ಭಾನುವಾರ, ಜನವರಿ 17, 2021
19 °C
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಶಾಸಕ ನೆಹರು ಓಲೇಕಾರ ಅಭಿಮತ

ಫಲಿತಾಂಶ ಸುಧಾರಣೆಗೆ ‘ವರದಾ’ ಪ್ರೇರಣೆಯಾಗಲಿ: ಶಾಸಕ ನೆಹರು ಓಲೇಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾದಂಥ ಸಂಕಷ್ಟ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗದಂತೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ 60 ನುರಿತ ಶಿಕ್ಷಕರ ತಂಡ ‘ವರದಾ ಜ್ಞಾನವಾಹಿನಿ’ ಯೂಟ್ಯೂಬ್ ಚಾನಲ್ ಆರಂಭಿಸಿರುವುದು ಶ್ಲಾಘನೀಯ’ ಎಂದು ಶಾಸಕ ನೆಹರು ಓಲೇಕಾರ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ವರದಾ ಜ್ಞಾನವಾಹಿನಿ ಶೈಕ್ಷಣಿಕ ಯುಟ್ಯೂಬ್ ಲೋಕಾರ್ಪಣೆ ಹಾಗೂ ಪ್ರೇರಣಾತ್ಮಕ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಎಸ್.ಎಸ್.ಎಲ್.ಸಿ. ಪಠ್ಯಗಳನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿ, ಯೂಟ್ಯೂಬ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ಸರಳವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಪಾಠಗಳನ್ನು ಬೋಧಿಸಲಾಗಿದೆ. ಶಿಕ್ಷಕರು ಮನಸು ಮಾಡಿದರೆ ಎಂಥ ಬದಲಾವಣೆ ಬೇಕಾದರೂ ತರಬಹುದು. ಶಿಕ್ಷಕರಾಗುವುದು ಪೂರ್ವಜನ್ಮದ ಪುಣ್ಯ ಎಂದು ಹೇಳಿದರು. 

‌ಸಮಗ್ರ ಶಿಕ್ಷಣ ಅಭಿಯಾನ ಜಂಟಿ ನಿರ್ದೇಶಕ ಈರಣ್ಣ ಜತ್ತಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ತರಗತಿಗಳು ಆರಂಭವಾಗದ ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳನ್ನು ತಲುಪುವ ಕಾರ್ಯವನ್ನು ಕೈಗೊಂಡಿದೆ. ಮಂಡ್ಯ ಜಿಲ್ಲೆ ‘ಸವಿ ಮಂಡ್ಯ’ ಹಾಗೂ ಹಾವೇರಿ ಜಿಲ್ಲೆ ‘ವರದಾ ಜ್ಞಾನ ವಾಹಿನಿ’ ಯೂಟ್ಯೂಬ್ ಶೈಕ್ಷಣಿಕ ಚಾನಲ್ ಆರಂಭಗೊಳಿಸಿ ಮಕ್ಕಳ ಕಲಿಕೆಗೆ ಮುಂದಾಗಿರುವುದು ಅಭಿನಂದನೀಯ’ ಎಂದು ತಿಳಿಸಿದರು.

ಡಿಡಿಪಿಐ ಅಂದಾನಪ್ಪ ವಡಗೇರಿ ಮಾತನಾಡಿ, ‘ಕಳೆದ ಸಾಲಿನ ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ವರ್ಷ ಫಲಿತಾಂಶ ಹೆಚ್ಚಿಸಲು ಸಾಕಷ್ಟು ಪರಿಶ್ರಮವಹಿಸಬೇಕಾಗಿದೆ. ಆನ್‍ಲೈನ್ ಕ್ಲಾಸ್‍ಗಳು 70ರಿಂದ 80ರಷ್ಟು ವಿದ್ಯಾರ್ಥಿಗಳಿಗೆ ತಲುಪುತ್ತಿವೆ. ಉಳಿದ ಶೇ 20ರಷ್ಟು ಮಕ್ಕಳನ್ನು ತಲುಪುವ ಕೆಲಸವಾಗಬೇಕು. ಎಂಟು ತಿಂಗಳಿಂದ ಶಿಕ್ಷಕರು ಮನೆಯಲ್ಲಿದ್ದರೂ ಸರ್ಕಾರ ವೇತನ ನೀಡುತ್ತಿದೆ. ಹಾಗಾಗಿ ಹಗಲು-ರಾತ್ರಿ ವಿಶ್ರಾಂತಿ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡೋಣ’ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೃಶ್ಯ ಮಾಧ್ಯಮ ಮೂಲಕ 60 ಪಾಠಗಳನ್ನು ತಯಾರಿಸಲಾಗಿದೆ. ಮಕ್ಕಳಿಗೆ ಸುಲಭವಾಗಿ ಮನನವಾಗಲು ಆಕರ್ಷಕ ಬೋಧನಾ ಕ್ರಮಗಳನ್ನು ಅಳವಡಿಸಲಾಗಿದೆ’ ಎಂದರು. 

ಲ್ಯಾಪ್‍ಟಾಪ್ ವಿತರಣೆ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಟಾಪರ್ಸ್‌ಗಳಿಗೆ ಲ್ಯಾಪ್‍ಟಾಪ್‍ಗಳನ್ನು ಶಾಸಕರಾದ ನೆಹರು ಓಲೇಕಾರ ವಿತರಿಸಿ ಸನ್ಮಾನಿಸಿದರು.

ಡಯಟ್ ಉಪನಿರ್ದೇಶಕ ಡಿ.ಎಂ. ಬಸವರಾಜಪ್ಪ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ, ಚಂದ್ರಣ್ಣ ಪಟ್ಟಣಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.