ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರ: ಅಭಿವೃದ್ಧಿ ಕಾಣದ ಜಮೀನು ಸಂಪರ್ಕ ರಸ್ತೆ

Published 13 ಸೆಪ್ಟೆಂಬರ್ 2023, 4:34 IST
Last Updated 13 ಸೆಪ್ಟೆಂಬರ್ 2023, 4:34 IST
ಅಕ್ಷರ ಗಾತ್ರ

ಸವಣೂರ: ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳ್ಳುಕಂಟಿಗಳಿಂದ ಆವರಿಸಿರುವುದರಿಂದ ಜಮೀನುಗಳಿಗೆ ತೆರಳಲು ಚಿಲ್ಲೂರ ಗ್ರಾಮದ ರೈತರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಿಂದ ಚಿಲ್ಲೂರ ಗ್ರಾಮದಿಂದ ಹಾಯ್ದು ಕಾರಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆ ಇದಾಗಿದ್ದು, ನಿತ್ಯ ರೈತರು ಇದೇ ದಾರಿಯಿಂದ ಜಮೀನುಗಳಿಗೆ ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಇಲಾಖೆ ನರೇಗಾ ಯೋಜನೆಯಲ್ಲಿ ಗ್ರಾಮಗಳ ಅಭಿವೃದ್ಧಿ ಹಾಗೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡುತ್ತಿದೆ. ಆದರೆ, ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದರಿಂದ ರಸ್ತೆ ಅಭಿವೃದ್ಧಿಗೆ ಚಿಲ್ಲೂರಬಡ್ನಿ ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಒಳ(ಹೊಲ)ದಾರಿಯಲ್ಲಿರುವ ಹಳ್ಳದ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾದ ಕಾರಣ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಳೆದುಕೊಳ್ಳುವಂತಾಗಿದೆ ಎಂಬುದು ರೈತರ ನೋವಾಗಿದೆ.

ಪಟ್ಟಣದ ರಾಜ್ಯ ಹೆದ್ದಾರಿಯಿಂದ ಧರ್ಮರಾಜ ನಗರದ ಮೂಲಕ ರೈತರು ಹೊಲಕ್ಕೆ ತೆರಳುವ ರಸ್ತೆಯನ್ನು ರೈತರ ಒತ್ತಾಯದ ಮೇರೆಗೆ ಸುಮಾರು ₹ 3 ಕೋಟಿ ಅನುದಾನದಲ್ಲಿ ಅಭಿವೃದ್ಧಿಗಾಗಿ ನೀರಾವರಿ ಯೋಜನೆಯಡಿ ಡಾಂಬರೀಕರಣ ಹಾಗೂ ಇತರ ಸೌಕರ್ಯ ಕಲ್ಪಿಸಲು ಕಾಮಗಾರಿ ನಡೆಸಲು ಶಾಸಕ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು.

ಆದರೆ, ಪಟ್ಟಣದಿಂದ ಸುಮಾರು 1 ಕಿ.ಮೀ ತೆರಳಿದ ನಂತರ ಬರುವ ಹಳ್ಳಕ್ಕೆ ಹೊಂದಿಕೊಂಡು ರಸ್ತೆ ಅತ್ಯಂತ ಕಿರಿದಾದ ತಿರುವು ಹೊಂದಿದೆ. ತಿರುವಿನಲ್ಲಿ ಬರುವ ಹಳ್ಳಕ್ಕೆ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತಡೆಗೋಡೆ ನಿರ್ಮಾಣ ಕೈಗೊಳ್ಳದ ಕಾರಣ ಪಟ್ಟಣದ ಜಮಾದಾರ ಕುಟುಂಬಸ್ಥರು ಸೇರಿದಂತೆ ವಿವಿಧ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಚಕ್ಕಡಿ ಸಮೇತವಾಗಿ ಹಳ್ಳಕ್ಕೆ ಬಿದ್ದು ಮೃತಪಟ್ಟಿವೆ.

ಹಳ್ಳ ಸುಮಾರು 40ಕ್ಕೂ ಹೆಚ್ಚು ಅಡಿ ಆಳವಾಗಿದ್ದು, ಸುಮಾರು 30 ಅಡಿಯಷ್ಟು ಅಗಲವಾಗಿರುವ ಕಾರಣ ರೈತರು ಹಾಗೂ ಎತ್ತುಗಳು ಹಳ್ಳ ದಾಟಿ ಅವೈಜ್ಞಾನಿಕ ರಸ್ತೆಯ
ಮೂಲಕ ತೆರಳಲು ನಿತ್ಯ ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ರೈತರು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಚಿಲ್ಲೂರಬಡ್ನಿ ಒಳದಾರಿಗೆ ಒಳ ಪಡುವ ನೂರಾರು ಹೆಕ್ಟೇರ್ ಕೃಷಿ ಜಮೀನಿಗೆ ಇದೇ ಮಾರ್ಗವಾಗಿ ಸಾಗಬೇಕಿರುವ ರೈತರಿಗೆ ಹಳ್ಳದ ಸಮಸ್ಯೆ ನಿತ್ಯ ತಲೆನೋವು ಆಗಿದೆ. ಆದ್ದರಿಂದ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ರೈತರ ಸಮಸ್ಯೆ ಆಲಿಸಿ, ಹಳ್ಳಕ್ಕೆ ತಡೆಗೋಡೆ ನಿರ್ಮಿಸಿ ರೈತರ ಎತ್ತುಗಳನ್ನು ಕಾಪಾಡಬೇಕು. ನಿತ್ಯ ರೈತರು ಈ ರಸ್ತೆ ಮಾರ್ಗವಾಗಿ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಕಳಪೆ, ಅವೈಜ್ಞಾನಿಕ ಕಾಮಗಾರಿ

‘ಚಿಲ್ಲೂರಬಡ್ನಿ ಒಳದಾರಿ ಅಭಿವೃದ್ಧಿಗೆ ಶಾಸಕ ಬಸವರಾಜ ಬೊಮ್ಮಾಯಿ ಅವರು ಸಹಕಾರ ನೀಡಿ ಅನುದಾನ ನೀಡಿದ್ದಾರೆ. ಆದರೆ, ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ರಸ್ತೆ ಕಾಮಗಾರಿಯನ್ನು ಕಳಪೆ ಹಾಗೂ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಹಳ್ಳಕ್ಕೆ ತಡೆಗೋಡೆ ಸಹ ನಿರ್ಮಾಣ ಮಾಡದಿರುವುದರಿಂದ ಹಲವು ಎತ್ತುಗಳು ಹಳ್ಳಕ್ಕೆ ಬಿದ್ದು ಮೃತಪಟ್ಟಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಸಂಗಮೇಶ ಪಿತಾಂಬ್ರ ಶೆಟ್ಟಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT