ಪ್ರತ್ಯೇಕ ರಾಜ್ಯ ಬೇಡ: ಅಭಿವೃದ್ಧಿ ಬೇಕು

7
ಅಖಂಡ ಕರ್ನಾಟಕದ ಪರವಾಗಿದನಿ ಎತ್ತಿದ ಸಾಮಾಜಿಕ ಹೋರಾಟಗಾರು, ಸಂಘಟನೆಗಳು, ಸಾಹಿತಿಗಳು

ಪ್ರತ್ಯೇಕ ರಾಜ್ಯ ಬೇಡ: ಅಭಿವೃದ್ಧಿ ಬೇಕು

Published:
Updated:
Deccan Herald

ಹಾವೇರಿ:  ಹಿಂದುಳಿದಿರುವ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಡಿಸಬೇಕೇ ಹೊರತು, ಕರ್ಣಾಟಕವನ್ನು ವಿಭಜಿಸಬಾರದು. ಅಸಂಖ್ಯಾತ ಹಿರಿಯರ ಹೋರಾಟದಿಂದ ರೂಪುಗೊಂಡ ಕರ್ನಾಟಕವು ಅಖಂಡವಾಗಿರಬೇಕು. ಪ್ರತ್ಯೇಕ ರಾಜ್ಯ ರಚನೆ ಬೇಡ ಎಂದು ಜಿಲ್ಲೆಯ ಸಾಹಿತಿಗಳು, ದಲಿತ ಸಂಘಟನೆಗಳ ಮುಖಂಡರು, ಲಿಂಗತ್ವ ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರು ಬುಧವಾರ ಇಲ್ಲಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು, ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ. ಪ್ರಾದೇಶಿಕ ಅಸಮತೋಲನ ಸರಿಪಡಿಸಿ. ಆದರೆ, ಕರ್ನಾಟಕ ಅಖಂಡವಾಗಿರಲಿ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಬಸವರಾಜ ಲಿಂ. ಟೀಕೆಹಳ್ಳಿ ಮಾತನಾಡಿ, ‘ಪ್ರತ್ಯೇಕ ರಾಜ್ಯ ಮಾಡಿದರೆ ಏನು ಪ್ರಯೋಜನ? ಅಭಿವೃದ್ಧಿಯಾಗುತ್ತದೆಯೇ? ಇಷ್ಟು ವರ್ಷಗಳ ಕಾಲ ಶಾಸಕರು, ಸಚಿವರು, ಸಂಸದರು ನಿರ್ಲಕ್ಷ್ಯ ವಹಿಸಿದ ಕಾರಣ ಹಿಂದುಳಿದಿದೆ ಎಂದು ಆರೋಪಿಸಿದರು.

ಕರ್ನಾಟಕವನ್ನು ಒಡೆಯಲು ಹೊರಟಿರುವವರು ಇಷ್ಟು ದಿನ ಏನು ಮಾಡುತ್ತಿದ್ದರು? ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಏಕೆ ಸಾಧ್ಯವಾಗಿಲ್ಲ? ಸಮಸ್ಯೆಗಳನ್ನು ಬಗೆಹರಿಸದೇ ರಾಜ್ಯ ಒಡೆದು ಅಧಿಕಾರದ ಗದ್ದುಗೆ ಏರುವ ಕನಸು ಏಕೆ ಕಾಣುತ್ತಿದ್ದೀರಿ? ಎಂದು ಸವಾಲು ಹಾಕಿದರು.

ಪ್ರತಿ ತಾಲ್ಲೂಕಿಗೆ ಎರಡು ಕೈಗಾರಿಕೆ, ಉದ್ಯೋಗ ಸೃಷ್ಟಿ, ಅಭಿವೃದ್ಧಿಗೆ ಅನುದಾನ, ವಿವಿಧ ಇಲಾಖೆಗಳ ಪ್ರಾದೇಶಿಕ ಕಚೇರಿಗಳು, ಮತ್ತಿತರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಆಗ್ರಹಿಸಿದರು.

ಈ ಭಾಗದ ರೈತರ ನೈತಿಕತೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿರುವುದು ತಪ್ಪು. ಅವರು ರಾಜ್ಯದ ಮುಖ್ಯಮಂತ್ರಿ. ಸಂಪೂರ್ಣ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಿ, ಅಭಿವೃದ್ಧಿಗೆ ಮುಂದಾಗಬೇಕು. ಅಖಂಡ ಕರ್ನಾಟಕವನ್ನು ಉಳಿಸ ಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಹೋರಾಟಗಾರ್ತಿ ಪರಿಮಳಾ ಜೈನ್ ಮಾತನಾಡಿ, ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ಹಿರಿಯರು ತ್ಯಾಗ-ಬಲಿದಾನ ಮಾಡಿದ್ದಾರೆ. ಇದು, ಅಖಂಡ ಕರ್ನಾಟಕವಾಗಿ ಉಳಿಯಬೇಕು. ಈ ಭಾಗದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ, ಅಖಂಡ ಕರ್ನಾಟಕ ಒಡೆಯುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ಪ್ರತ್ಯೇಕ ರಾಜ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಉಮೇಶ ಕತ್ತಿ, ಶ್ರೀರಾಮುಲು ಮತ್ತಿತರರು ಅಭಿವೃದ್ಧಿಗೆ ನೀಡಿದ ಕೊಡುಗೆಗಳೇನು? ಜಗದೀಶ ಶೆಟ್ಟರ್ ಸೇರಿದಂತೆ ಈ ಭಾಗದವರು ಮುಖ್ಯಮಂತ್ರಿ, ಸಚಿವ ಸ್ಥಾನಗಳನ್ನು ಅಲಂಕರಿಸಿದರೂ, ಅಭಿವೃದ್ದಿ ಏಕೆ ಮಾಡಿಲ್ಲ. ಪ್ರತ್ಯೇಕ ರಾಜ್ಯ ಕೇಳುವ ಮಠಾಧೀಶರು, ಕುಮ್ಮಕ್ಕು ನೀಡುವ ರಾಜಕಾರಣಿಗಳೆಲ್ಲ ಮಹದಾಯಿ ಹೋರಾಟದಲ್ಲಿ ಏಕೆ ಕೈಜೋಡಿಸಿಲ್ಲ. ಈ ಹೋರಾಟದ ಹುನ್ನಾರ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಮುಖರಾದ ಹರೀಶ ಇಂಗಳಗೊಂದಿ, ಶಿವಶಂಕರ ಟೀಕೆಹಳ್ಳಿ, ಶಿಲ್ಪಿ ವಿನಯ್, ಗಂಗಾಧರ ನಂದಿ, ನಿಜಲಿಂಗಪ್ಪ ಬಸೇಗಣ್ಣಿ, ಹನುಮಂತಗೌಡ ಗೊಲ್ಲರ, ಹೊನ್ನಪ್ಪ ತಗಡಿನಮನಿ, ಲಕ್ಷ್ಮಿ ಜಿಂಗಾಡೆ, ನಾಗರಾಜ ಮಳಗಾವಿ, ದುರಗೇಶ ಮೇಗಳಮನಿ, ಅಶೋಕ ದೇವಿಹೊಸೂರ, ಕರಬಸಪ್ಪ ನವಲೆ, ವಿಷ್ಣು ಜಿಂಗಾಡೆ, ಅಷ್ಫಾಕ್ ಮಳಗಿ, ಮಾಲತೇಶ ಪಾಟೀಲ ಇದ್ದರು. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !