ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಒಡೆದು ಆಳುವ ನೀತಿ: ಜಮೀರ್‌ ಅಹಮದ್‌ ಖಾನ್‌

ನಾಡಹಬ್ಬದಂತೆ ಸಿದ್ದರಾಮಯ್ಯನವರ ಜನ್ಮದಿನೋತ್ಸವ ಆಚರಿಸಿ
Last Updated 25 ಜುಲೈ 2022, 14:37 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ ಬಿಜೆಪಿ ಹಿಂದೂ-ಮುಸ್ಲಿಮರ ಮಧ್ಯೆ ವಿಷಬೀಜ ಬಿತ್ತಿ ಭಾವೈಕ್ಯಕ್ಕೆ ಧಕ್ಕೆ ತರುತ್ತಿದೆ. ಬ್ರಿಟಿಷರ ಒಡೆದಾಳುವ ನೀತಿಯನ್ನೇ ಆರ್‌ಎಸ್‌ಎಸ್‌ ಜೊತೆಗೆ ಸೇರಿ ಬಿಜೆಪಿ ಮಾಡುತ್ತಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಕೊಡುಗೆಯಿದೆ’ ಎಂದುಶಾಸಕ ಜಮೀರ ಅಹಮದ್‌ ಖಾನ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಅಮೃತ ಮಹೋತ್ಸವ ಆಚರಣೆ ಪೂರ್ವಭಾವಿಯಾಗಿ ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಸೋಮವಾರ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ನಾವೂ ಹಿಂದೂಸ್ತಾನಿಗಳೇ. ಈ ಕಾರಣಕ್ಕೇ ‘ಸಾರೇ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ’ ಎನ್ನುವ ಮೂಲ ಮಂತ್ರವನ್ನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ ಎಂದರು.

‘ಸರ್ವ ಜನಾಂಗದ ಸಮೃದ್ಧಿಯ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ನಮ್ಮೆಲ್ಲರ ನಾಯಕರು. ಅವರೆಂದೂ ಜನ್ಮದಿನ ಆಚರಿಸಿಕೊಂಡವರಲ್ಲ. 75ನೇ ವರ್ಷಕ್ಕೆ ಅವರು ಕಾಲಿಡುತ್ತಿರುವ ಈ ಸಂಭ್ರಮವನ್ನು ನಾವೆಲ್ಲಾ ನಾಡಹಬ್ಬದ ರೀತಿ, ನಮ್ಮೆಲ್ಲರ ಜನ್ಮದಿನವೆಂದು ಆಚರಿಸಬೇಕು’ ಎಂದು ಕರೆ ನೀಡಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಜಾತ್ಯತೀತ ಶಕ್ತಿಗೆ ಅಲ್ಪಸಂಖ್ಯಾತರು ಬಲು ತುಂಬುತ್ತಾ ಬಂದಿದ್ದೀರಿ. ವಿಷಬೀಜ ಬಿತ್ತುವವರ ಮಾತಿಗೆ ನೀವು ಕಿವಿಗೊಡಬೇಡಿ. ಬಿಜೆಪಿ ಸರ್ಕಾರ ಕೋಮುಗಳ ನಡುವೆ ಒಡಕು ಸೃಷ್ಟಿಸಿ, ಬೇರ್ಪಡಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಮಾತನಾಡಿ, ಸಿದ್ದರಾಮಯ್ಯನವರ 5 ವರ್ಷದ ಆಡಳಿತವನ್ನು ಎಲ್ಲರೂ ಮೆಚ್ಚಿದ್ದಾರೆ. ಅವರ ಜನ್ಮದಿನ ಸಮಾರಂಭಕ್ಕೆ ಎಲ್ಲರೂ ಸ್ವಯಂಪ್ರೇರಿತವಾಗಿ ಭಾಗವಹಿಸಿ ಬಲ ಪ್ರದರ್ಶಿಸಬೇಕು ಎಂದರು.

ಅನಿಲಕುಮಾರ ಪಾಟೀಲ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಶಾಸಕ ಸೋಮಣ್ಣ ಬೇವಿನಮರದ, ಪ್ರಸನ್ನಕುಮಾರ ಹಿರೇಮಠ ಮುಂತಾದವರು ಇದ್ದರು.

‘ಮುಂದಿನ ಸಿಎಂ: ಮುನ್ಸೂಚನೆ ಸಿಕ್ಕಿದೆ’

ರೈತರು ಭೂಮಿಗೆ ಬೀಜ ಹಾಕುವ ಮುನ್ನ ಮಳೆಗಾಗಿ ಕಾಯುತ್ತಾರೆ. ಬಿಸಿಲು ಹೋಗಿ ತಣ್ಣನೆ ಗಾಳಿ ಬೀಸುವಾಗ ಬರುವ ಮಣ್ಣಿನ ವಾಸನೆ ಆಧರಿಸಿ ಮುಂದೆ ಮಳೆ ಬರುವ ಮುನ್ಸೂಚನೆಯನ್ನು ತಿಳಿದು, ಭೂಮಿಗೆ ಬೀಜ ಬಿತ್ತುತ್ತಾರೆ. ಅದರಂತೆ ಜಮೀರ್ ಅಹಮದ್‌ ಅವರು ರಾಜ್ಯದಲ್ಲಿ ಪ್ರವಾಸ ಮಾಡಿದಾಗ ಜನರಿಂದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ವಾಸನೆ ಜಮೀರ್‌ ಅವರಿಗೆ ದೊರೆತಿದೆ ಎಂದು ಅಜೀಂಪೀರ್ ಖಾದ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT