ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸಭಾವಿಯಲ್ಲಿ ಮೊಗೆದಷ್ಟೂ ಸಮಸ್ಯೆಗಳು: ಕೊಳಚೆ ಪ್ರದೇಶ ಸುಧಾರಣೆಗೆ ಆಗ್ರಹ

ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮನವಿ
Last Updated 3 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಹಂಸಭಾವಿ: ರಸ್ತೆ ಪಕ್ಕ ಹರಡಿರುವ ಕಸದ ರಾಶಿ, ಹೂಳು ತುಂಬಿದ ಚರಂಡಿಗಳು, ಮಿತಿಮೀರಿದ ಹಂದಿ ಹಾವಳಿ, ಸಾರ್ವಜನಿಕ ಶೌಚಾಲಯದ ಕೊರತೆ... ಹೀಗೆ ಹಂಸಭಾವಿಯಲ್ಲಿ ಸಮಸ್ಯೆಗಳದ್ದೇ ಕಾರುಬಾರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ದೊಡ್ಡ ಕೊಳಚೆ ಪ್ರದೇಶ ಸೃಷ್ಟಿಯಾಗಿದೆ. ಏಳೆಂಟು ವರ್ಷಗಳಿಂದ ಯಾವುದೇ ಸುಧಾರಣೆಯಾಗದ ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯಾ ಬ್ಯಾಂಕ್ ಹಿಂಭಾದಲ್ಲಿ ಇಲ್ಲಿನ ಹಡಪದ ಅಪ್ಪಣ್ಣ ಸಮಾಜದವರು ಹಡಪದ ಅಪ್ಪಣ್ಣನ ಗದ್ದುಗೆಯನ್ನು ಎಂಟು ವರ್ಷಗಳ ಹಿಂದೆಯೇ ನಿರ್ಮಿಸಿಕೊಂಡಿದ್ದಾರೆ. ಪ್ರತಿನಿತ್ಯ ಅಲ್ಲಿಗೆ ಪೂಜೆ ಮಾಡಲು ಬರುವ ಸಂದರ್ಭ ಇದೇ ಕೊಳಚೆಯನ್ನು ದಾಟಿಕೊಂಡೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

‘ಎಗ್ ರೈಸ್ ಅಂಗಡಿಯವರು, ಬೇಕರಿ, ಬಟ್ಟೆ ಅಂಗಡಿಗಳ ತ್ಯಾಜ್ಯವನ್ನು ದಿನವೂ ತಂದು ಇಲ್ಲಿಗೆ ಸುರಿಯುತ್ತಾರೆ. ಜೊತೆಗೆ ಜನರು ಮೂತ್ರ ವಿಸರ್ಜನೆಯನ್ನೂ ಮಾಡುತ್ತಾರೆ. ಇಲ್ಲಿ ನಾವು ಎದುರಿಗಿದ್ದರೂ ಜನರು ಕಸವನ್ನು ರಾಜಾರೋಷವಾಗಿ ತಂದು ಸುರಿಯುತ್ತಾರೆ. ನಮ್ಮ ಹಡಪದ ಅಪ್ಪಣ್ಣರ ಗದ್ದುಗೆಗೆ ಹೋಗಲು ದಾರಿ ಮಾಡಿ ಕೊಡಿ ಎಂದು ಗ್ರಾಮ ಪಂಚಾಯ್ತಿಯವರಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ನಿವಾಸಿ ಹೊಳಬಸಪ್ಪ ಹಡಪದ ತಿಳಿಸಿದರು.

ಕಸದ ತೊಟ್ಟಿ ಇಡಿ:ಗ್ರಾಮದಲ್ಲಿ ಕಸದ ತೊಟ್ಟಿಗಳಿಲ್ಲದ ಕಾರಣ ಸಾರ್ವಜನಿಕರು, ಅಂಗಡಿಗಳ ಮಾಲೀಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಇದರಿಂದ ಕಸದ ರಾಶಿಗಳಿರುವ ಜಾಗಗಳಲ್ಲಿ ಬೀದಿನಾಯಿಗಳ ಹಿಂಡೇ ಕಂಡು ಬರುತ್ತದೆ. ಹಂದಿಗಳ ಹಾವಳಿ ಕೂಡ ಮಿತಿಮೀರಿದೆ. ನಾಯಿ ಮತ್ತು ಹಂದಿಗಳು ಕಸವನ್ನು ಕೆದರಿ ರಸ್ತೆಯ ತುಂಬ ಹರಡುತ್ತವೆ.

ಹೀಗಾಗಿ ಬಸ್ ನಿಲ್ದಾಣ, ಕಾಲೇಜು ನಿಲ್ದಾಣ, ಪೊಲೀಸ್ ಠಾಣೆ ಎದುರು, ಬೆಂಗಳೂರ ಕ್ರಾಸ್‌ನಲ್ಲಿ ಗ್ರಾಮ ಪಂಚಾಯ್ತಿಯವರು ಕಸದ ತೊಟ್ಟಿಗಳನ್ನು ಇಟ್ಟು, ಗ್ರಾಮವನ್ನು ಕೊಳಚೆ ಮುಕ್ತವಾಗಿಸಬೇಕು ಎಂದು ಗ್ರಾಮದ ಗಿರೀಶ ಕೊಳ್ಳಿ ಒತ್ತಾಯಿಸಿದರು.

ಸಾರ್ವಜನಿಕ ಶೌಚಾಲಯ ಇಲ್ಲ:ಗ್ರಾಮದಲ್ಲಿ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಪ್ರತಿದಿನ ಸುತ್ತಲಿನ ಗ್ರಾಮಗಳಿಂದ ಇಲ್ಲಿಗೆ ಬರುವ ಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಮೂತ್ರ ವಿಸರ್ಜನೆ ಮತ್ತು ಶೌಚಕ್ಕೆಪರದಾಡುವಂತಾಗಿದೆ. ಹೊರಗಿನಿಂದ ಬರುವ ಜನರು ಪಾಳು ಬಿದ್ದ ಜಾಗಗಳಲ್ಲಿ ಬಯಲುಶೌಚ ಮಾಡುವ ದೃಶ್ಯಗಳು ಕಂಡು ಬರುತ್ತಿವೆ.

***

ರಸ್ತೆ, ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಜಾಗದ ವ್ಯಾಜ್ಯ ಇತ್ಯರ್ಥವಾದ ಕೂಡಲೇ ಕಾಮಗಾರಿ ಮಾಡಲಾಗುವುದು.
– ಸಂಗೀತಾ ಹರಿಜನ, ಗ್ರಾ.ಪಂ. ಅಧ್ಯಕ್ಷೆ, ಹಂಸಭಾವಿ

***

ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಕಾಲೇಜು ನಿಲ್ದಾಣದ ಸಮೀಪ ಸಾರ್ವಜನಿಕ ಶೌಚಾಲಯ ನಿರ್ಮಿಸಿ.
– ಪುಟ್ಟಪ್ಪ ವಾಲಿ, ಹಂಸಭಾವಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT