ರಾಣೆಬೆನ್ನೂರು: ಇಲ್ಲಿನ ಹೊರವಲಯದಲ್ಲಿರುವ ಚಿದಂಬರ ನಗರ ಹಾಗೂ ದಾನೇಶ್ವರಿ ನಗರದ ಜನತೆ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ನದಿ ನೀರು ಪೂರೈಕೆ, 24x7 ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಗಳು ಇವರ ಪಾಲಿಗೆ ಮರೀಚಿಕೆಯಾಗಿವೆ.ಚಿದಂಬರ ನಗರದ ಲೇಔಟ್ ಆಗಿ 15 ವರ್ಷ ಕಳೆದರೂ ಈವರೆಗೂ ಪಾರ್ಕ್ ಅಭಿವೃದ್ಧಿ ಕಂಡಿಲ್ಲ.
ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗಿದೆ. ಸುತ್ತಲೂ ಫೆನ್ಸಿಂಗ್ ಬಿಟ್ಟರೆ ಏನೂ ಅಭಿವೃದ್ಧಿಗೊಂಡಿಲ್ಲ. ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿವೆ. ಕೊಳಚೆ ನೀರು ಮುಂದೆ ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ದುರ್ನಾತ ಬೀರುತ್ತಿದೆ.
ಸೊಳ್ಳೆಗಳ ಕಾಟ ತಾಳಲಾರದೇ ಮನೆಯಲ್ಲಿ ಮಕ್ಕಳು, ಹಿರಿಯರು ಚಡಪಡಿಸುವಂತಾಗಿದೆ. ಮಳೆಗಾಲವಾಗಿದ್ದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ಹೆಚ್ಚಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ್ದಕ್ಕೆ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ.ಮೂಲಸೌಲಭ್ಯಗಳಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಸಮಸ್ಯೆ ತೋಡಿಕೊಂಡರು.
ಮಾಗೋಡ ವೃತ್ತದ ಹಳೆ ಹೆದ್ದಾರಿ ಡಿವೈಡರ್ ರಸ್ತೆಯಿಂದ ಹುಣಸೀಕಟ್ಟಿ ಸೇರುವ ಮುಖ್ಯ ರಸ್ತೆಯದ್ದೇ ದೊಡ್ಡ ಸಮಸ್ಯೆಯಾಗಿದೆ. (ರಿಂಗ್ ರೋಡ್) ಸಂಪೂರ್ಣ ಹದಗೆಟ್ಟು ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಬೈಕ್ ಸವಾರರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ಹುಣಸೀಕಟ್ಟಿ ರಸ್ತೆಯ ಬಳಿ ಶಾಲಾ ಕಾಲೇಜುಗಳಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ತುಂಬಿ ಹರಿಯುವುದರಿಂದ ವಾಹನ ಸಂಪರ್ಕ ಬಂದ್ ಆಗುತ್ತದೆ. ಇದರಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.
ಶಾಸಕರು ಎಲ್‌ಇಡಿ ಬೀದಿ ದೀಪ ಹಾಕಿಸಿ ಕೊಟ್ಟಿದ್ದಾರೆ. ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಎಚ್.ಎಸ್. ಜಾಡರ ತಿಳಿಸಿದರು.
‘ಚಿದಂಬರ ನಗರದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ನಿವೇಶನವನ್ನು ಉದ್ಯಾನ ಅಭಿವೃದ್ಧಿಪಡಿಸಿ ಹಿರಿಯ ನಾಗರಿಕರ ವಿಶ್ರಾಂತಿಗೆ ಅನುಕೂಲ ಮಾಡಿಕೊಡಬೇಕು’ ಎಂದು ವೇದಿಕೆಯ ಗೌರವ ಅಧ್ಯಕ್ಷ ಜಿ.ಆರ್. ದೇವೇಂದ್ರಪ್ಪ ಹಾಗೂ ಹನುಮಂತಪ್ಪ ನಾಗರಡ್ಡಿ ಅವರು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.