ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ | ಸೂರಿಗಾಗಿ ಸ್ಲಂ ನಿವಾಸಿಗಳ ಪರದಾಟ

ಎಂ.ವಿ. ಗಾಡದ
Published 4 ಡಿಸೆಂಬರ್ 2023, 4:44 IST
Last Updated 4 ಡಿಸೆಂಬರ್ 2023, 4:44 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದಲ್ಲಿರುವ ಕೊಳಗೇರಿ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿ ಕೊಳಗೇರಿ ಪ್ರದೇಶಗಳನ್ನು ಗುರುತಿಸುವ ಜತೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಸ್ಲಂ ನಿವಾಸಿಗಳು ಸೂರಿಗಾಗಿ ಪರದಾಡುವಂತಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಸುಮಾರು 850 ಮನೆಗಳು ಮಂಜೂರಾಗಿವೆ. ಆದರೆ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಸಹ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಮನೆಗಳ ಮಂಜೂರಾತಿ ಪಡೆದ ಫಲಾನುಭವಿಗಳು ಇಂದು, ನಾಳೆ ಮನೆಗಳ ಕಾಮಗಾರಿ ಮುಗಿಯಬಹುದು ಎಂಬ ನಿರೀಕ್ಷೆಯ ಕನಸಿನ ಬುತ್ತಿ ಹೊತ್ತುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಮನೆಗಳ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ.

ಬಾಡಿಗೆ ಮನೆಯಲ್ಲಿ ವಾಸ:‘ಹೊಸ ಮನೆಗಳು ನಿರ್ಮಾಣವಾಗಲಿವೆ ಎಂದು ಇದ್ದ ಮನೆ ನೆಲಸಮಗೊಳಿಸಲಾಗಿದೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡುವಂತಾಗಿದೆ. ಈ ಕುರಿತು ಪುರಸಭೆಯಲ್ಲಿ ಕೇಳಿದರೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಕಣವಿ ಓಣಿಯ ಫಲಾನುಭವಿ ಅಲ್ಲಾವುದ್ದೀನ್ ಬಡಿಗೇರ ಆತಂಕ ವ್ಯಕ್ತಪಡಿಸಿದರು.

‘ಮನೆ ನಿರ್ಮಾಣದ ಜವಾಬ್ದಾರಿಯನ್ನು ಖಾಸಗಿ ಕಂಪನಿ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ವಹಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಸರಿಯಾಗಿ ಕಲ್ಲು, ಸಿಮೆಂಟ್, ಇಟ್ಟಿಗೆ ಹಾಗೂ ಕಬ್ಬಿಣ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಒಂದು ಮನೆಗೆ ₹ 5.50 ಲಕ್ಷ ಅನುದಾನ ನೀಡಲಾಗಿದೆ. ಅದರಲ್ಲಿನ ಅರ್ಧದಷ್ಟು ಹಣ ವೆಚ್ಚ ಮಾಡುತ್ತಿಲ್ಲ. ಕಳಪೆ ಸಾಮಗ್ರಿ ವಿತರಿಸಲಾಗುತ್ತಿದೆ. ಹೀಗಾಗಿ ನಿರ್ಮಾಣವಾಗಿ ನಾಲ್ಕು ತಿಂಗಳು ಕಳೆದಿಲ್ಲ, ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಮನೆಯಲ್ಲಿ ಮಹಿಳೆಯರು, ಮಕ್ಕಳು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ’ ಎಂದು ಅಲ್ಲಾವುದ್ದೀನ್ ಮತ್ತು ಇತರರು ಫಲಾನುಭವಿಗಳು ಅಳಲು ತೋಡಿಕೊಂಡರು.

‘ಮಂಜೂರಾದ ಮನೆಗಳ ನಿರ್ಮಾಣಕ್ಕೆ ಹಂತ– ಹಂತವಾಗಿ ಹಣ ನೀಡಬೇಕು. ಆದರೆ ಈವರೆಗೆ ಸರಿಯಾಗಿ ಹಣ ನೀಡಿಲ್ಲ. ಗೌಂಡಿಗಳಿಗೆ ಮತ್ತು ಸಿಮೆಂಟ್, ಇಟ್ಟಂಗಿಗಳಿಗೆ ಸೇರಿದಂತೆ  ₹3 ಲಕ್ಷಕ್ಕೂ ಹೆಚ್ಚು ಸ್ವಂತ ಹಣ ವೆಚ್ಚ ಮಾಡಿದ್ದೇನೆ. ಮನೆಗಳಿಗೆ ಬಾಗಿಲು, ಶೌಚಾಲಯಗಳ ನಿರ್ಮಾಣವಿಲ್ಲ. ಕಂಪನಿಯವರು ಕಳುಹಿಸಿದ ಸಾಮಗ್ರಿಗಳು ಸಂಪೂರ್ಣ ಕಳಪೆಯಾಗಿವೆ. ಹೀಗಾಗಿ ಮನೆಗಳು ದೀರ್ಘಕಾಲ ಬಾಳಿಕೆ ಬರುವಂತೆ ಕಾಣುತ್ತಿಲ್ಲ’ ಎಂದು ಸ್ಲಂ ಮಂಡಳಿ ಅಧಿಕಾರಿಗಳ ವಿರುದ್ಧ ಫಲಾನುಭವಿ ಕಿರಣ ದೇಸಾಯಿಮಠ ಆಕ್ರೋಶ ವ್ಯಕ್ತಪಡಿಸಿದರು

ಕಳಪೆ ಕಾಮಗಾರಿ: ಕ್ರಮದ ಎಚ್ಚರಿಕೆ

‘ಸ್ಲಂ ಮನೆಗಳ ನಿರ್ಮಾಣ ಮಾಡುವ ಗುತ್ತಿಗೆದಾರರ ಬದಲಾವಣೆಯಿಂದಾಗಿ ಮನೆಗಳ ನಿರ್ಮಾಣ ವಿಳಂಬವಾಗಲು ಕಾರಣವಾಗಿದೆ. ಹೀಗಾಗಿ ಇಬ್ಬರು ಗುತ್ತಿಗೆದಾರರಿಗೆ ಹಂಚಿಕೆ ಮಾಡಲಾಗಿದೆ. ಒಬ್ಬರಿಗೆ 350 ಮನೆಗಳು, ಇನ್ನೊಬ್ಬರಿಗೆ 500 ಮನೆಗಳ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಮನೆಗಳ ಲೋಪದೋಷಗಳ ಕುರಿತು ಜಿಲ್ಲಾಧಿಕಾರಿ ಮಾಹಿತಿ ಕೇಳಿದ್ದಾರೆ. ಅವರಿಗೆ ತಕ್ಷಣ ವರದಿ ನೀಡಲಾಗುವುದು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಳಪೆ ಕಂಡು ಬಂದಲ್ಲಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ದಾವಣಗೆರೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಖ್ಯ ಉಸ್ತುವಾರಿ ಎಂಜಿನಿಯರ್ ದೇವರಾಜ ಹೇಳಿದರು.

‘ಅಡಿಪಾಯವೇ ಸರಿಯಿಲ್ಲ!’

‘ಮನೆ ನಿರ್ಮಾಣದ ಆರಂಭದಲ್ಲಿ ಅಡಿಪಾಯ ಗಟ್ಟಿಗೊಳಿಸಿಲ್ಲ. ಮನೆ ನಿರ್ಮಾಣಕ್ಕೆ ಕಳುಹಿಸಿದ ಕೆಲವು ಸಾಮಗ್ರಿಗಳು ಇಟ್ಟ ಸ್ಥಳದಲ್ಲೇ ಹಾಳಾಗಿವೆ. ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಹಣ ಇದ್ದವರು ಸ್ವಂತ ಹಣದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಕಡುಬಡವರ ಮನೆಗಳು ಪ್ಲಿಂತ್ ಹಂತದಲ್ಲಿಯೇ ಉಳಿದುಕೊಂಡಿವೆ. ಹೀಗಾದರೆ ಬಡವರು ಎಂದು ಮನೆ ಕಾಣುವುದು ತಿಳಿಯದಾಗಿದೆ. ಅಷ್ಟಾದರೂ ಆಧಾರ್‌ ಕಾರ್ಡ್ ಮತ್ತು ₹50 ಸಾವಿರ ಹಣ ನೀಡಿದರೆ ಸ್ಲಂ ಮನೆಗಳ ಮಂಜೂರಾತಿ ನೀಡುತ್ತಿದ್ದಾರೆ. ಮನೆಗಳ ನಿರ್ಮಾಣದಲ್ಲಿ ಕಳಪೆ, ಅಕ್ರಮ ನಡೆದಿರುವ ಕುರಿತು ಜಿಲ್ಲಾಧಿಕಾರಿಗೆ ಆರೋಪ ಪಟ್ಟಿ ಸಲ್ಲಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪುರಸಭೆ ಮಾಜಿ ಸದಸ್ಯ ಶಿವಪ್ಪ ಗಂಜೀಗಟ್ಟಿ ಕಳವಳ ವ್ಯಕ್ತಪಡಿಸಿದರು.

ಶಿಗ್ಗಾವಿ ಪಟ್ಟಣದ ಹಳಪೇಟೆ ಓಣಿಯಲ್ಲಿನ ನಿರ್ಮಾಣವಾಗಬೇಕಾದ ಮನೆ ಆರಂಭದಲ್ಲಿಯೇ ನಿಂತು ಗಿಡಗಂಟಿಗಳು ಬೆಳೆದಿರುವುದು.

ಶಿಗ್ಗಾವಿ ಪಟ್ಟಣದ ಹಳಪೇಟೆ ಓಣಿಯಲ್ಲಿನ ನಿರ್ಮಾಣವಾಗಬೇಕಾದ ಮನೆ ಆರಂಭದಲ್ಲಿಯೇ ನಿಂತು ಗಿಡಗಂಟಿಗಳು ಬೆಳೆದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT