ಗ್ರಾಮೀಣ ಶಾಲೆಯ ‘ವಿಜ್ಞಾನ’ದ ಸಾಧನೆ

7

ಗ್ರಾಮೀಣ ಶಾಲೆಯ ‘ವಿಜ್ಞಾನ’ದ ಸಾಧನೆ

Published:
Updated:
Deccan Herald

ಹಂಸಭಾವಿ:  ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಸಲುವಾಗಿಯೇ ಹೆಚ್ಚಿನ ವಿದ್ಯಾರ್ಥಿಗಳು ವಿಷಯಗಳನ್ನು ಕಲಿತರೆ, ಶಿಕ್ಷಕರು ‘ಫಲಿತಾಂಶ’ದ ಗುರಿ ಇರಿಸಿಕೊಂಡು ಬೋಧನೆ ಮಾಡುತ್ತಾರೆ. ಆದರೆ, ಇಲ್ಲಿನ ನಾಗೂಬಾಯಿ ಮಾಮಲೇ ದೇಸಾಯಿ ಬಾಲಿಕಾ ಪ್ರೌಢ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಮಾತ್ರ ಇದಕ್ಕಿಂತ ವಿಭಿನ್ನ.

ಗ್ರಾಮೀಣ ಪ್ರದೇಶದ ಶಾಲೆಯಾದರೂ, ಪರಿಸರ, ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಇಬ್ಬರು ವಿದ್ಯಾರ್ಥಿನಿಯರು ಈ ಬಾರಿ ‘ಜಿಲ್ಲಾ ಯುವ ವಿಜ್ಞಾನಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಆಧುನಿಕ ಕೃಷಿ ಪದ್ಧತಿಗಿಂತ ಸಾವಯವೇ ಶ್ರೇಷ್ಠ ಎಂಬ ಅರಿವು ಮೂಡಿಸುತ್ತಿರುವ ಕಾವ್ಯಶ್ರೀ ಅತ್ತಿಕಟ್ಟಿ ಮತ್ತು ಅತಿಯಾದ ವಾಹನ ಬಳಕೆಯಿಂದ ಉಂಟಾಗುವ ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾವ್ಯಾ ಬಣಕಾರ ಪ್ರಶಸ್ತಿಗೆ ಪಡೆದಿದ್ದಾರೆ.

ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ರೈತರು ಕೀಟನಾಶಕ, ಔಷಧಿಗಳು, ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇಂತಹ ರಾಸಾಯನಿಕಗಳನ್ನು ಬಳಸುವುದರಿಂದ ‌ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಭವಿಷ್ಯದಲ್ಲಿ ಯಾವುದೇ ಬೆಳೆ ಬೆಳೆಯಲಾರದ ಸ್ಥಿತಿ ಬರಬಹುದು. ಅದಕ್ಕಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ ಎಂದು ಶಾಲಾ ಸಮೀಪದ ತುಮರೀಕೊಪ್ಪ, ಮುದ್ದಿನಕೊಪ್ಪ ಮತ್ತಿತರ ಗ್ರಾಮಗಳಲ್ಲಿ ವಿದ್ಯಾರ್ಥಿನಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಶಾಲೆಯಲ್ಲಿ
ಶಿಕ್ಷಕರು ಮಾಡಿದ ಬೋಧನೆಯನ್ನು, ವಿದ್ಯಾರ್ಥಿನಿಯರು ಕಾರ್ಯರೂಪಕ್ಕೆ ತರುತ್ತಿದ್ದಾರೆ.

‘ಸಾವಯವ ಕೃಷಿಯಿಂದ ಇಳುವರಿ ಕಡಿಮೆಯಾಗುತ್ತದೆ. ಜೀವನ ಸಾಗಿಸುವುದು ಕಷ್ಟ’ಎಂದು ರೈತರು ಹೇಳುತ್ತಿದ್ದರು. ಆದರೆ, ರಾಸಾಯನಿಕ ಬಳಕೆಯಿಂದ ಹೊಲದಲ್ಲಿನ ಖನಿಜಾಂಶಗಳು ಬರಿದಾಗಿ, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಇಲ್ಲದಂತಾಗುತ್ತದೆ ಎಂದು ಮನವರಿಕೆ ಮಾಡಿದೆವು. ಹೀಗಾಗಿ, ಕೆಲವು ರೈತರು ಸಾವಯವ ಕೃಷಿಯತ್ತ ಒಲವು ತೋರುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಕಾವ್ಯಶ್ರೀ ಅತ್ತೀಕಟ್ಟಿ ವಿವರಿಸಿದಳು.

‘ಅತಿಯಾದ ವಾಹನ ಬಳಕೆಯಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಅದಕ್ಕಾಗಿ, ವಾಹನ ಬಳಕೆ ಕಡಿಮೆ ಮಾಡಿ, ವಾಯು ಮಾಲಿನ್ಯ ತಡೆಗಟ್ಟಿ ಎಂದು ಸವಾರರಲ್ಲಿ ಮನವಿ ಮಾಡುತ್ತಿದ್ದೇವೆ. ವೈಯಕ್ತಿಕ ವಾಹನದ ಬದಲಾಗಿ, ಸಾರಿಗೆ ವಾಹನಗಳನ್ನು ಬಳಸಬೇಕು. ಇಲ್ಲವೇ, ಸೌರಶಕ್ತಿ, ವಿದ್ಯುತ್ ಶಕ್ತಿ ಅಥವಾ ಜೈವಿಕ ಇಂಧನ ಚಾಲಿತ ವಾಹನಗಳನ್ನು ಬಳಸಿ ಎಂದು ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕೆ ಹಲವರು ಸ್ಪಂದಿಸುತ್ತಿದ್ದಾರೆ’ ಎಂದು ವಿದ್ಯಾರ್ಥಿನಿ ಕಾವ್ಯಾ ಬಣಕಾರ ತಿಳಿಸಿದಳು.

ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿರುವ ಕುರಿತು ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲೆಗಳ ಸ್ಪರ್ಧೆಯಲ್ಲಿ ವಿಚಾರ ಮಂಡಿಸಿದ್ದು, ಇಬ್ಬರೂ ‘ಜಿಲ್ಲಾ ಯುವ ವಿಜ್ಞಾನಿ’ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಶಾಲೆಯ ವಿಜ್ಞಾನ ಶಿಕ್ಷಕ ಸುರೇಶ ಗಿಡ್ಡಪ್ಪಳವರ ಹಾಗೂ ಇತರ ಶಿಕ್ಷಕರ ಮಾರ್ಗದರ್ಶನದಿಂದ ವಿಧ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ. ವಿಜ್ಞಾನ ಶಿಕ್ಷಕ ಸುರೇಶ ಗಿಡ್ಡಪ್ಪಳವರ ಕಳೆದ ವರ್ಷ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು.

‘ಮುಂದಿನ ದಿನಗಳಲ್ಲಿ ವೈಜ್ಞಾನಿಕ, ಪರಿಸರ ಸ್ನೇಹಿ, ಮಾನವೀಯ ಮೌಲ್ಯಗಳ ಸಮಾಜಮುಖಿ ಕಾರ್ಯಗಳನ್ನು ಮಾಡಿಸುವ ಗುರಿ ಹೊಂದಿದ್ದೇವೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ ಸೋಮಸಾಗರ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !