ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಪ ಸಾಬೀತಿಗೆ ದಾಖಲೆ ನೀಡಲಿ’

ರುದ್ರಪ್ಪ ಲಮಾಣಿಗೆ ಶಾಸಕ ನೆಹರು ಓಲೇಕಾರ ಸವಾಲ್‌
Last Updated 2 ನವೆಂಬರ್ 2020, 13:39 IST
ಅಕ್ಷರ ಗಾತ್ರ

ಹಾವೇರಿ: ‘ಕಾಂಗ್ರೆಸ್‌ನ ಮೂವರು ನಗರಸಭಾ ಸದಸ್ಯರ ಮೇಲೆ ಶಾಸಕರೇ ‘ಜಾತಿ ನಿಂದನೆ’ ಪ್ರಕರಣ ಹಾಕಿಸಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ನೇರವಾಗಿ ಆರೋಪ ಮಾಡಿದ್ದಾರೆ. ಆರೋಪ ಸಾಬೀತಪಡಿಸಲು ಅವರು ದಾಖಲೆ ಬಿಡುಗಡೆ ಮಾಡಿದರೆ ಒಪ್ಪಿಕೊಳ್ಳಲು ಸಿದ್ಧ’ ಎಂದು ಶಾಸಕ ನೆಹರು ಓಲೇಕಾರ್‌ ಸವಾಲು ಹಾಕಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾಗೇಂದ್ರನಮಟ್ಟಿಯ ಶಾಂತಾ ಡೊಂಬರಹಳ್ಳಿ ಅವರಿಗೆ ಸಂಬಂಧಪಟ್ಟ ಪ್ರಕರಣ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಕಾಕತಾಳೀಯ ಎಂಬಂತೆ ಚುನಾವಣೆ ಸಮಯದಲ್ಲಿ ಆ ಮಹಿಳೆ ದೂರು ನೀಡಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಕಾಂಗ್ರೆಸ್‌ ಪಕ್ಷದವರು ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ಶುದ್ಧ ಮೂರ್ಖತನದ ಕೆಲಸ. ಆ ಹೆಣ್ಣುಮಗಳ ಬಗ್ಗೆ ನಮಗೆ ಗೊತ್ತಿಲ್ಲ’ ಎಂದು ತಿರುಗೇಟು ನೀಡಿದರು.

‘ನನ್ನ ಅವಧಿಯ ಸಾಧನೆಯ ದಾಖಲೆಯನ್ನು ಬಿಡುಗಡೆ ಮಾಡಿದ್ದೇನೆ. ರುದ್ರಪ್ಪ ಲಮಾಣಿ ಕೂಡ ಅವರ ಸಾಧನೆಯ ಪಟ್ಟಿ ಬಿಡುಗಡೆ ಮಾಡಲಿ. ಕಾನೂನು ಅಂದ್ರೆ ಓಲೇಕಾರ, ಓಲೇಕಾರ ಅಂದ್ರೆ ಕಾನೂನು. ಬಾಯಿ ಚಪಲ ತೀರಿಸಿಕೊಳ್ಳಲು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಬಿಜೆಪಿ ಸದಸ್ಯರಿಗೆ ಹಣದ ಆಮಿಷ:

‘ಕಾಂಗ್ರೆಸ್‌ನವರು ಈ ಹಿಂದೆ, ಐವರು ಬಿಜೆಪಿಯ ನಗರಸಭಾ ಸದಸ್ಯರಿಗೆ ಹಣದ ಆಮಿಷ ತೋರಿಸಿ, ಅಧ್ಯಕ್ಷ ಸ್ಥಾನ ಪಡೆದಿದ್ದರು. ಇದು ಪ್ರಜಾಪ್ರಭುತ್ವ ನಡವಳಿಕೆಯೇ? ಗೃಹಮಂತ್ರಿ ನಮ್ಮವರೇ ಇದ್ದರು. ಮನಸು ಮಾಡಿದ್ದರೆ ಮೂವರು ನಗರಸಭಾ ಸದಸ್ಯರನ್ನು ಬಂಧಿಸಬಹುದಿತ್ತು. ಅಂಥ ಕೆಲಸ ನಾವು ಮಾಡಿಲ್ಲ. ಹಾಗಾಗಿ ಆರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ ಸದಸ್ಯರು ಮಾಡಿರುವ ಘನಂದಾರಿ ಕೆಲಸಗಳು ಅವರನ್ನು ಸುತ್ತಿಕೊಳ್ಳುತ್ತಿವೆ. ಕಳೆದ ವರ್ಷ ಒಬ್ಬರು ದೂರು ನೀಡಿದ ಸಂದರ್ಭ ಪಠಾಣ ಮತ್ತು ಇತರರು ತಲೆಮರೆಸಿಕೊಂಡ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು.

ತನಿಖೆ ನಡೆಸಿ ಕಾನೂನು ಕ್ರಮ:ನಾಗೇಂದ್ರನಮಟ್ಟಿಯಲ್ಲಿರುವ ನಾಯಕರು, ಮೂರು ಸಾರ್ವಜನಿಕ ಉದ್ಯಾನ ಮತ್ತು ಸಂತೆಗೆ ಮೀಸಲಿಟ್ಟ ಜಾಗವನ್ನು ಖೊಟ್ಟಿ ಹಕ್ಕುಪತ್ರ ಕೊಟ್ಟು ಮನೆ ನಿರ್ಮಾಣ ಮಾಡಿಸಿದ್ದಾರೆ. ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ,ಕೊಳಚೆ ಪ್ರದೇಶದ ವ್ಯಾಪ್ತಿಗೆ ಒಳಪಡದ ಜಾಗದಲ್ಲಿ ಪ್ಲಾಟ್‌ ನಿರ್ಮಾಣ ಮಾಡಿದ್ದಾರೆ. ಸಾರ್ವಜನಿಕರಿಗೆ ನೀಡಿರುವ ಜಾಗವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ನಗರಸಭೆಯಿಂದ ಸಮಿತಿ ರಚಿಸಿ, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಹಾಗೂ ನಗರಸಭಾ ಸದಸ್ಯರು, ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT