ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ: ಶಿವರಾಮ ಹೆಬ್ಬಾರ

ಹಾವೇರಿ ವೈದ್ಯಕೀಯ ಕಾಲೇಜು: ಜಿಲ್ಲಾ ನೋಡಲ್ ಅಧಿಕಾರಿಯಾಗಿ ಮೊಹಮ್ಮದ್‌ ರೋಶನ್‌ ನೇಮಕ
Last Updated 4 ಏಪ್ರಿಲ್ 2022, 13:44 IST
ಅಕ್ಷರ ಗಾತ್ರ

ಹಾವೇರಿ: ‘ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜಿನ (ಎಚ್‌.ಐ.ಎಂ.ಎಸ್‌) ಕಟ್ಟಡ ಕಾಮಗಾರಿಯನ್ನು ಡಿಸೆಂಬರ್ -2022ರ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಿ, ಜನವರಿ 2023ರಿಂದ ಶೈಕ್ಷಣಿಕ ಚಟುವಟಿಕೆಗಳು ನೂತನ ಕಟ್ಟಡದಲ್ಲೇ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಕಟ್ಟಡ ಪೂರ್ಣಗೊಳಿಸಿ’ ಎಂದು ಕಟ್ಟಡ ಗುತ್ತಿಗೆದಾರ ಕಂಪನಿಯ ಮುಖ್ಯಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಾಕೀತು ಮಾಡಿದರು.

ಹಾವೇರಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ, ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ನಡೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪ್ರಗತಿ ಕುರಿತಂತೆ ಸಭೆ ನಡೆಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶೇ 30ರಷ್ಟು ಮಾತ್ರ ಕಾಮಗಾರಿ ನಡೆದಿದ್ದು, ಇನ್ನೂ ಶೇ 70ರಷ್ಟು ಕೆಲಸ ಬಾಕಿ ಇದೆ. ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಾದ ಕೆ.ಬಿ.ಆರ್. ಕಂಪನಿಯ ಕೆ.ಬಾಬುರಾವ್ ಅವರಿಗೆ ಸೂಚನೆ ನೀಡಿದರು.

ವೈದ್ಯಕೀಯ ಕಾಲೇಜಿನ ಕಾಮಗಾರಿಗಳ ತ್ವರಿತ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಅಗತ್ಯವಾದ ಸಲಹೆ, ಸಹಕಾರ, ಸಮನ್ವಯ ಕಾರ್ಯಕ್ಕಾಗಿ ‘ಜಿಲ್ಲಾ ನೋಡಲ್‌ ಅಧಿಕಾರಿ’ಯಾಗಿ ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಅವರನ್ನು ನೇಮಕ ಮಾಡಲಾಗುವುದು. ಶೀಘ್ರದಲ್ಲೇ ಕಾಯಂ ಆಗಿ ಹಾವೇರಿ ವೈದ್ಯಕೀಯ ಕಾಲೇಜಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಸಚಿವ ಹೆಬ್ಬಾರ ತಿಳಿಸಿದರು.

ಪ್ರತಿ 15 ದಿನಕ್ಕೊಮ್ಮೆ ಹಾವೇರಿಗೆ ಭೇಟಿ ನೀಡಿ, ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಎಂಜಿನಿಯರ್‌ ಸಿ.ಮಂಜಪ್ಪ ಅವರಿಗೆ ಸೂಚಿಸಿದರು.

‌‌ವೈದ್ಯಕೀಯ ಕಾಲೇಜು ಆರಂಭಕ್ಕೆ ಅಗತ್ಯವಾದ ಹಣಕಾಸು, ಬೋಧಕ ಮತ್ತು ಬೋಧಕೇತರ ನೇಮಕಾತಿ ಪ್ರಕ್ರಿಯೆ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗೆ ಅನುಮತಿ ವಿವಿಧ ಪ್ರಸ್ತಾವ‌ಗಳಿಗೆ ಮಂಜೂರಾತಿ ಸೇರಿದಂತೆ ಉನ್ನತ ಮಟ್ಟದಲ್ಲಿ ಬೆಂಗಳೂರಿನಲ್ಲಿ ನಾವು ವ್ಯವಸ್ಥೆ ಮಾಡುತ್ತೇವೆ. ಜಿಲ್ಲಾ ಮಟ್ಟದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಭೂಸ್ವಾಧೀನ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ‌ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಮಾತನಾಡಿ, ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಕುಡಿಯುವ ನೀರಿನ ಪೂರೈಕೆ ಪ್ರಸ್ತಾವ ಹಾಗೂ ಭೂಸ್ವಾಧೀನ ಪ್ರಸ್ತಾವಗಳನ್ನು ತ್ವರಿತವಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರು: ₹40 ಕೋಟಿಯ ಪ್ರಸ್ತಾವ

ಹಾವೇರಿ ವೈದ್ಯಕೀಯ ಕಾಲೇಜು, ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ₹40 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕ್ರಿಯಾ ಯೋಜನೆಯನ್ನು ತಕ್ಷಣ ಸರ್ಕಾರಕ್ಕೆ ಪ್ರಸ್ತಾವ‌ ಸಲ್ಲಿಸಬೇಕು. ಮುಂದಿನ ಎರಡು ತಿಂಗಳೊಳಗಾಗಿ, ಮಳೆಗಾಲ ಆರಂಭವಾಗುವ ಮುನ್ನ ವೈದ್ಯಕೀಯ ಕಾಲೇಜಿನ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ತಾಕೀತು ಮಾಡಿದರು.

ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಬಲಬದಿಯ ಮೂರು ಎಕರೆ ಹಾಗೂ ಎಡಬದಿಯ ಎರಡು ಎಕರೆ ಜಮೀನ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ಅನುದಾನಕ್ಕೆ ಪ್ರಸ್ತಾವ‌ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಸಚಿವರು ಸೂಚನೆ ನೀಡಿದರು.

150 ವಿದ್ಯಾರ್ಥಿಗಳಿಗೆ ಪ್ರವೇಶಾತಿ

ವೈದ್ಯಕೀಯ ಕಾಲೇಜಿನ ವಿಶೇಷಾಧಿಕಾರಿ ಅರವಿಂದ ಮುಳಗುಂದ ಮಾತನಾಡಿ, ಎನ್.ಎಂ.ಸಿ. ಪ್ರಕಾರ 150 ವಿದ್ಯಾರ್ಥಿಗಳ ಪ್ರವೇಶ ಅನುಕೂಲ ಕಲ್ಪಿಸಲು ತಾತ್ಕಾಲಿಕವಾಗಿ ವೈದ್ಯಕೀಯ ಪ್ರಥಮ ವರ್ಷದ ತರಗತಿ ಆರಂಭಕ್ಕೆ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಪ್ರತ್ಯೇಕ ಬ್ಲಾಕ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ನೇಮಕಾತಿ ಕುರಿತಂತೆ ಪ್ರಸ್ತಾವ‌ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ಶ್ರೀನಿವಾಸ ಮಾನೆ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT