ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟೂರಿಗೆ ಮೆರುಗು ತಂದ ಪುರವಂತಿಕೆ ಮತ್ತು ನಂದಿಕೋಲು ಕುಣಿತ

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ‘ಸಂಗಮೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಸಾಂಸ್ಕೃತಿಕ ಸಂಘ’
Last Updated 5 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ಅಪ್ಪಟ ಜಾನಪದ ಕಲೆಗಳಾದ ಪುರವಂತಿಕೆ (ವೀರಗಾಸೆ) ಮತ್ತು ನಂದಿಕೋಲು ಕುಣಿತದಲ್ಲಿ ಛಾಪು ಮೂಡಿಸಿರುವ ರಾಣೆಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ಕಲಾವಿದ ಮಹೇಶ್ ಶೇಖಪ್ಪ ಕಾಯಕದ ನೇತೃತ್ವದ ‘ಸಂಗಮೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಸಾಂಸ್ಕೃತಿಕ ಸಂಘ’ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರವಂತಿಕೆಯು ಶೈವ ಪಂಥದಿಂದಲೇ ಹುಟ್ಟಿದ್ದು, ಶರಣರ ಚಳವಳಿಯ ಕಾಲಕ್ಕೆ ಸೇರಿದ್ದಾಗಿದೆ. ಪ್ರಸ್ತುತ ಕಲೆಯ ಮುಖ್ಯ ನೆಲೆ ವೀರಭದ್ರನಾಗಿದ್ದು, ವೀರಭದ್ರನ ಪಾರಮ್ಯವನ್ನು ಹೇಳುವುದೇ ಇಲ್ಲಿನ ಕಥಾವಸ್ತು. ಇಲ್ಲಿ ವೀರಭದ್ರನ ಅವತಾರವೇ ಪ್ರಮುಖ ಮತ್ತು ವಿಶೇಷ.

ಪುರಾತನ ಕಾಲದ ಸುಸಂಸ್ಕೃತ, ಸಂಸ್ಕಾರ ಪೂರ್ಣ ಕಥೆಗಳನ್ನು ನೆರೆದ ಪ್ರೇಕ್ಷಕರಿಗೆ ಮನ ಮುಟ್ಟುವ ರೀತಿ ಹೇಳುವ ಕಥನ ಪದ್ಧತಿ ಇದಾಗಿದೆ. ಈ ಕಲೆಯನ್ನು ಪುರವಂತರು ಕರಗತ ಮಾಡಿಕೊಂಡಿರುತ್ತಾರೆ. ಸಮಾಳ ವಾದನದ ನಾದಕ್ಕೆ ತಕ್ಕಂತೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ಹೆಜ್ಜೆ ಕುಣಿತದ ವೈಶಿಷ್ಟ್ಯತೆ ಜಾತ್ರೆ, ವಿವಿಧ ಕಾರ್ಯಕ್ರಮಗಳಲ್ಲಿ ನಡೆಯುವ ಮೆರವಣಿಗೆಗೆ ವಿಶೇಷ ಮೆರುಗು ನೀಡುತ್ತದೆ.

ಸಮಾಳವೇ ಮುಖ್ಯ ವಾದ್ಯ:‘ಶರೀರದ ವಿವಿಧ ಅಂಗಗಳಿಗೆ ಶಸ್ತ್ರ ಹಾಕಿಕೊಳ್ಳುವುದು ನಮ್ಮ ಸಂಪ್ರದಾಯದ ವಿಶೇಷ. ಇದಕ್ಕೆ ಗುಗ್ಗಳ ಎಬ್ಬಿಸುವುದು ಎಂದು ಕರೆಯುತ್ತಾರೆ. ವೀರಗಾಸೆ ಕುಣಿತಕ್ಕೆ ಸಮಾಳವೇ ಮುಖ್ಯ ವಾದ್ಯ. ಇದನ್ನು ನಾವೇ ತಯಾರಿಸಿಕೊಳ್ಳುತ್ತೇವೆ. ಇದರ ತೂಕ ಬರೋಬ್ಬರಿ 15 ಕೆ.ಜಿ. ಇದರಿಂದ ಬರುವ ಸದ್ದು ಹೆಜ್ಜೆ ಹಾಕಲು ಹುಮ್ಮಸ್ಸು ತುಂಬುತ್ತದೆ. ವೀರಾವೇಷದ ವೀರಭದ್ರನ ಕುಣಿತಕ್ಕೆ ಪ್ರೇರಣೆ ನೀಡುತ್ತದೆ’ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಮಹೇಶ್ ಕಾಯಕದ ವಿವರಿಸಿದರು.

ಬನವಾಸಿ ಕದಂಬೋತ್ಸವ, ಹಂಪಿ ಉತ್ಸವ, ಮೈಸೂರು ದಸರಾ ಮಹೋತ್ಸವ ಮತ್ತು ಅಖಿಲ ಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನ ಸೇರಿದಂತೆ ನೂರಾರು ಸಾಂಸ್ಕೃತಿಕ ವೈಭವ ಬಿಂಬಿಸುವ ಕನ್ನಡ ಪರ ಸಂಭ್ರಮದ ಮೆರವಣಿಗೆಯಲ್ಲಿ ತಂಡ ಭಾಗವಹಿಸಿ ಪ್ರಶಸ್ತಿ, ಸನ್ಮಾನದೊಂದಿಗೆ ಪ್ರಶಂಸೆಗೆ ಪಾತ್ರವಾಗಿದೆ.

ಸಿನಿಮಾದಲ್ಲಿ ಮಿಂಚು:ನಮ್ಮ ತಂಡದ ಕಲಾವಿದರೊಂದಿಗೆ ‘ಭೀಮಾ ತೀರದಲ್ಲಿ’ ಸಿನಿಮಾದ ಗಡಗಡ ರುದ್ರ ಹಾಡಿಗೆ ನಟ ದುನಿಯಾ ವಿಜಯ್ ವೀರಭದ್ರನ ವೇಷ ಧರಿಸಿ ಹೆಜ್ಜೆ ಹಾಕಿದ್ದಾರೆ. ಚಂದನ ಟಿವಿ, ಆಕಾಶವಾಣಿ ಧಾರವಾಡ ಕೇಂದ್ರ ನಡೆಸಿದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಗ್ರಾಮದ ಮುಖಂಡರಾದ ಜಯಣ್ಣ ಮಾಗನೂರ, ಎಸ್. ಎಚ್ ನಂದಿಹಳ್ಳಿ, ಪ್ರಭು ಕರಿಯಪ್ಪನವರ ಹೆಮ್ಮೆಯಿಂದ ನುಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮೀಣ ಸೊಗಡಿನ ಜಾನಪದ ಕಲೆಗಳಿಗೆ ಹೆಚ್ಚು ಉತ್ತೇಜನ ಸಿಗುತ್ತಿರುವುದು ಖುಷಿಯ ಸಂಗತಿ. ಅವಕಾಶ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿದ ನಮ್ಮ ತಂಡದ ಕಲಾವಿದರೂ ಸಹ ವಿದೇಶದಲ್ಲಿ ಪ್ರದರ್ಶನ ನೀಡುವ ಅಭಿಲಾಷೆ ಇದೆ. ಇದಕ್ಕೆ ಅಗತ್ಯ ಪ್ರಯತ್ನವೂ ಸಾಗಿದೆ’ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಕೆ.ಸಿ. ಮಹೇಶ್ವರಪ್ಪ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟು ಬಸವರಾಜ ಧರ್ಮಪ್ಪ ಮಾಗನೂರು, ಮಧುಮತಿ ಗುಡ್ಡನಗೌಡ ಮಾಜಿಪಾಟೀಲ ರಾಷ್ಟ್ರ ಮಟ್ಟದ ಕೊಕ್ಕೊ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT