ಗುರುವಾರ , ಜೂನ್ 24, 2021
28 °C
19ರಿಂದ 33ನೇ ಸ್ಥಾನಕ್ಕೆ ಕುಸಿದ ಜಿಲ್ಲೆ; ತೇಜಸ್‌, ಶ್ರೇಷ್ಠಾ, ಸುಹಾಸ ಟಾಪರ್ಸ್‌

ಎಸ್ಸೆಸ್ಸೆಲ್ಸಿ: ಏಲಕ್ಕಿ ನಾಡು ಹಾವೇರಿಗೆ ‘ಸಿ’ ಗ್ರೇಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ‘ಸಿ’ ಗ್ರೇಡ್‌ ಸಿಕ್ಕಿದೆ. ಕಳೆದ ಬಾರಿ ರಾಜ್ಯಕ್ಕೆ 19ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ಬಾರಿ 33ನೇ ಸ್ಥಾನಕ್ಕೆ ಕುಸಿದಿದೆ. 

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಮೊದಲರೆಡು ಸ್ಥಾನ ಗಳಿಸಿದ್ದು, ‘ಎ’ ಗ್ರೇಡ್‌ ಪಡೆದಿವೆ. ‘ಸಿ’ ಗ್ರೇಡ್‌ ಪಡೆದಿರುವ ಹಾವೇರಿ ಮತ್ತು ಯಾದಗಿರಿ ಕ್ರಮವಾಗಿ 33 ಮತ್ತು 34ನೇ ಸ್ಥಾನ ಪಡೆದು, ಫಲಿತಾಂಶದಲ್ಲಿ ಕೊನೆಯ ಸ್ಥಾನ ಗಳಿಸಿವೆ.  

ಹಾವೇರಿ ಜಿಲ್ಲೆಯಲ್ಲಿ 57 ಶಾಲೆಗಳು ‘ಎ’ ಗ್ರೇಡ್‌, 75 ಶಾಲೆಗಳು ‘ಬಿ’ ಗ್ರೇಡ್‌ ಮತ್ತು 264 ಶಾಲೆಗಳು ‘ಸಿ’ ಗ್ರೇಡ್‌ ಪಡೆದಿವೆ. ‘ಎ’ ಗ್ರೇಡ್‌ ಪಡೆದ ಶಾಲೆಗಳಲ್ಲಿ 4 ಅನುದಾನಿತ, 27 ಸರ್ಕಾರಿ, 26 ಅನುದಾನರಹಿತ ಶಾಲೆಗಳು ಸೇರಿವೆ. ‘ಬಿ’ ಗ್ರೇಡ್‌ ಪಡೆದ ಶಾಲೆಗಳಲ್ಲಿ 20 ಅನುದಾನಿತ, 29 ಸರ್ಕಾರಿ, 26 ಅನುದಾನರಹಿತ ಶಾಲೆಗಳು ಸೇರಿವೆ. ‘ಸಿ’ ಗ್ರೇಡ್‌ ಪಡೆದ ಶಾಲೆಗಳಲ್ಲಿ 124 ಅನುದಾನಿತ, 103 ಸರ್ಕಾರಿ, 37 ಅನುದಾನರಹಿತ ಶಾಲೆಗಳಿವೆ. 

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಕನ್ನಡ ಮಾಧ್ಯಮದಲ್ಲಿ ಶಿಗ್ಗಾವಿಯ ಎಸ್‌.ಬಿ.ಬಿ.ಎಂ.ಡಿ. ಶಾಲೆಯ ತೇಜಸ್‌ ನಂದೀಶ ಯಲಿಗಾರ 619 (ಶೇ 99.04), ಗುತ್ತಲದ ಎಸ್‌.ಆರ್‌.ಎಸ್‌. ಪ್ರೌಢಶಾಲೆಯ ಪಿ.ಆರ್‌.ಹರ್ಷಿತಾ 617 (98.72) ಫಲಿತಾಂಶ ಪಡೆದಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಕುಮಾರಪಟ್ಟಣದ ಅಮೃತವರ್ಷಿಣಿ ಆಂಗ್ಲ ಮಾಧ್ಯಮ ಶಾಲೆಯ ಶ್ರೇಷ್ಠಾ ಎಂ.ಎಸ್‌. 619 (ಶೇ 99.04), ಗುತ್ತಲದ ಆರ್‌.ಕೆ.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಹಾಸ ಕೆ.ಎಚ್‌. 619 (ಶೇ 99.04), ರಾಣೆಬೆನ್ನೂರಿನ ಕರೂರ ಪಬ್ಲಿಕ್‌ ಶಾಲೆಯ ಕಿರಣ ಡಾಕೇಶ ಲಮಾಣಿ 617 (ಶೇ 98.72), ಹಾವೇರಿಯ ಸೇಂಟ್‌ ಆನ್ಸ್‌ ಪ್ರೌಢಶಾಲೆಯ ಕಿಶನ್‌ ಎಲ್‌.ಪಾಟೀಲ 616 (ಶೇ 98.56), ಹಿರೇಕೆರೂರ ತಾಲ್ಲೂಕಿನ ಬುರಡಿಕಟ್ಟಿ ಸೇಂಟ್‌ ಮೇರಿಸ್‌ ಪ್ರೌಢಶಾಲೆಯ ಪ್ರೀತಿ ತೋಟಪ್ಪ ಕೋರಿಶೆಟ್ಟರ 616 (ಶೇ 98.56) ಹಾಗೂ ಗುತ್ತಲದ ಆರ್‌.ಕೆ.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿಶ್ಚಿತ ಶೇಖರ ಚಂದನ 616 (ಶೇ 98.56) ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳೆನಿಸಿದ್ದಾರೆ. 

ನಿರೀಕ್ಷೆ ಹುಸಿ: ‘ಜಿಲ್ಲೆಯಲ್ಲಿ ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ ಮತ್ತು ಜಿಲ್ಲೆಗೆ ಸಿಕ್ಕ ಶೇಕಡಾವಾರು ಫಲಿತಾಂಶವೆಷ್ಟು ಎಂಬುದು ನಮಗೆ ಇಲಾಖೆಯಿಂದ ಅಧಿಕೃತವಾಗಿ ಬಂದಿಲ್ಲ. ಈ ಬಾರಿ ಹೊಸದಾಗಿ ಜಿಲ್ಲೆಗಳಿಗೆ ಗ್ರೇಡ್‌ ನೀಡಲಾಗಿದೆ. ಆದರೆ, ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಕಳೆದ ವರ್ಷ 19ನೇ ಸ್ಥಾನದಲ್ಲಿದ್ದ ಹಾವೇರಿ ಜಿಲ್ಲೆ ಇನ್ನು ಉತ್ತಮ ಸ್ಥಾನಕ್ಕೆ ಏರಿಕೆಯಾಗಲಿ ಎಂದು ಆನ್‌ಲೈನ್‌ ಕ್ವಿಜ್, ವಿಶೇಷ ತರಗತಿ, ಮಿಸ್ಡ್‌ ಕಾಲ್‌ ಕಾರ್ಯಕ್ರಮ ಸೇರಿದಂತೆ ಹಲವಾರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದೆವು. ಜಿಲ್ಲೆಗೆ 33ನೇ ಸ್ಥಾನ ಸಿಕ್ಕಿದ್ದು, ‘ಸಿ’ ಗ್ರೇಡ್‌ ಪಡೆದಿದೆ’ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು