ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರಿಗೆ ಶಕ್ತಿ ತುಂಬುವೆ: ನಿಯಾಜ್‌ ಶೇಖ್‌ ಹೇಳಿಕೆ

Last Updated 27 ಅಕ್ಟೋಬರ್ 2021, 4:10 IST
ಅಕ್ಷರ ಗಾತ್ರ

ನಾನು ಕಾರ್ಮಿಕ ಸಂಘಟನೆಯಿಂದ ಬಂದವನು. ಅಭ್ಯರ್ಥಿಯಾಗಲು ಕಾರ್ಮಿಕ ಕ್ಷೇತ್ರವೇ ಕಾರಣ. ಈ ವರ್ಗಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ನ್ಯಾಯ ಒದಗಿಸಿಕೊಡಬೇಕು.

***

* ಜನರು ನಿಮಗೇ ಏಕೆ ಮತ ನೀಡಬೇಕು?

ನಾನು ಕಾರ್ಮಿಕ ಸಂಘಟನೆಯಿಂದ ಬಂದವನು. ಅಭ್ಯರ್ಥಿಯಾಗಲು ಕಾರ್ಮಿಕ ಕ್ಷೇತ್ರವೇ ಕಾರಣ. ಈ ವರ್ಗಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ನ್ಯಾಯ ಒದಗಿಸಿಕೊಡಬೇಕು. ಅಸಂಘಟಿತ ಕಾರ್ಮಿಕರ ವಲಯವು ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ. ಈ ವರ್ಗಕ್ಕೆ ಶಕ್ತಿ ತುಂಬಲು ರಾಜಕಾರಣಕ್ಕೆ ಬಂದಿದ್ದೇನೆ. ಜೆಡಿಎಸ್‌ ಜನಪರ ಆಡಳಿತ ನೀಡಿದೆ. ನಮ್ಮ ಕ್ಷೇತ್ರದಲ್ಲಿ 28 ಸಾವಿರ ರೈತರಿಗೆ ಸಾಲಮನ್ನಾ ಮಾಡಲಾಗಿದೆ. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ರೈತರು ಮತ್ತು ಕಾರ್ಮಿಕರ ಮೇಲೆ ವಿಶ್ವಾಸವಿಟ್ಟು ಚುನಾವಣೆ ಎದುರಿಸುತ್ತಿದ್ದೇನೆ.

* ಜೆಡಿಎಸ್‌ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಪಕ್ಷವಾಗಿದ್ದು, ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ದುರ್ಬಲವಾಗಿದೆ ಎಂಬ ಆರೋಪವಿದೆಯಲ್ಲ?

ಒಂದು ಕಾಲದಲ್ಲಿ ಹಾವೇರಿ ಕೂಡ ಜನತಾ ಪರಿವಾರದ ಕೇಂದ್ರವಾಗಿತ್ತು. ಸಿ.ಎಂ.ಉದಾಸಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನತಾ ಪರಿವಾರದಿಂದ ಬಂದವರು. ಜೆಡಿಎಸ್‌ ಭದ್ರಕೋಟೆಯಾಗಿದ್ದ ಹಾವೇರಿಯಲ್ಲಿ ರಾಜಕೀಯ ಬದಲಾವಣೆಗಳಾಗಿವೆ. ರಾಜಕೀಯ ನಿಂತ ನೀರಲ್ಲ. ಕುಮಾರಸ್ವಾಮಿ ಅವರ ಕನಸಿನ ‘ಮಿಷನ್‌ 123’ಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

* ಹಾನಗಲ್‌ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ‘ಬಿಜೆಪಿಯ ಬಿ–ಟೀಮ್‌’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆಯಲ್ಲ?

ನಾವು ಈ ಆರೋಪವನ್ನು ಒಪ್ಪುವುದಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭೀತಿಯಿಂದ ಈ ರೀತಿ ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಚುನಾವಣೆಯಲ್ಲಿ ಬೇರೆ ಅಸ್ತ್ರಗಳಿಲ್ಲದಿರುವ ಕಾರಣ ಬೇರೆ ಪಕ್ಷಗಳ ಮೇಲೆ ಇಂಥ ಆರೋಪಗಳನ್ನು ಹೊರಿಸುತ್ತಿದೆ. ‘ಹಿಂದುತ್ವದ ಹೆಡ್ ಮಾಸ್ಟರ್‌’ ಆಗಿದ್ದ ಶಿವಸೇನೆ ನಿರಂತರವಾಗಿ ಬಿಜೆಪಿ ಜತೆ ಗುರುತಿಸಿಕೊಂಡು ಬಂದಿತ್ತು. ಅಂಥ ಶಿವಸೇನೆ ಜತೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿದೆ. ಹೀಗಾಗಿ, ಈ ಆರೋಪದಲ್ಲಿ ಹುರುಳಿಲ್ಲ.

* ಜೆಡಿಎಸ್‌ ವರಿಷ್ಠರು ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಮಹತ್ವವನ್ನು ಹಾನಗಲ್‌ ಕ್ಷೇತ್ರಕ್ಕೆ ನೀಡುತ್ತಿಲ್ಲ ಯಾಕೆ?

ಸಿಂಧಗಿ ಕ್ಷೇತ್ರ ಜೆಡಿಎಸ್‌ನ ಹಾಲಿ ಕ್ಷೇತ್ರವಾಗಿತ್ತು. ಹೀಗಾಗಿ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ನಾನು ನಾಮಪತ್ರ ಸಲ್ಲಿಕೆ ಮಾಡುವಾಗ ನಿಖಿಲ್‌ ಕುಮಾರಸ್ವಾಮಿ ಅವರು ಬಂದಿದ್ದರು. ಕುಮಾರಸ್ವಾಮಿ ಅವರು ಕೂಡ ಒಂದು ದಿನ ಬಂದು ಪ್ರಚಾರಸಭೆ ನಡೆಸಿ, ಕಾರ್ಯಕರ್ತರಿಗೆ ಉತ್ಸಾಹ ತುಂಬಿ ಹೋಗಿದ್ದಾರೆ. ಬಂಡೆಪ್ಪ ಕಾಶಂಪುರ್‌, ಎನ್.ಎಚ್‌. ಕೋನರಡ್ಡಿ ಮುಂತಾದ ನಾಯಕರು ಬಂದು ಪ್ರಚಾರ ನಡೆಸಿದ್ದಾರೆ.

* ನೀವು ಶಾಸಕರಾಗಿ ಆಯ್ಕೆಯಾದರೆ, ಹಾನಗಲ್‌ ಕ್ಷೇತ್ರಕ್ಕೆ ಸಿಗುವ ಕೊಡುಗೆ ಏನು?

ಹಾನಗಲ್‌ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್‌ ಅವರ ರಾಜಕೀಯ ಯುಗಾಂತ್ಯವಾಗಿದೆ. ಹೊಸ ರಾಜಕಾರಣ ಟಿಸಿಲೊಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳ ಇಬ್ಬರೂ ಅಭ್ಯರ್ಥಿಗಳಿಗೆ ಹಾನಗಲ್‌ ಕ್ಷೇತ್ರದ ನೈಜ ಸಮಸ್ಯೆಗಳ ಅರಿವಿಲ್ಲ. ನಾನು ಕಾರ್ಮಿಕ ಕ್ಷೇತ್ರದಿಂದ ಬಂದಿದ್ದು, ಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಅರ್ಥಮಾಡಿಕೊಂಡಿದ್ದೇನೆ. ಕಾರ್ಮಿಕರು, ರೈತರು, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡುವ ಕಾರ್ಯವನ್ನು ಮಾಡುತ್ತೇನೆ.

* ನಿಮ್ಮ ಗೆಲುವಿಗಿರುವ ಪೂರಕ ಹಾಗೂ ಬಾಧಕ ಅಂಶಗಳೇನು?

ನಾವು ಜನರ ಮನೆ ಬಾಗಿಲಿಗೆ ಹೋಗಿ ಮತಗಳನ್ನು ಕೇಳುತ್ತಿದ್ದೇವೆ. ನಮಗೆ ಒಂದು ಬಾರಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡುತ್ತಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಆ ಪಕ್ಷಗಳು ಗೊಂದಲದ ಗೂಡಾಗಿವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಜನರು ಬದಲಾವಣೆ ಬಯಸುತ್ತಿರುವುದರಿಂದ ನಮ್ಮನ್ನು ಈ ಬಾರಿ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT