ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ ಬೆಳೆದವರ ಗೋಳು ಕೇಳೋರ‍್ಯಾರು?

ಮಳೆಯಿಂದ ಅರ್ಧದಷ್ಟು ಇಳುವರಿ ಕಡಿಮೆ * ಉಳಿದ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆ
Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಒಟ್ಟು 3.32 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿಯ ಪೈಕಿ, ಈ ಮುಂಗಾರು ಹಂಗಾಮಿನಲ್ಲಿ 1.93 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆಯಾಗಿದೆ. 2.18 ಲಕ್ಷ ರೈತ ಕುಟುಂಬಗಳ ಇದೇ ಬೆಳೆಯನ್ನು ಅವಲಂಬಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಗುಣಮಟ್ಟದ ಕಾಳು ಕ್ವಿಂಟಲ್‌ಗೆ ₹2,200ಕ್ಕೆ ಮಾರಾಟವಾಗುತ್ತಿದೆ. ಕಪ್ಪುಬಣ್ಣಕ್ಕೆ ತಿರುಗಿರುವ ಕಾಳು ಕ್ವಿಂಟಲ್‌ಗೆ ಸಾವಿರದಿಂದ ₹1,760 ಬೆಲೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ.

‘ಪ್ರತಿವರ್ಷ ಎಕರೆಗೆ 30ರಿಂದ 35 ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ಮಳೆಯಿಂದ ವಿವಿಧೆಡೆ ಬೆಳೆ ಹಾಳಾಗಿರುವುದರಿಂದ ಎಕರೆಗೆ 15 ರಿಂದ 20 ಕ್ವಿಂಟಲ್‌ ಇಳುವರಿ ಸಿಕ್ಕರೇ ಹೆಚ್ಚು’ ಎನ್ನುತ್ತಾರೆ ರೈತರು.

‘ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ 2017–18ರಲ್ಲಿ 8.75 ಲಕ್ಷ ಕ್ವಿಂಟಲ್‌‌ ಗೋವಿನಜೋಳ ಆವಕವಾಗಿದ್ದರೆ, ಕಳೆದ ಸಾಲಿನಲ್ಲಿ 10.78 ಕ್ವಿಂಟಲ್ ಆವಕವಾಗಿತ್ತು.ಪ್ರಸಕ್ತ ಸಾಲಿನ ಅಕ್ಟೋಬರ್‌ ತಿಂಗಳಿನಲ್ಲಿ ಗೋವಿನಜೋಳದ ಬೆಲೆ ಕ್ವಿಂಟಲ್‌ಗೆ ಕನಿಷ್ಠ ₹1,800, ಗರಿಷ್ಠ ₹2,570, ಸರಾಸರಿ₹2,185 ಬೆಲೆ ಇದೆ’ ಎಂದು ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಮನೋಹರ ಬಾರ್ಕಿ ತಿಳಿಸಿದರು.

‘ಕಳೆದ ವರ್ಷ ಎಕರೆಗೆ 30 ಕ್ವಿಂಟಲ್‌ ಇಳುವರಿ ಬಂದಿತ್ತು. ಈ ಬಾರಿ ಕಾಳು ಕಪ್ಪು ಬಣ್ಣಕ್ಕೆ ತಿರುಗಿರುವುದರಿಂದ ₹1,800ಕ್ಕೆ ಖರೀದಿ ಮಾಡಿದ್ದಾರೆ. ಕಪ್ಪುಬಣ್ಣಕ್ಕೆ ತಿರುಗಿದ ಕಾಳುಗಳನ್ನೂ ಹೆಚ್ಚಿನ ಬೆಲೆಗೆ ಖರೀದಿಸಿದರೆ ರೈತರು ಬದುಕಬಹುದು’ ಎಂದು ತಿಮ್ಮಾಪುರದ ರೈತ ಖೀರಪ್ಪ ನಾಯಕ ಮನವಿ ಮಾಡಿದರು.

‘ಹೊಲದಲ್ಲಿ ನೀರು ನಿಂತಿರುವುದರಿಂದ ಇನ್ನೂ ಕೆಲವು ಕಡೆ ಜೋಳ ಮುರಿದಿಲ್ಲ. ಬೆಳೆ ಇಳುವರಿ ಕಡಿಮೆ ಇದ್ದಾಗ ಬೆಲೆ ಹೆಚ್ಚಿರುತ್ತದೆ. ಇಳುವರಿ ಹೆಚ್ಚಿದ್ದಾಗ ಬೆಲೆಯೇ ಇರುವುದಿಲ್ಲ. ರೈತರ ಬಾಳಿನಲ್ಲಿ ಅದೃಷ್ಟದ ಬಾಗಿಲು ಎಂಬುದೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ದೇವಿಹೊಸುರಿನ ಸತೀಶ ಮುದಿಗೌಡ್ರ.

‘ಪ್ರತಿ ವರ್ಷ ಅಕ್ಟೋಬರ್ ಅಂತ್ಯದಲ್ಲಾಗಲೇ ಗೋವಿನಜೋಳ ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಈ ವರ್ಷ ನವೆಂಬರ್ ಶುರುವಾದರೂ ಧಾರಣೆ ಇಲ್ಲ. ಈಗ ಮೂರ್ನಾಲ್ಕು ದಿನಗಳಿಂದ ಕೆಲ ರೈತರು ಕಾಳುಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಆರಂಭದಲ್ಲಿ ಧಾರಣೆ ಹೆಚ್ಚಾಗಬಹುದು’ ಎಂದು ಮಾರುಕಟ್ಟೆಯ ಶಿವಬಸಪ್ಪ ಹುರಳಿಕುಪ್ಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT