ಬುಧವಾರ, ಏಪ್ರಿಲ್ 14, 2021
24 °C
ಹಾವೇರಿಯ ಪುರಸಿದ್ಧೇಶ್ವರ ದೇವಾಲಯಕ್ಕೆ ಭಕ್ತರ ದಂಡು: ದೇಗುಲಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ

ಶಿವನ ಆರಾಧನೆಯಲ್ಲಿ ಮಿಂದೆದ್ದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಹಾಶಿವರಾತ್ರಿ’ ಅಂಗವಾಗಿ ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಭಕ್ತರು ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಂದ ಶಿವನಾಮ ಸ್ಮರಣೆ, ಘಂಟೆ ಜಾಗಟೆ, ಶಂಖ ನಾದಗಳು ಮೊಳಗಿದವು. 

ನಗರದ ಪುರಸಿದ್ಧೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 12.30ರವರೆಗೆ ನಿರಂತರವಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಡೀ ದೇಗುಲವನ್ನು ಬಲೂನುಗಳಿಂದ‌ ಅಲಂಕಾರ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು. ಬೆಳಿಗ್ಗೆ 7 ಗಂಟೆಗೆ ರುದ್ರಾಭಿಷೇಕ, ನಂತರ ಶಿವನಿಗೆ ಬೆಣ್ಣೆ ಅಲಂಕಾರ, ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.  

ಭಕ್ತರು ವಿಶೇಷ ಅರ್ಚನೆ, ಅಭಿಷೇಕ, ಪೂಜೆ ಮಾಡಿಸುವ ಮೂಲಕ ತಮ್ಮ ಬೇಡಿಕೆಗಳು ಈಡೇರಲಿ ಎಂದು ಶಿವನಲ್ಲಿ ಬೇಡಿಕೊಂಡರು. ಈ ವಿಶೇಷ ದಿನದಂದು ಶಿವನನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ ಎಂದು ಅರ್ಚಕರಾದ ಅಜ್ಜಯ ಶಾಸ್ತ್ರಿ ಮತ್ತು ಚಂದ್ರಶೇಖರ ಶಾಸ್ತ್ರಿ ಹೇಳಿದರು. 

ಹಾವೇರಿಯ ಬಸವೇಶ್ವರ ನಗರದ ಶಿವನ ಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಮತ್ತು ಮಕ್ಕಳು ಹೊಸ ಉಡುಪು ಧರಿಸಿ, ಪೂಜಾ ಸಾಮಗ್ರಿಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಅಶ್ವಿನಿ ನಗರದಲ್ಲಿರುವ ಬೃಹತ್‌ ಶಿವನ ಮೂರ್ತಿಗೆ ಹೂವು ಮತ್ತು ದೀಪಗಳಿಂದ ಅಲಂಕಾರ ಮಾಡಲಾಗಿತ್ತು. 

ಅಗಡಿ ಗ್ರಾಮದ ಹಣ್ಣಿನ ವ್ಯಾಪಾರಿ ಬಿದ್ದಾಡಪ್ಪ ಸುಣಗಾರ ಭಕ್ತರಿಗೆ ಉಚಿತವಾಗಿ ಕಲ್ಲಂಗಡಿ ಹಣ್ಣುಗಳನ್ನು ವಿತರಿಸಿದರು. ಕೆಲವು ಭಕ್ತರು ಪ್ರಸಾದವನ್ನು ಹಂಚಿದರು. ಹೂವು ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಜನರು ನೂಕುನುಗ್ಗಲಲ್ಲಿ ನಿಂತು, ಹೂವು, ಹಣ್ಣು, ಬಾಳೇಕಂದು, ತಳಿರು ತೋರಣಗಳನ್ನು ಖರೀದಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು