ಕುಂದು–ಕೊರತೆ ಆಲಿಕೆ: ಅರ್ಜಿಗಳ ಶೀಘ್ರ ವಿಲೇವಾರಿಗೆ ಶಾಸಕ ಮಂಜುನಾಥ್‌ ಸೂಚನೆ

7

ಕುಂದು–ಕೊರತೆ ಆಲಿಕೆ: ಅರ್ಜಿಗಳ ಶೀಘ್ರ ವಿಲೇವಾರಿಗೆ ಶಾಸಕ ಮಂಜುನಾಥ್‌ ಸೂಚನೆ

Published:
Updated:
Deccan Herald

ರಾಮನಗರ: ‘ಅಧಿಕಾರಿಗಳು ಜನರ ಅಹವಾಲುಗಳನ್ನು ಕಾಟಾಚಾರದಿಂದ ಸ್ವೀಕರಿಸಬಾರದು. ಅರ್ಜಿಗಳನ್ನು ವಿಲೇವಾರಿ ಮಾಡದೆ ನೆಪ ಹೇಳಿದರೆ ನಾನು ಸುಮ್ಮನಿರುವುದಿಲ್ಲ’ ಎಂದು ಶಾಸಕ ಎ. ಮಂಜುನಾಥ್‌ ಎಚ್ಚರಿಸಿದರು.

ಇಲ್ಲಿನ ಮಿನಿವಿಧಾನಸೌಧದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೂಟಗಲ್‌, ಬಿಡದಿ ಹೋಬಳಿ ಜನರ ಕುಂದುಕೊರತೆಗಳನ್ನು ಆಲಿಸಿ ಅವರು ಮಾತನಾಡಿದರು. ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

‘ಸ್ಥಳೀಯ ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಅಥವಾ ಮುಖ್ಯಮಂತ್ರಿಗಳ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರೊಂದಿಗೆ ಇದ್ದೇವೆಂಬ ಭಾವನೆ ಬರುವಂತೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜನರು ಸಲ್ಲಿಸುವ ಸಮಸ್ಯೆಗಳ ಅರ್ಜಿಯನ್ನು 15 ದಿನದ ಒಳಗೆ ವಿಲೇವಾರಿಗೊಳಿಸಿ ಪರಿಹಾರ ಸೂಚಿಸಬೇಕು. ಕಂದಾಯ, ಆರೋಗ್ಯ ಸೇರಿದಂತೆ ಹಲವಾರು ಇಲಾಖೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿವೆ. ಜನರು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನುಮುಂದೆ ಅದಕ್ಕೆಲ್ಲ ಅವಕಾಶ ನೀಡದೆ ಸಾಧ್ಯವಾದಷ್ಟು ಬೇಗ ಜನರ ಸಮಸ್ಯೆಗಳನ್ನು ಬಗೆಹರಿಸಿ ಎಂದರು.

ಶಾಸಕರಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು, ಸರ್ಕಾರಿ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡಿದ್ದೇವೆ. ಇ– ಸ್ವತ್ತಿನಲ್ಲಿ ಖಾತೆ ಮಾಡಲು ಪಂಚಾಯಿತಿಯಲ್ಲಿ ಅವಕಾಶ ಆಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು 94 ಸಿ ಅರ್ಜಿ ಪಡೆದು ಸ್ಥಳ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೂಡ್ಲಯ್ಯನದೊಡ್ಡಿ ತಾಯಮ್ಮ , ಸರ್ಕಾರದಿಂದ ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕು ಪತ್ರ ವಿತರಣೆಯಾಗಿದೆ. ಪಂಚಾಯಿತಿಯಲ್ಲಿ ಇ ಸ್ವತ್ತಿನ ಅಡಿಯಲ್ಲಿ ಖಾತೆ ಮಾಡಿಸಲು ಆಗುತ್ತಿಲ್ಲ ಎಂದು ದೂರಿದರು.

ಆಗ ಶಾಸಕರು ಕೆಲವು ಹಳ್ಳಿಗಳಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇ ಸ್ವತ್ತಿನಲ್ಲಿ ಖಾತೆ ಮಾಡಲು ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅಂತಹ ಮನೆಗಳಿರುವ ಜಾಗವನ್ನು ಗ್ರಾಮ ಠಾಣಾ ಆಗಿ ಪರಿವರ್ತಿಸಿ ಇ ಸ್ವತ್ತಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಡಣಾಯಕನಪುರ ಗ್ರಾಮದ ರವಿಕುಮಾರ್ , ಕಲಾವತಿ, ಶಿವಣ್ಣ ಅವರು ಎಂಬುವರು ಮಾತನಾಡಿ ‘ ಸರ್ವೆ 117ರಲ್ಲಿ 23 ರೈತರಿಗೆ 96ರಲ್ಲಿಯೇ ಫಾರಂ ನಂಬರ್ 53 ಅರ್ಜಿ ಸಲ್ಲಿಸಿದ್ದೆವು. ಸಾಗುವಳಿ ಜಮೀನನ್ನು ಸ್ಕೆಚ್ ಮಾಡಿ ವಿಸ್ತೀರ್ಣದಂತೆ ಖಾತೆ ಮಾಡಲು ಶಾಸಕರು ತಹಶೀಲ್ದಾರ್ ಗೆ ಸೂಚನೆ ನೀಡಿದ್ದರು. ಆದರೆ, ತಹಸೀಲ್ದಾರ್ ಸ್ಥಳ ಪರಿಶೀಲಿಸಿ ಐದು ಮಂದಿಗೆ ಮಂಜೂರು ಮಾಡಿರುವ ಭೂಮಿಯ ವಿಸ್ತೀರ್ಣದಲ್ಲಿ ಕಡಿಮೆ ಮಾಡಿ ನೋಂದಣಿ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎ.ಮಂಜುನಾಥ್, ಪುನರ್ ಸರ್ವೆ ಮಾಡಿ ಅನುಭವದಂತೆ ವಿಸ್ತೀರ್ಣ ಸರಿದೂಗಿಸಿ ಮಂಜೂರು ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !