ಸೋಮವಾರ, ಆಗಸ್ಟ್ 19, 2019
22 °C
40 ವರ್ಷಗಳಿಂದ ಕೆರೆ ಅಂಗಳದಲ್ಲಿದ್ದ ಕುಟುಂಬಗಳು

ಅಲೆಮಾರಿ ಬದುಕಿಗೂ ಬರೆ ಎಳೆದ ನೆರೆ!

Published:
Updated:
Prajavani

ಹಂಸಭಾವಿ: ಬ್ಯಾಡಗಿ ಹಾಗೂ ಹಿರೇಕೆರೂರ ತಾಲ್ಲೂಕುಗಳ ಗಡಿ ರೇಖೆ ಕೂಡುವ ಕೆರೆ ಅಂಗಳದಲ್ಲಿ ಕಳೆದ ನಲವತ್ತು ವರ್ಷದಿಂದ ನೆಲೆ ಕಂಡುಕೊಂಡಿದ್ದ ಅಲೆಮಾರಿಗಳು, ಎಂದೂ ತುಂಬದ ಕೆರೆ ಈಗ ಭರ್ತಿಯಾಗಿದ್ದರಿಂದ ಹೈರಾಣಾಗಿದ್ದಾರೆ. ಗುಡಿಸಲು ಹಾಗೂ ತಾತ್ಕಾಲಿಕ ಶೆಡ್‌ಗಳು ಜಲಾವೃತವಾಗಿ ಅವರ ಬದುಕು ಅತಂತ್ರವಾಗಿದೆ.

35 ಮನೆಗಳಿರುವ ಈ ಪುಟ್ಟ ಸಮುದಾಯದಲ್ಲಿ ಹಕ್ಕಿಪಿಕ್ಕಿ ಜನ, ಕೊಂಚಿಕೊರವರು ಸೇರಿದಂತೆ ವಿವಿಧ ಸಮುದಾಯಗಳ ನೂರಕ್ಕೂ ಹೆಚ್ಚು ಅಲೆಮಾರಿಗಳು ವಾಸವಿದ್ದಾರೆ. ಸಣ್ಣ ಪುಟ್ಟ ವ್ಯಾಪಾರ ಹಾಗೂ ಕೂಲಿ ಕೆಲಸದ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಇವರು, ಈಗ ನೆರೆಯ ಕಾರಣದಿಂದ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲಾಗದೆ ಪ್ರವಾಹದ ನೀರಿನ ನಡುವೆಯೇ ಬದುಕುತ್ತಿದ್ದಾರೆ.

‘ಮೂರು ದಿನದಿಂದ ನೀರು ಗುಡುಸಲಿನ್ಯಾಗ ನಿಂತತಿ. ನಮ್ಮ ಮಗಳು ಮೂರು ತಿಂಗಳ ಬಾಣ್ತಿ ಅದಾಳ. ಅಕೀನ ಕರ್ಕೊಂಡು ನಮ್ಮ ತಮ್ಮಾರ ಮನೀಗೆ ಬಂದವಿ. ಅವರ ಮನ್ಯಾಗೂ ಇರೋಕ್ ಜಾಗ ಇಲ್ಲ. ಸಾಕಿದ್ದ ನಾಕು ಕುರೀನೂ ನೀರಾಗ ಮುಳುಗಿ ಸತ್ತೋಗ್ಯಾವು. ನಾವು ಜೀವನ ಮಾಡೋದು ಕಷ್ಟ ಆಗೇತ್ರಿ’ ಎನ್ನುತ್ತ ದುಃಖತಪ್ತರಾದರು ಹನುಮಂತಪ್ಪ ದುರಮುರಗೇರ.

‘ನಾವಿರೋ ಶೆಡ್‌ಗೆ ಕದ ಇರಂಗಿಲ್ಲ. ಮಕ್ಕಳು ಯಾವಾಗ್ ಬೇಕೋ ಅವಾಗ ಹೊರಗೆ ಹೋಡ್ತಿರ್ತಾವ. ಅದಕ್ಕ ಕೆಲ್ಸ ಬಿಟ್ಟು ಮಕ್ಳುನಾ ಹಿಡ್ಕೊಂಡು ಕುಂತೀವಿ. ನಾವು ನೀರಿನ ಬಡ್ಡಿಗೇ ಇರೋದ್ರಿಂದ ಹಾವು–ಚೇಳು ಒಳಗೆ ಬರ್ತಾವ. ಇಂಥಾ ಪರಿಸ್ಥಿತ್ಯಾಗ ಮಕ್ಳನ್ನ ಹೆಂಗ್ ಸಾಕ್ಬೇಕು ಅನ್ನೋದ ಚಿಂತೆ ಆಗೈತಿ’ ಎಂದು ಅಳಲು ತೋಡಿಕೊಂಡರು ಹನುಮಂತಪ್ಪ ಹಂದಿಜೋಗೇರ.

ಸೌಲಭ್ಯ ವಂಚಿತರು: ಈ ಸಮುದಾಯದ ಕೆಲವರು ಹಿರೇಕೆರೂರ ತಾಲೂಕಿನ ಗಡಿಯೊಳಗೆ ವಾಸವಿದ್ದರೆ, ಇನ್ನೂ ಕೆಲವರು ಬ್ಯಾಡಗಿ ತಾಲ್ಲೂಕಿನ ಗಡಿಯಲ್ಲಿ ವಾಸವಾಗಿದ್ದಾರೆ. ಸೌಲಭ್ಯಗಳಿಂದ ವಂಚಿತರಾಗಿರುವ ಇವರು, ಕುಡಿಯುವ ನೀರಿಗಾಗಿ ಇದ್ದ ಕೊಳವೆ ಬಾವಿ ಕೆರೆಯಲ್ಲಿ ಮುಳುಗಿದ್ದರಿಂದ 2 ಕಿ.ಮೀ ದೂರವಿರುವ ಚಿಕದ್ಕಣಜಿಯಿಂದ ನೀರು ತರುತ್ತಿದ್ದಾರೆ.

 

‘ಮತದಾನದ ಚೀಟಿ ಮಾಡ್ಕೊಟ್ರು’

ಈ ಸಮುದಾಯದವರಿಗೆ ಪಡಿತರ ಚೀಟಿ ಹೊರತುಪಡಿಸಿ ಬೇರೆ ಯಾವ ಸೌಕರ್ಯಗಳೂ ತಲುಪಿಲ್ಲ. ಆದರೆ, ಜನಪ್ರತಿನಿಧಿಗಳು ಮತಗಳಿಗಾಗಿ ಇವರಿಗೆಲ್ಲ ಮತದಾನದ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಇವರ ಬಳಿ ಬಂದು ಹೋದರೆ, ಮತ್ತೆ ಈ ಕಡೆ ಸುಳಿಯುತ್ತಿಲ್ಲ. ‘ನೆರೆ ಬಂತೆಂದು ಊರೆಲ್ಲ ಅಡ್ಡಾಡುತ್ತಿದ್ದಾರೆ. ನಮ್ಮ ಕಡೆ ಒಬ್ಬರೂ ಬಂದಿಲ್ಲ’ ಎನ್ನುತ್ತಾರೆ ಈ ಸಂತ್ರಸ್ತರು.

Post Comments (+)