ಗುರುವಾರ , ಜುಲೈ 29, 2021
28 °C

ಮಾತೃಭಾಷೆ ಶಿಕ್ಷಣ ಮೊಟಕು; ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹೊಸ ಶಿಕ್ಷಣ ನೀತಿ (ಎನ್.ಇ.ಪಿ) ಅನುಷ್ಠಾನದ ಭಾಗವಾಗಿ ಪದವಿ ಶಿಕ್ಷಣವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಕ್ಕೆ ಏರಿಕೆ ಮಾಡುತ್ತಿರುವುದನ್ನು ಹಾಗೂ ಭಾಷಾ ನೀತಿಯಲ್ಲಿ ಮಾತೃಭಾಷೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿರುವುದನ್ನು ವಿರೋಧಿಸಿ ಎಸ್ಎಫ್ಐ ಕಾರ್ಯಕರ್ತರು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಹೊಸ ಶಿಕ್ಷಣ ನೀತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಹೊರಟಿದೆ. ಅಲ್ಲದೆ, ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ ಕೇವಲ ಹತ್ತು ದಿನದಲ್ಲಿಯೇ ವರದಿ ನೀಡಲೂ ಕೇಳಿತ್ತು. ಮಾತೃ ಭಾಷಾ ಕಲಿಕೆಯನ್ನೂ ಒಂದು ವರ್ಷಕ್ಕೆ ಸೀಮಿತಗೊಳಿಸುವ ಪ್ರಯತ್ನವೂ ನಡೆಯುತ್ತಿರುವ ಬೆಳವಣಿಗೆಗಳಿಗೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಪದವಿ ಶಿಕ್ಷಣವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದರು. ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರ್ಕಾರದ ಈ ನಾಡದ್ರೋಹಿ ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಕ್ರಮಗಳಾಗಿವೆ ಎಂದು ಖಂಡಿಸಿದರು.

 

ಎಸ್ಎಫ್ಐ ಮುಖಂಡರಾದ ಸಿದ್ದಪ್ಪ ಅಂಗಡಿ, ಕೃಷ್ಣ ಕಡಕೋಳ, ಜಗದೀಶ್ ಕೋಟಿ, ನಾಗರಾಜ್ ಕೆ.ಎಸ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.