ಭಾನುವಾರ, ಮೇ 16, 2021
28 °C
ಜಿಲ್ಲಾಡಳಿತ ಭವನದಲ್ಲಿ ನಡೆದ ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ಕೋವಿಡ್‌: ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಪ್ರಕರಣಗಳು ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಹಾಗೂ ಗುರಿಯಂತೆ ತ್ವರಿತವಾಗಿ ಸಂಪರ್ಕಿತರ ಪತ್ತೆ, ತಪಾಸಣೆ, ಜೊತೆಗೆ ಲಸಿಕಾ ಕಾರ್ಯದಲ್ಲಿ ಯಾವುದೇ ಹಿನ್ನಡೆಯಾಗದಂತೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೊ ಸಂವಾದದಲ್ಲಿ ಭಾಗವಹಿಸಿ ತರುವಾಯು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಮಾಹಿತಿ, ಆಕ್ಸಿಜನ್ ಸಹಿತ ಬೆಡ್‌ಗಳ ಸಂಖ್ಯೆ, ಐ.ಸಿ.ಯು ಬೆಡ್‍ಗಳು, ಕೋವಿಡ್‍ಕೇರ್ ಸೆಂಟರ್‌ಗಳಲ್ಲಿ ಕಳೆದ ಸಾಲಿನಲ್ಲಿ ವ್ಯವಸ್ಥೆ ಮಾಡಿದ ಬೆಡ್‍ಗಳ ಸಂಖ್ಯೆ ಒಳಗೊಂಡಂತೆ ಪೂರ್ಣ ಮಾಹಿತಿ ಒಳಗೊಂಡಿರಬೇಕು. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.  

ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಆಚರಣೆಗಳು ಅಥವಾ ಸಮಾರಂಭಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 3.25 ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಮದುವೆ- ತೆರೆದ ಪ್ರದೇಶಗಳಲ್ಲಿ 200 ಜನರು ಮೀರಬಾರದು. ಕಲ್ಯಾಣ ಮಂಟಪ, ಸಭಾಂಗಣ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಜನರು ಮೀರುವಂತಿಲ್ಲ. ಜನ್ಮದಿನ ಹಾಗೂ ಇತರೆ ಆಚರಣೆಗಳಲ್ಲಿ 50 ಜನರು, ಸಭಾಂಗಣ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಜನರು ಮಾತ್ರ ಭಾಗವಹಿಸಬೇಕು ಎಂದು ಸೂಚನೆ ನೀಡಿದರು. 

ನಿಧನ ಅಥವಾ ಶವಸಂಸ್ಕಾರ –ತೆರೆದ ಪ್ರದೇಶದಲ್ಲಿ 50 ಜನರು, ಹಾಲ್ ಸಭಾಂಗಣಳಲ್ಲಿ 25 ಜನರು ಮೀರಬಾರದು. ಅಂತ್ಯ ಕ್ರಿಯೆಯಲ್ಲಿ 25 ಜನ ಭಾಗವಹಿಸಬೇಕು. ಇತರೆ ಸಮಾರಂಭಗಳಲ್ಲಿ ಹಾಲ್‍ನ ವಿಸ್ತೀರ್ಣಕ್ಕೆ ತಕ್ಕಂತೆ 50 ಜನರು ಮೀರಬಾರದು. ರಾಜಕೀಯ ಆಚರಣೆಗಳು ಅಥವಾ ಸಮಾರಂಭಗಳಿಗೆ 200 ಜನರ ಮಿತಿಗೊಳಿಸಲಾಗಿದೆ. ಧಾರ್ಮಿಕ ಆಚರಣೆ ಅಥವಾ ಸಮಾರಂಭಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು. 

ಸಭಾಂಗಣ ಕಲ್ಯಾಣ ಮಂಟಪ, ಸಿನಿಮಾ ಮಂದಿರ ಹಾಲ್‍ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಬೇಕು. ಮದುವೆ ಸಮಾರಂಭಕ್ಕೆ ಅನುಮತಿ ಕಡ್ಡಾಯ. ಸಾರ್ವಜನಿಕರು ಸರ್ಕಾರದ ಪ್ರಮಾಣಿಕೃತ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು. 

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಎಸ್ಪಿ ಕೆ.ಜಿ. ದೇವರಾಜು, ಹಾವೇರಿ ಉಪವಿಭಾಗಾಧಿಕಾರಿ ಶಿವನಾಂದ ಉಳ್ಳಾಗಡ್ಡಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.