‘ನಾ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ..!’

7
ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲಗೆ ಪರೋಕ್ಷ ಟಾಂಗ್‌ ನೀಡಿದ ಯತ್ನಾಳ

‘ನಾ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ..!’

Published:
Updated:

ವಿಜಯಪುರ: ‘ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿರುವೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಈ ಹಿಂದೆ ನಡೆದಿದ್ದ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಾ ಪಕ್ಷೇತರ ಅಭ್ಯರ್ಥಿಯಿದ್ದೆ. ಎಲ್ಲರೂ ಆಗ ನನ್ನನ್ನು ಬೆಂಬಲಿಸಿದ್ದರು. ಚುನಾವಣಾ ರಾಜಕೀಯದಲ್ಲಿ ಅವರಿಗೆ ನಾವು ಹೆಲ್ಪ್‌ ಮಾಡೋದು, ಅವರು ನಮಗೆ ಹೆಲ್ಪ್‌ ಮಾಡೋದು ಇದ್ದಿದ್ದೇ. ಆದರೆ ಈ ಬಾರಿ ಪಕ್ಷದಿಂದ ಆಚೀಚೆ ಆಲೋಚಿಸಲ್ಲ’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

‘ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾತನಾಡಲು ಯಾರ ಅನುಮತಿಯನ್ನು ಪಡೆಯಬೇಕಿಲ್ಲ. ಮುಂದಿನ ದಿನಗಳಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ ಎಂಬುವವರೂ ಆಲೋಚಿಸಲಿ. 30 ವರ್ಷಗಳಿಂದ ಇಂಥ ತೆರಿಗೆ ಕಟ್ಟಿಯೇ ರಾಜಕಾರಣ ಮಾಡಿರುವೆ’ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಹೇಳಿಕೆಗೆ ಯತ್ನಾಳ ಪರೋಕ್ಷವಾಗಿ ಹೆಸರು ಪ್ರಸ್ತಾಪಿಸದೆ, ಕಾಂಗ್ರೆಸ್‌ನ ಪ್ರಭಾವಿ ಮುಖಂಡ, ತಮ್ಮ ಅಂತರಂಗದ ಗೆಳೆಯನಿಗೆ ಟಾಂಗ್‌ ನೀಡಿದರು.

ಜನಾಭಿಪ್ರಾಯಕ್ಕೆ ಮೋಸ:

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳದೆ, ತಿರುಚುವ ಕೆಲಸ ನಡೆಸಿದ್ದಾರೆ. ಜನಾಭಿಪ್ರಾಯಕ್ಕೆ ಮೋಸ ಮಾಡುತ್ತಿದ್ದಾರೆ. ಬಿಜೆಪಿ ಇದನ್ನು ಉಗ್ರವಾಗಿ ಖಂಡಿಸುತ್ತದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ದೂರಿದರು.

‘ಮೈತ್ರಿ ಸರ್ಕಾರದ ಆಡಳಿತಾರೂಢ ಪಕ್ಷಗಳಿಗೆ ‘ಹೂ ಮಾಲೆ’ಯ ಗೆಲುವು ಸಿಕ್ಕಿಲ್ಲ. ಜನರು ಬಿಜೆಪಿ ಪರ ತೀರ್ಪು ನೀಡಿದ್ದಾರೆ. ಗುರುವಾರ ನಡೆಯಲಿರುವ ವಿಧಾನ ಪರಿಷತ್‌ನ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಒಂದು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ಇದೇ ಸಂದರ್ಭ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !