರು ಹಾಗೂ ಆಂಧ್ರದ ಕರ್ನೂಲ ಜಿಲ್ಲೆ ಸೇರಿದಂತೆ ಇನ್ನಿತರ ಭಾಗದಲ್ಲಿ ಮೆಣಸಿನಕಾಯಿ ಬೆಳೆಯನ್ನು ಮತ್ತೊಮ್ಮೆ ಬಿತ್ತನೆ ಮಾಡಿದ್ದು ಒಟ್ಟಾರೆ 9.90 ಲಕ್ಷ ಕ್ವಿಂಟಲ್‌ ಮಾರಾಟಕ್ಕೆ ತರಲಾಯಿತು. ಬೇಡಿಕೆ ಹೆಚ್ಚಿದ ಪರಿಣಾಮ ದರ ಸಮರ ಏರ್ಪಟ್ಟು ಮೆಣಸಿನಕಾಯಿ ಕಳೆದ ವರ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈಗ ಪ್ರತಿ ಕ್ವಿಂಟಲ್‌ಗೆ ₹45 ಸಾವಿರದಿಂದ ₹50 ಸಾವಿರದವರೆಗೆ ಮಾರಾಟವಾಗುತ್ತಿದೆ. 

ಮೆಣಸಿನಕಾಯಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಸಿಂಪರಣೆ ಮಾಡುವುದರಿಂದ ಮೆಣಸಿನಕಾಯಿಯ ಗುಣಮಟ್ಟ ಹಾಳಾಗುತ್ತದೆ. ಹಸಿಬಿಸಿ ಇರುವ ಮೆಣಸಿನಕಾಯಿ ಮಾರಾಟಕ್ಕೆ ತರುವುದರಿಂದ ಮೆಣಸಿನಕಾಯಿ ಬೇಗ ಫಂಗಸ್‌ಗೆ ತುತ್ತಾಗುತ್ತದೆ. ಒಣಗಿಸಿದ ಮೆಣಸಿನಕಾಯಿ ಮಾರಾಟಕ್ಕೆ ತರಬೇಕು.
ಸುರೇಶಗೌಡ್ರ, ಪಾಟೀಲ ವರ್ತಕರ ಸಂಘದ ಅಧ್ಯಕ್ಷ

ಗರಿಷ್ಠ ಬೆಲೆಯಲ್ಲಿ ಮಾರಾಟ

ರೋಣ, ಗದಗ, ಅಣ್ಣಿಗೇರಿ, ಅಂತೂರ ಬೆಂತೂರ ಮುಂತಾದೆಡೆ ಬೆಳೆದ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ರೋಣ ತಾಲ್ಲೂಕಿನ ಸವಡಿ ಗ್ರಾಮದ ರೈತ ಮಾಲತೇಶ ಅಸೂಟಿ ಅವರು ಬೆಳೆದ ಒಂದು ಚೀಲ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹70,889 ರಂತೆ ಗರಿಷ್ಠ ಬೆಲೆಯಲ್ಲಿ ಈಚೆಗೆ ಮಾರಾಟವಾಗಿತ್ತು, ತದನಂತರ ಗದಗ ಬೆಟಗೇರಿಯ ರೈತ ಎಂ.ಬಿ.ಕರಿಬಿಸ್ಟಿ ಅವರು ಬೆಳೆದ 2 ಚೀಲ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹82,011ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಿಸಿದೆ.

ಪ್ರಸ್ತುತ ಸೆಸ್‌ ಶುಲ್ಕವನ್ನು ಶೇ 0.60ರಂತೆ ಸಂಗ್ರಹಿಸಲಾಗುತ್ತಿದೆ. 

ಮುರುಟು ರೋಗದ ಬಾಧೆ

'ಮುರುಟು ರೋಗ ಬಂದರೆ ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೆಣಸಿನಕಾಯಿಗೆ ರೋಗ ಬಾರದಂತೆ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸಲು ವಿಜ್ಞಾನಿಗಳ ಮೊರೆ ಹೋಗಲಾಯಿತು. ಆದರೆ ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿ ಅಭಿವೃದ್ಧಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಪರ್ಯಾಯವಾಗಿ ವಿವಿಧ ಹೈಬ್ರಿಡ್‌ ತಳಿಗಳು ತಲೆ ಎತ್ತಿವೆ’ ಎಂದು ನಿವೃತ್ತ ಪ್ರಾಚಾರ್ಯ ಎಸ್‌.ಬಿ.ತವರದ ಮಾಹಿತಿ ನೀಡಿದರು.

ಮೆಣಸಿನಕಾಯಿ ಮಾರುಕಟ್ಟೆ ವಹಿವಾಟು (5 ವರ್ಷಗಳ ಅಂಕಿ–ಅಂಶ)

ವರ್ಷ ; ಆವಕ ; ವಹಿವಾಟು ; ಸೆಸ್‌

2017–18 ; 10.41 ; ₹920.06 ; ₹13.79

2018–19 ; 13.96 ; ₹1009.69 ; ₹15.14

2019–20 ; 8.42 ; ₹1260.43 ; ₹18.92

2020–21 ; 11.10 ; ₹1997.18 ; ₹11.50

2021–22 ; 15.85 ; ₹2046 ; ₹12.27 

2022–23 ; 9.91 ; ₹2281 ; ₹13.69

(*ಆವಕ– ಲಕ್ಷ ಕ್ವಿಂಟಲ್‌ಗಳಲ್ಲಿ *ವಹಿವಾಟು– ₹ಕೋಟಿಗಳಲ್ಲಿ *ಸೆಸ್‌– ₹ಕೋಟಿಗಳಲ್ಲಿ)

ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸಿ ರವಾನೆ ಮಾಡಲು ಚೀಲದಲ್ಲಿ ತುಂಬುತ್ತಿರುವ ಕಾರ್ಮಿಕರು
ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸಿ ರವಾನೆ ಮಾಡಲು ಚೀಲದಲ್ಲಿ ತುಂಬುತ್ತಿರುವ ಕಾರ್ಮಿಕರು
ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸುತ್ತಿರುವ ಕಾರ್ಮಿಕರು
ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಮೆಣಸಿನಕಾಯಿಯನ್ನು ಒಣಗಿಸುತ್ತಿರುವ ಕಾರ್ಮಿಕರು
ಪೌಡರ್‌ ಮಾಡಿದ ಮೆಣಸಿನಕಾಯಿಯನ್ನು ಚೀಲಗಳಲ್ಲಿ ತುಂಬಿ ಲಾರಿಗಳ ಮೂಲಕ ರವಾನೆ ಮಾಡುತ್ತಿರುವುದು.
ಪೌಡರ್‌ ಮಾಡಿದ ಮೆಣಸಿನಕಾಯಿಯನ್ನು ಚೀಲಗಳಲ್ಲಿ ತುಂಬಿ ಲಾರಿಗಳ ಮೂಲಕ ರವಾನೆ ಮಾಡುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT