ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್‌ ಬಡ್ಡಿ: ರಕ್ಷಣೆಗೆ ‘ಡಿಎಸ್‌ಎಸ್‌’

201 ಬ್ಯಾಂಕ್‌ ಶಾಖಾ ಕಚೇರಿಗಳಿಗೆ ಲೀಡ್‌ ಬ್ಯಾಂಕ್‌ನಿಂದ ಸುತ್ತೋಲೆ
Last Updated 2 ಆಗಸ್ಟ್ 2015, 10:09 IST
ಅಕ್ಷರ ಗಾತ್ರ

ಹಾವೇರಿ: ಲೇವಾದೇವಿ ವ್ಯವಹಾರ ಗಳಿಂದ ಋಣಮುಕ್ತರಾಗದೇ ಸಾಲಬಾಧೆಗೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಿರಂತರ ವರದಿಯಾಗುತ್ತಿವೆ. ಇಂತಹ ರೈತರನ್ನು ಲೇವಾದೇವಿಯ ಜಾಲದಿಂದ ಬಿಡಿಸಿ ಬ್ಯಾಂಕ್ ವ್ಯವಹಾರದ ತೆಕ್ಕೆಗೆ ತೊಡಗಿಸಿಕೊಳ್ಳುವ ಯೋಜನೆಯೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜಾರಿಯಲ್ಲಿವೆ.

ಇದುವೇ ‘ಸಾಲಗಾರರ ಸಾಲ ವಿನಿಮಯ ಯೋಜನೆ’ (ಡಿ.ಎಸ್‌.ಎಸ್–DEPT SAWAP  DESCHEME).
ಅಧಿಕ ಬಡ್ಡಿಯ ಲೇವಾದೇವಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದ ರೈತರು,  ಮರುಪಾವತಿಯ ಸಂಕಷ್ಟದಲ್ಲಿದ್ದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ನೆರವು ಪಡೆಯಬಹುದು. ಲೇವಾದೇವಿ ಸಾಲ ಪಡೆದ ಅಧಿಕೃತ ದಾಖಲೆಗಳು ಹಾಗೂ ಸಾಲ ಪಡೆಯಲು ಬೇಕಾದ ಸೂಕ್ತ ದಾಖಲೆಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ ಹೊಸ ಸಾಲ ಪಡೆಯಬಹುದು.
ಆ ಮೂಲಕ ಅಧಿಕ ಬಡ್ಡಿಯ ಸಾಲವನ್ನು ತೀರಿಸಿ, ಕಡಿಮೆ ಬಡ್ಡಿಯಲ್ಲಿ ಮೂರರಿಂದ ಐದು ವರ್ಷಗಳ ಕಾಲಾವಕಾಶ ಪಡೆದುಕೊಂಡು ಬ್ಯಾಂಕ್‌ಗೆ ಸಂದಾಯ ಮಾಡಬಹುದು.

ಇದು ರೈತರಿಗಾಗಿ (ಕೃಷಿಗಾಗಿ ಸಾಲ) ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ವಿಶೇಷ ಯೋಜನೆ. ಸಂಬಂಧಿಸಿದ ರೈತರು ಬ್ಯಾಂಕ್ ಶಾಖೆಯ ವ್ಯಾಪ್ತಿಯ ನಿವಾಸಿ ಆಗಿರಬೇಕು. ಅಲ್ಲದೇ, ಲೇವಾದೇವಿ ಸಾಲ ಪಡೆದ ಬಗ್ಗೆ ಅಧಿಕೃತ  (ಅಫಿಡವಿಟ್) ದಾಖಲೆಗಳನ್ನು ನೀಡಬೇಕು. ‘ಈ ಯೋಜನೆಯು ವಿಜಯಾ ಬ್ಯಾಂಕ್, ಭಾರತೀಯ ಸ್ಟೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿದೆ. ಆದರೆ, ಲೇವಾದೇವಿ ವ್ಯವಹಾರ ನಡೆಸುವವರು ಸಾಲಕ್ಕೆ ಸೂಕ್ತ ದಾಖಲೆ ನೀಡುವುದಿಲ್ಲ. ಎಲ್ಲವೂ ಮೌಖಿಕವಾಗಿ ನಡೆದಿರುತ್ತದೆ. ಹೀಗಾಗಿ ಈ ಯೋಜನೆಯ ಲಾಭ ಪಡೆಯುವ ರೈತರು ತೀರಾ ವಿರಳ ’ ಎನ್ನುತ್ತಾರೆ ಜಿಲ್ಲಾ ಲೀಡ್ (ವಿಜಯಾ) ಬ್ಯಾಂಕ್‌ ಪ್ರಬಂಧಕ ಉಮೇಶಬಾಬು.

‘ಹೀಗಾಗಿ ಸಂಘ–ಸಂಸ್ಥೆಗಳು, ಸ್ಥಳೀಯರು ಸೇರಿಕೊಂಡು ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಅಲ್ಲದೇ, ಅಂತಹ ಸಾಲಕ್ಕೆ ಅಧಿಕೃತ ದಾಖಲೆ ಒದಗಿಸುವ ಮೂಲಕ ಬ್ಯಾಂಕ್‌ಗೆ ಬರಬಹುದು. ಬ್ಯಾಂಕ್‌ ಸಾಲವು ಕಡಿಮೆ ಬಡ್ಡಿ ಹಾಗೂ ದೀರ್ಘಾವಧಿ ಹೊಂದಿದ್ದು, ರೈತರಿಗ ಪೂರಕವಾಗಿದೆ’ ಎಂದು ಅವರು ವಿವರಿಸಿದರು.

ಬ್ಯಾಂಕ್‌ಗಳಿಗೆ ಪತ್ರ
‘ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರ ಫೋಟೊ ಹಾಕುವುದು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಪದೇ ಪದೇ ನೋಟಿಸ್ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಈಗಾಗಲೇ ಜಿಲ್ಲೆಯ 25 ಬ್ಯಾಂಕ್‌ಗಳ ಪ್ರಾದೇಶಿಕ ಪ್ರಬಂಧಕರಿಗೆ ಪತ್ರ ಬರೆಯಲಾಗಿದೆ. ಅವರು, ಕೂಡಲೇ ಜಿಲ್ಲೆಯಲ್ಲಿರುವ 201 ಶಾಖಾ ಪ್ರಬಂಧಕರಿಗೆ ಆದೇಶ ನೀಡಬೇಕು. ಇನ್ನೊಂದೆಡೆ ರೈತರನ್ನು ಮನವೊಲಿಸುವ ಮೂಲಕ ವ್ಯವಹಾರ ನಡೆಸಬೇಕು. ಅವರಿಗೆ ಒತ್ತಡ ಬೀಳುವಂತೆ ಮಾಡಬಾರದು’ ಎಂದು ಜುಲೈ 30ರಂದೇ ಪತ್ರ ರವಾನಿಸಲಾಗಿದೆ ಎಂದು ಉಮೇಶಬಾಬು ಅವರು ತಿಳಿಸಿದರು.

ಅಲ್ಲದೇ, ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿ (ಎಸ್‌ಎಲ್‌ಬಿಸಿ) ಸೂಚನೆ ಅನ್ವಯ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್‌ಗಳಿಗೆ ಲೀಡ್‌ ಬ್ಯಾಂಕ್‌ನಿಂದ ಮೂರು ಅಂಶದ ಸೂಚನೆ ರವಾನಿಸಲಾಗಿದೆ. ಸಮಸ್ಯೆಯಲ್ಲಿರುವ ರೈತರ ಜೊತೆ ಬೆಳೆ, ಆರ್ಥಿಕ ಹಾಗೂ ಸಾಮಾಜಿಕ ಸಮಾಲೋಚನೆ ನಡೆಸಬೇಕು. ರೈತರ ವ್ಯವಹಾರದ ವಿವರಗಳನ್ನು ಗಮನಿಸಿಕೊಂಡು ಸಾಲ ಮರುಪಾವತಿಗೆ ಸಾಕಷ್ಟು ಕಾಲಾವಧಿ ನೀಡಬೇಕು.

ಅಲ್ಲದೇ, ಸಾಲ ವಸೂಲಾತಿ ಕ್ಯಾಂಪ್‌ಗಳನ್ನು ಆಯೋಜಿಸುವ ಮೊದಲು ಗ್ರಾಮದ ಹಾಗೂ ರೈತರ ಸ್ಥಿತಿಗತಿಗಳನ್ನು ಅವಲೋಕಿಸಬೇಕು ಎಂಬುದು ಈ ಸೂಚನೆಯ ಪ್ರಮುಖ ಅಂಶವಾಗಿದೆ. ‘ಜಿಲ್ಲೆಯಲ್ಲಿ ಸಾಲ ವಸೂಲಾತಿ ಹಾಗೂ ಅಧಿಕ ಬಡ್ಡಿಯ ಕುರಿತು ಕಠಿಣ ಈಚೆಗೆ ಬ್ಯಾಂಕರ್ಸ್‌ ಸಭೆ ಕರೆದು ಜಿಲ್ಲಾಧಿಕಾರಿ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ’ ಎಂದರು.

ಶಿಸ್ತಿನ ಕ್ರಮ
‘ರೈತರಿಗೆ ಅವಮಾನ, ಮಾನಸಿಕ ಒತ್ತಡ, ಸಾಮಾಜಿಕ ತೊಂದರೆ ಉಂಟು ಮಾಡುವ ಯಾವುದೇ ಕ್ರಮಗಳನ್ನು ಕೈಗೊಂಡರೂ ತಕ್ಷಣವೇ ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಮಂಜುನಾಥ ನಾಯಕ್‌  ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸಂಪರ್ಕಿಸಿ’ ಎಂದು ಉಪವಿಭಾಗಾಧಿಕಾರಿ ಪಿ. ಶಿವರಾಜ್‌ ಅವರು  ತಿಳಿಸಿದ್ದಾರೆ.

ಸಾಲ ಪಡೆದಾಗ ಕೈಗೆ ಬರುವ ಹಣ, ನಿರ್ದಿಷ್ಟ ಅವಧಿಯಲ್ಲಿ ಮರುಪಾವತಿ ಸುವ ಒಟ್ಟು ಹಣವೆಷ್ಟು? ಎಂಬ ಬಗ್ಗೆ ಸ್ಪಷ್ಟವಾಗಿ ಲೆಕ್ಕ ಕೇಳಿ.  ಪಾವತಿಸುವ ಹೆಚ್ಚುವರಿ ಪೈಸೆಯ ಬಗ್ಗೆ ಮೊದಲೇ ವಿವರ ಪಡೆಯಿರಿ. -ಶಿವಪುತ್ರಪ್ಪ ಮಲ್ಲಾಡದ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT