ಭಾನುವಾರ, ಆಗಸ್ಟ್ 14, 2022
22 °C
ಕೊರೊನಾ ಎರಡನೇ ಅಲೆಯ ಆತಂಕ: ವಿಶೇಷ ಅನುಮತಿಗೆ ಸರ್ಕಾರಕ್ಕೆ ಪತ್ರ

ಸಮ್ಮೇಳನ ಸಿದ್ಧತೆಗೆ ಕೋವಿಡ್‌ ಅಡ್ಡಿ!

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಏಲಕ್ಕಿ ಕಂಪಿನ ನಗರಿ’ ಹಾವೇರಿಯಲ್ಲಿ 2021ರ ಫೆಬ್ರುವರಿ 26ರಿಂದ 28ರ ವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಕೋವಿಡ್‌ ಕರಿನೆರಳು ಬೀರುವ ಆತಂಕ ಕಾಡುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಸಿದ್ಧತೆಗಳು ಇನ್ನೂ ಅಧಿಕೃತವಾಗಿ ಆರಂಭಗೊಂಡಿಲ್ಲ. 

ಜನವರಿ ಬಳಿಕ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ‘ಅಕ್ಷರ ಜಾತ್ರೆ’ ನಡೆಸುವುದು ಹೇಗೆ ಎಂಬ ಚಿಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಕಾಡುತ್ತಿದೆ. ಸಮ್ಮೇಳನಕ್ಕೆ ಕೇವಲ ಎರಡೂವರೆ ತಿಂಗಳು ಬಾಕಿ ಇದ್ದರೂ, ಪೂರ್ವ ತಯಾರಿಗಳೇ ಶುರುವಾಗಿಲ್ಲ.

ಜಾಗವೂ ಅಂತಿಮಗೊಂಡಿಲ್ಲ: ಹಾವೇರಿ ನಗರದಲ್ಲಿ ‘ಸಾಹಿತ್ಯ ಹಬ್ಬ’ವನ್ನು ಯಾವ ಸ್ಥಳದಲ್ಲಿ ನಡೆಸಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಜಿ.ಎಚ್‌.ಕಾಲೇಜು ಪಕ್ಕದಲ್ಲಿರುವ 19 ಎಕರೆ ಜಾಗ ಅಥವಾ ಹೊಸಮನಿ ಸಿದ್ದಪ್ಪ ಕ್ರೀಡಾಂಗಣ ಈ ಎರಡರಲ್ಲಿ ಯಾವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ. ಪ್ರಧಾನ ವೇದಿಕೆ ಜತೆ ಊಟದ ಸ್ಥಳ, ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಶೌಚಾಲಯ ಮುಂತಾದವುಗಳಿಗೆ ಸ್ಥಳ ನಿಗದಿ ಮಾಡಬೇಕಿದೆ. ಹೀಗಾಗಿ ಮುಖ್ಯ ವೇದಿಕೆಯ ಜಾಗ ಸಮತಟ್ಟು ಮಾಡುವುದು, ಆವರಣವನ್ನು ಸ್ವಚ್ಛಗೊಳಿಸುವುದು, ಕುಡಿಯುವ ನೀರು ಸೌಲಭ್ಯ ಕಲ್ಪಿಸುವುದು ಸೇರಿದಂತೆ ಯಾವ ಪ್ರಾಥಮಿಕ ಕಾರ್ಯಗಳಿಗೂ ಚಾಲನೆ ಸಿಕ್ಕಿಲ್ಲ. 

ರಚನೆಯಾಗದ ಸಮಿತಿಗಳು: ಸಮ್ಮೇಳನ ಯಶಸ್ವಿಯಾಗಬೇಕೆಂದರೆ ಮುಖ್ಯವಾಗಿ ಸಮಿತಿಗಳು ರಚನೆಯಾಗಬೇಕು. ಆಯಾ ಸಮಿತಿಗೆ ನಿರ್ದಿಷ್ಟ ಜವಾಬ್ದಾರಿ ಮತ್ತು ಕಾರ್ಯ ವಹಿಸಬೇಕು. ಸಮಿತಿ ಅಧ್ಯಕ್ಷ ಸ್ಥಾನವನ್ನು ಶಾಸಕ ಅಥವಾ ವಿಧಾನ ಪರಿಷತ್‌ ಸದಸ್ಯರಿಗೆ, ಕಾರ್ಯಾಧ್ಯಕ್ಷ ಅಥವಾ ಸಂಚಾಲಕ ಹುದ್ದೆಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಬೇಕು. ಮೂರು ತಿಂಗಳು ಮುಂಚಿತವಾಗಿಯೇ ಸಮಿತಿಗಳು ಕಾರ್ಯಾರಂಭ ಮಾಡಬೇಕು. ವಸತಿ ಸಮಿತಿ, ವೇದಿಕೆ ಸಮಿತಿ, ಸಾರಿಗೆ ಸಮಿತಿ.. ಸೇರಿದಂತೆ ಸುಮಾರು 20 ಸಮಿತಿಗಳ ರಚನೆಯ ಕಾರ್ಯ ನನೆಗುದಿಗೆ ಬಿದ್ದಿದೆ. 

ವಸತಿ ವ್ಯವಸ್ಥೆಗೂ ತೊಡಕು: ‘ವಸತಿ ಸಮಿತಿಯ ಕಾರ್ಯ ದೊಡ್ಡದಿರುತ್ತದೆ. ಸಮ್ಮೇಳನಕ್ಕೆ ಎಷ್ಟು ಮಂದಿ ಬರುತ್ತಾರೆ ಎಂಬುದನ್ನು ಲೆಕ್ಕ ಹಾಕಿ ‘ನೀಲನಕ್ಷೆ’ ರಚಿಸಿಕೊಳ್ಳಬೇಕು. ನಗರದಿಂದ 15ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿರುವ ಹಾಸ್ಟೆಲ್‌, ಶಾಲಾ–ಕಾಲೇಜು, ಪ್ರವಾಸಿ ಮಂದಿರ, ಸರ್ಕಾರಿ ಕಟ್ಟಡಗಳು, ಹೋಟೆಲ್‌, ಲಾಡ್ಜ್‌ಗಳು ಮುಂತಾದ ಜಾಗಗಳನ್ನು ಕಾಯ್ದಿರಿಸಿ ಅತಿಥಿಗಳಿಗೆ ಅನುಸಾರವಾಗಿ ವಿಂಗಡಿಸಬೇಕು. ಕೊರೊನಾ ಆತಂಕದಿಂದ ಭರದ ಸಿದ್ಧತೆ ಮಾಡಲು ತೊಡಕಾಗಿದೆ’ ಎನ್ನುತ್ತಾರೆ ಕಸಾಪ ಜಿಲ್ಲಾ ಮಟ್ಟದ ಪದಾಧಿಕಾರಿಗಳು. 

ಕಾದು ನೋಡುವ ತಂತ್ರ: ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ನಗರ ಮಧುವಣಗಿತ್ತಿಯಂತೆ ಸಿದ್ಧವಾಗಬೇಕು. ಹದಗೆಟ್ಟ ರಸ್ತೆಗಳ ದುರಸ್ತಿಯಾಗಬೇಕು. ಹೂಳು ತುಂಬಿ ಗಬ್ಬು ನಾರುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ಜಿಲ್ಲಾಡಳಿತ ಮತ್ತು ನಗರಸಭೆಯಿಂದಲೂ ಯಾವುದೇ ಕಾರ್ಯಗಳು ಇನ್ನೂ ಆರಂಭಗೊಂಡಿಲ್ಲ. ಎಲ್ಲದಕ್ಕೂ ಕೋವಿಡ್‌ ಅಡ್ಡಗೋಡೆಯಾಗಿ ನಿಂತಿದೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿದೆ. 

2021ರ ಮಾರ್ಚ್‌ 3ರಂದು ಕಸಾಪ ಪದಾಧಿಕಾರಿಗಳ ಅಧಿಕಾರವಧಿ ಅಂತ್ಯಗೊಳ್ಳುತ್ತದೆ. ಅಷ್ಟರೊಳಗೆ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಬೇಕು ಎಂಬ ಆಸೆಯಿದ್ದರೂ, ಕೋವಿಡ್‌ ಆತಂಕದಿಂದ ‘ಕಾದು ನೋಡುವ ತಂತ್ರ’ಕ್ಕೆ ಕಸಾಪ ಪದಾಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು