‘ಕೆಲಸ ಮಾಡಿ ತೋರಿಸುತ್ತೇನೆ’

7
ಡಿಸಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ‘ಝಲಕ್’

‘ಕೆಲಸ ಮಾಡಿ ತೋರಿಸುತ್ತೇನೆ’

Published:
Updated:
Deccan Herald

ಹಾವೇರಿ:  ‘ಕೆಲಸ ಮಾಡುವವನಿಗೆ ಜಿಲ್ಲೆ ಯಾವುದಾದರೇನು? ನಾನು, ಹೇಳುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇನೆ. 3ರಿಂದ 4 ತಿಂಗಳ ಬಳಿಕ ನೀವು ನನಗೆ ಪ್ರಶ್ನಿಸಿ’
–ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್, ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‌ಚುನಾವಣಾ ನೀತಿ ಸಂಹಿತೆಯ ಕಾರಣ ಯಾವುದೇ ಯೋಜನೆ, ಕಾಮಗಾರಿಗಳ ಬಗ್ಗೆ ಮಾತನಾಡುವುದಿಲ್ಲ. ಇದು, ಅಧಿಕಾರಿಗಳು ಹಾಗೂ ಪತ್ರಕರ್ತರ ಜೊತೆ ಅನೌಪಚಾರಿಕ ಭೇಟಿ ಎಂದು ಮಾತಿಗಿಳಿದ ಅವರು, ‘ಹಜ್ ಯಾತ್ರಿಕರಿಗೆ ಪ್ರತಿನಿತ್ಯ ಊಟ ಮತ್ತಿತರ ವ್ಯವಸ್ಥೆ ಮಾಡಲಿದ್ದ ಕಾರಣ ನನಗೆ ಜಿಲ್ಲೆಗೆ ಬರಲು ಸಾಧ್ಯವಾಗಲಿಲ್ಲ. ಅಲ್ಲಿ, ಖುದ್ದು ಖರ್ಚು ಮಾಡಿ ಮೂರು ಹೊತ್ತು ಮಾಂಸಾಹಾರಿ ಊಟ ನೀಡಿದ್ದೇನೆ. ಆದರೆ, ಇನ್ನು ಮುಂದೆ ತಿಂಗಳಿಗೆ ಕನಿಷ್ಠ 3ರಿಂದ 4 ಬಾರಿ ಬರುತ್ತೇನೆ’ ಎಂದರು.

‘ನಾವೆಲ್ಲ ಒಂದೇ ಕುಟುಂಬದವರು ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು. ಇಲ್ಲಿ, ಸಚಿವರು, ಅಧಿಕಾರಿಗಳು ಎಂಬ ಭೇದಭಾವಗಳಿಲ್ಲ. ನಾವು ಬಂದು– ಹೋಗುತ್ತೇವೆ. ಅಧಿಕಾರಿಗಳೇ ಕೆಲಸವನ್ನು ಯಶಸ್ವಿಗೊಳಿಸಬೇಕು. ಒಟ್ಟಾರೆ ಜನತೆಗೆ ಒಳ್ಳೆಯಾಗಬೇಕು ಎಂದರು.

ಮಹದಾಯಿ ತೀರ್ಪು ಮೂಲಕ ರಾಜ್ಯಕ್ಕೆ ನ್ಯಾಯ ಸಿಕ್ಕಿದ್ದು, ಸಂತಸವಾಯಿತು. ಹಾವೇರಿಗೆ ಬಂದ ಸಂದರ್ಭವೇ ‘ಸಿಹಿ’ಯಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಬಾಕಿ ಉಳಿದಿದ್ದ ಸುಮಾರು 8 ಲಕ್ಷ ಬಿಪಿಎಲ್ ಕಾರ್ಡ್ ಅನ್ನು, ನಾನು ಸಚಿವನಾದ ಬಳಿಕ ನೀಡಲಾಗಿದೆ. ಬಯೋಮೆಟ್ರಿಕ್ ಜಾರಿಗೆ ಮಾಡಿದ್ದು, ಸರ್ಕಾರಕ್ಕೆ ಸುಮಾರು ₹580 ಕೋಟಿ ಉಳಿತಾಯವಾಗಿದೆ ಎಂದರು.

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ, ಅವರ ಅಧ್ಯಕ್ಷತೆಯ ಅವಧಿ ಮುಗಿದ ಒಂದೂವರೆ ತಿಂಗಳ ಬಳಿಕ ವರದಿ ಸಲ್ಲಿಸಿದ್ದಾರೆ. ಹೀಗಾಗಿ,  ಆ ವರದಿಯ ಮಾನ್ಯತೆಯ ಬಗ್ಗೆಯೇ ಗೊಂದಲವಿದೆ. ಅಲ್ಲದೇ, ವರದಿ ಸಲ್ಲಿಕೆಯಾದ ಬಳಿಕ ರಾಜ್ಯದಲ್ಲಿ ಒಂದು ವರ್ಷ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವೇ ಅದನ್ನು ಪರಿಗಣಿಸಿಲ್ಲ ಎಂದರು. 

ವಕ್ಫ್‌ ಭೂಮಿ ಒತ್ತುವರಿಯಾಗಿದ್ದರೆ, ಮಾಣಿಪ್ಪಾಡಿ ತಿಳಿಸಲಿ. ಪರಿಶೀಲನೆಗಾಗಿ ಖುದ್ದು ನಾನೇ ಬರುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಶಾಸಕ ಬಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ, ಜಿಲ್ಲಾ ಪಂಚಾಯ್ತಿ ಸಿಇಒ ಸಿ.ಟಿ. ಶಿಲ್ಪಾನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಇದ್ದರು.

ಇದಕ್ಕೂ ಮೊದಲು ಅವರು ಹಜರತ್ ಮಹಬೂಸಬಾನಿ ದರ್ಗಾ ಹಾಗೂ ಹುಕ್ಕೇರಿಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಸಾಂತ್ವನ:  ಈಚೆಗೆ ಕೊಲೆಯಾದ ನಗರದ ಕಾಲೇಜೊಂದರ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಶಾದಿಭಾಗ್ಯಕ್ಕಿಂತ ರೈತರ ಭಾಗ್ಯವೇ ಮುಖ್ಯ
ನಮಗೆ ‘ಶಾದಿಭಾಗ್ಯ’ಕ್ಕಿಂತಲೂ ‘ರೈತರ ಭಾಗ್ಯ’ವೇ ಮುಖ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹೇಳಿದರು.

ರೈತರ ಸಾಲಮನ್ನಾದಿಂದಾಗಿ ‘ಶಾದಿಭಾಗ್ಯ’ಕ್ಕೆ ನೀಡುವ ಅನುದಾನ ಕಡಿತಗೊಂಡಿದೆ ಎನ್ನುವುದು ಸುಳ್ಳು ಆರೋಪ. ಸರ್ಕಾರವು ಅನುದಾನ ಕಡಿತ ಮಾಡಿಲ್ಲ. ಆದರೂ, ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಅನ್ನ ನೀಡುವ ‘ರೈತರ ಭಾಗ್ಯ’ವೇ ನಮಗೆ ಮುಖ್ಯ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !