ಕಂಚಿನೆಗಳೂರು ಜಲಪಾತಕ್ಕೆ ಪ್ರವಾಸಿಗರ ಲಗ್ಗೆ

6
ಧರ್ಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಒಡ್ಡಿನ ಬಳಿ ಸೃಷ್ಟಿಯಾದ ಜಲಧಾರೆ; ಆಕರ್ಷಣೆಯ ತಾಣ

ಕಂಚಿನೆಗಳೂರು ಜಲಪಾತಕ್ಕೆ ಪ್ರವಾಸಿಗರ ಲಗ್ಗೆ

Published:
Updated:
Deccan Herald

ಅಕ್ಕಿಆಲೂರ: ಸಮೀಪದ ಕಂಚಿನೆಗಳೂರಿನಲ್ಲಿ ಧರ್ಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಒಡ್ಡಿನ ಬಳಿ ಸೃಷ್ಟಿಯಾಗಿರುವ ಪುಟ್ಟ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಹಾನಗಲ್ ತಾಲ್ಲೂಕಿನ ಗಡಿ ಭಾಗ ನರೇಗಲ್ ಸೇರಿ ಸುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕಂಚಿನೆಗಳೂರಿನಲ್ಲಿ ಧರ್ಮಾ ನದಿಗೆ ಅಡ್ಡಲಾಗಿ ಒಡ್ಡು ಕಟ್ಟಲಾಗಿದೆ. ಒಂದೆಡೆ ಒಡ್ಡಿನಿಂದ ನೀರು ಕಾಲುವೆ ಮೂಲಕ ಜಕ್ಕನಾಯಕನಕೊಪ್ಪ, ನೆಲ್ಲಿಬೀಡ, ಕಾಲ್ವೆಕಲ್ಲಾಪುರ, ವರ್ದಿ ಮೂಲಕ ನರೇಗಲ್‌ನ ದೊಡ್ಡಕೆರೆ ಸೇರಲಿದೆ. ಇನ್ನೊಂದೆಡೆ ನದಿ ಹೊಂಬಳಿ, ಅಲ್ಲಾಪುರ, ಹರವಿ, ಹರನಗಿರಿ ಮಾರ್ಗವಾಗಿ ಕೂಡಲದ ಬಳಿ ವರದಾ ನದಿಗೆ ಸೇರಲಿದೆ.

ನೀರಾವರಿ ಉದ್ದೇಶಕ್ಕಾಗಿ ಕಟ್ಟಿರುವ ಒಡ್ಡಿನಿಂದ ಪುಟ್ಟದೊಂದು ಜಲಪಾತ ಸೃಷ್ಟಿಯಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ. ನಿಸರ್ಗದ ಮಡಿಲಲ್ಲಿ, ಶಾಂತ ವಾತಾವರಣದಲ್ಲಿ ಕಾಲ ಕಳೆಯಲು ಈ ಸ್ಥಳ ಹೇಳಿ ಮಾಡಿಸಿದಂತಿದ್ದು, ಜನ ಕುಟುಂಬ ಸಹಿತ ಲಗ್ಗೆ ಇಡುತ್ತಿದ್ದಾರೆ. ಜಲಪಾತ ಪುಟ್ಟದಿರುವುದರಿಂದ ಮಕ್ಕಳು, ಮಹಿಳೆಯರು ಕೂಡ ಜಲಪಾತದ ತುದಿವರೆಗೆ ಏರಿ ಕುಳಿತುಕೊಳ್ಳಲು ಅವಕಾಶವಿದೆ.

ಜಲಪಾತ ನೋಡಲು ಬಂದಿದ್ದ ಹಾನಗಲ್‌ನ ರವಿರಾಜ್ ಮಾತನಾಡಿ, ‘ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಇಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಒತ್ತು ನೀಡಬೇಕು. ಸೂಕ್ತ ಸೌಲಭ್ಯ ಕಲ್ಪಿಸಿ, ಪ್ರಚಾರ ನೀಡಿದರೆ ಇದು ಉತ್ತಮ ಪ್ರವಾಸಿ ತಾಣವಾಗುವಲ್ಲಿ ಸಂದೇಹವಿಲ್ಲ’ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !