ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಟದ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ

ಪ್ರಜಾವಾಣಿ ಅಮೃತ ಮಹೋತ್ಸವ ಪ್ರಯುಕ್ತ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ 5 ಕಿ.ಮೀ. ಓಟ
Last Updated 8 ಫೆಬ್ರುವರಿ 2023, 7:02 IST
ಅಕ್ಷರ ಗಾತ್ರ

ಕಲಬುರಗಿ: ಚಳಿಯನ್ನೂ ಲೆಕ್ಕಿಸದೇ ನಸುಕಿನ ಜಾವವೇ ಧಾವಿಸಿದ್ದ ಹಿರಿ, ಕಿರಿಯರು.. ಹೆಸರು ನೋಂದಣಿ ನಂತರ ಟೀಶರ್ಟ್‌, ಕ್ಯಾಪ್‌ ಪಡೆದ ಖುಷಿ.. ಎಲ್ಲರಿಗಿಂತ ಮೊದಲು ಓಟ ಪೂರ್ಣಗೊಳಿಸಿ ಬಹುಮಾನ ಪಡೆಯುವ ಹುಮ್ಮಸ್ಸು...

‘ಪ್ರಜಾವಾಣಿ’ ಅಮೃತ ಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಮಂಗಳವಾರ ನಗರದಲ್ಲಿ ಯುನೈಟೆಡ್‌ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ 5 ಕಿ.ಮೀ. ಓಟದ ಸ್ಪರ್ಧೆಯ ಝಲಕ್ ಇದು.

ಓಟದ ಸ್ಪರ್ಧೆಗೆ ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರಷ್ಟೇ ಬಂದಿರಲಿಲ್ಲ. ಪೈಪೋಟಿ ಒಡ್ಡಲು ಮತ್ತು ಬಹುಮಾನ ಗೆಲ್ಲಲು ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಮುಂತಾದವರು ವಿವಿಧ ಜಿಲ್ಲೆಗಳಿಂದ ಬಂದಿದ್ದರು. ಚುಮು ಚುಮು ಚಳಿಯನ್ನು ಲೆಕ್ಕಿಸದೇ ಬೆಳಿಗ್ಗೆ 6 ರಿಂದಲೇ ಹೆಸರು ನೋಂದಣಿಗೆ ಸಾಲಾಗಿ ನಿಂತಿದ್ದರು.

ನಗರದ ಹಳೆ ಚೌಕ ಪೊಲೀಸ್‌ ಠಾಣೆ ವೃತ್ತದ ಬಳಿ ನಿಧಾನವಾಗಿ ಜಮಾಯಿಸತೊಡಗಿದ ಜನರಲ್ಲಿ 11 ವರ್ಷದ ಮಕ್ಕಳಿಂದ 65 ವರ್ಷದವರೆಗಿನ ಎಲ್ಲಾ ವಯಸ್ಸಿನವರು ಇದ್ದರು. ವೇಗವಾಗಿ ಓಡಬೇಕು ಮತ್ತು ಗೆಲ್ಲಬೇಕು ಎಂಬುದು ಅವರ ಗುರಿ, ಉದ್ದೇಶವಾಗಿತ್ತು. ಕ್ರೀಡಾ ವಸತಿ ನಿಲಯದ 5ನೇ ತರಗತಿ ವಿದ್ಯಾರ್ಥಿಗಳು ತಾಲೀಮು ನಡೆಸಿಕೊಂಡೇ ಬಂದಿದ್ದರು. ಬೆಳಿಗ್ಗೆ 8ರ ವೇಳೆಗೆ 300ಕ್ಕೂ ಹೆಚ್ಚು ಸ್ಪರ್ಧಿಗಳು ಓಟಕ್ಕೆ ಹೆಸರು ನೋಂದಾಯಿಸಿಕೊಂಡರು.

ಓಟದ ಸ್ಪರ್ಧೆಗೆ ನಗರ ಪೊಲೀಸ್ ಕಮಿಷನರ್ ಚೇತನ್.ಆರ್ ಮತ್ತು ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷ, ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ಚಾಲನೆ ನೀಡಿದರು.

ಹಳೆ ಚೌಕ ಪೊಲೀಸ್‌ ಠಾಣೆ ವೃತ್ತದಿಂದ ಆರಂಭಗೊಂಡ ಓಟ ಜಗತ್ ವೃತ್ತದ ಮಾರ್ಗವಾಗಿ ಎಸ್‌ವಿಪಿ ವೃತ್ತದಲ್ಲಿ ಕೊನೆಗೊಂಡಿತು. ಸ್ಪರ್ಧೆ ಆರಂಭದಿಂದ ಕೊನೆಯವರೆಗೂ ಸ್ಪರ್ಧಿಗಳಿಗೆ ಮಾರ್ಗದಲ್ಲಿ ವಾಹನಗಳಿಂದ ರಕ್ಷಣೆ ಒದಗಿಸಲು ಪೈಲಟ್ ವ್ಯವಸ್ಥೆ ಮಾಡಲಾಗಿತ್ತು. ಸ್ಪರ್ಧಿಗಳಿಗೆ ನೀರು, ಜ್ಯೂಸ್ ವಿತರಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಪರ್ಧಿಗಳ ಹಿಂದೆಯೇ ಆಂಬುಲೆನ್ಸ್‌ ಸಾಗಿ ಬಂತು.

ಕ್ರೀಡಾ ತರಬೇತುದಾರರಾದ ಸಂಜಯ್ ಬಾಣಾದ, ರಾಜು ಚವ್ಹಾಣ, ಪ್ರವೀಣಕುಮಾರ ಪುಣೆ ತೀರ್ಪುಗಾರರಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಡಾ. ವಿಕ್ರಮ ಸಿದ್ದಾರೆಡ್ಡಿ ಮತ್ತು ಹಿರಿಯ ವೈದ್ಯ ಡಾ.ಉಡುಪಿ ಶ್ರೀಕೃಷ್ಣ ಜೋಶಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಿದರು. ಪ್ರಜಾವಾಣಿಯ ಕಲಬುರಗಿ ಬ್ಯುರೊ ಮುಖ್ಯಸ್ಥ ರಾಹುಲ ಬೆಳಗಲಿ ಉಪಸ್ಥಿತ ರಿದ್ದರು. ಪ್ರಜಾವಾಣಿ ಸಿಬ್ಬಂದಿ ಮತ್ತು ಯುನೈಟೆಡ್ ಆಸ್ಪತ್ರೆ ಸಿಬ್ಬಂದಿ ಇದ್ದರು.

‘ಯಶಸ್ವಿ ಸ್ಪರ್ಧೆ ಖುಷಿ ತಂದಿದೆ’

‘ನಗರದ ಜನರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಲು ಪ್ರಜಾವಾಣಿ ಹಾಗೂ ಯುನೈಟೆಡ್‌ ಆಸ್ಪತ್ರೆ ಸಹಯೋಗದಲ್ಲಿ ಓಟದ ಸ್ಪರ್ಧೆ ಯಶಸ್ವಿಯಾಗಿದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು ತುಂಬಾ ಖುಷಿ ತಂದಿದೆ’ ಎಂದು ಯುನೈಟೆಡ್‌ ಆಸ್ಪತ್ರೆ ಅಧ್ಯಕ್ಷ, ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.

‘ಸ್ಪರ್ಧೆಯಲ್ಲಿ ಸಣ್ಣವರಿಂದ ಹಿಡಿದು ಹಿರಿಯ ನಾಗರಿಕರು, ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ’ ಎಂದು ಅವರು ತಿಳಿಸಿದರು.

‘ಜನರ ಆರೋಗ್ಯ ರಕ್ಷಣೆಗೆ ಯುನೈಟೆಡ್ ಆಸ್ಪತ್ರೆಯು ಬದ್ಧವಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮತ್ತು ಯುವಜನರನ್ನು ಪ್ರೋತ್ಸಾಹಿಸುವ ಇನ್ನೂ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಸ್ಪರ್ಧೆಯಲ್ಲಿ ಪಾಲ್ಗೊಂಡವರ ಮಾತು

ಓಟದ ಸ್ಪರ್ಧೆಯಲ್ಲಿ ಗೆದ್ದಿದ್ದು ಖುಷಿಯಾಗಿದೆ. ಜತೆಗೆ ಹಣದ ಸಮಸ್ಯೆಯಿಂದ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧತೆ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಸಿಕ್ಕಿರುವ ಬಹುಮಾನದ ಹಣವನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳುವೆ. ಪ್ರಜಾವಾಣಿಗೆ ಧನ್ಯವಾದ.

–ಪುಟ್ನಂಜ, ಪ್ರಥಮ ಸ್ಥಾನ ಗಳಿಸಿದ ಓಟಗಾರ


ಪ್ರಜಾವಾಣಿ ಓಟದ ಸ್ಪರ್ಧೆ ಆಯೋಜಿಸಿದ್ದು ಸಂತಸದ ಸಂಗತಿ. ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜತೆಗೆ ಯುವಜನರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಲು ಇದು ಸಹಕಾರಿ.

–ಭಜರಂಗ ಕಲವಾಡೆ, ದ್ವಿತೀಯ ಸ್ಥಾನ ಪಡೆದ ಓಟಗಾರ

***
ಯುನೈಟೆಡ್‌ ಆಸ್ಪ‍ತ್ರೆ ಸಹಯೋಗದಲ್ಲಿ ಪ್ರಜಾವಾಣಿಯು ಓಟದ ಸ್ಪರ್ಧೆ ಏರ್ಪಡಿಸಿದ್ದು ಉಪಯುಕ್ತವಾಗಿದೆ. ಉಚಿತ ನೋಂದಣಿಗೆ ಅವಕಾಶ ನೀಡಿರುವುದು, ಬಡ ಪ್ರತಿಭೆಗಳು ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗಿದೆ

–ಭೀಮಾಶಂಕರ ಹೆಡಗಿಜೋಳ, ತೃತೀಯ ಸ್ಥಾನ ಪಡೆದ ಓಟಗಾರ

****

ನಾನು ಬಹುಮಾನ ಗೆಲ್ಲುವೆ ಎಂಬ ವಿಶ್ವಾಸವಿರಲಿಲ್ಲ. ಆರೋಗ್ಯ ಜಾಗೃತಿಗಾಗಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಪಾಲ್ಗೊಂಡಿದ್ದೆ. ಈಗ ಬಹುಮಾನ ಗೆದ್ದಿದ್ದು ಖುಷಿ ಉಂಟು ಮಾಡಿದೆ.

–ಸಾಹಿತ್ಯಾ ಪಾಟೀಲ, ಪ್ರಥಮ ಸ್ಥಾನ, ಮಹಿಳೆಯರ ವಿಭಾಗ


ಆರೋಗ್ಯ ಸದೃಢವಾಗಿದ್ದರೆ, ಬಹುಮಾನ ಗೆದ್ದಂತೆ. ಇಂತಹ ಸ್ಪರ್ಧೆಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ನಾನು ಒಂದು ಮಗುವಿನ ತಾಯಿಯಾಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿ ನೀಡಿದೆ.

–ಮಸ್ರತ್‌ ಸುಲ್ತಾನಾ, ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗ

********
ದೊಡ್ಡ ಮಟ್ಟದ ಓಟದ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ. ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ. 3ನೇ ಸ್ಥಾನ ಪಡೆದಿರುವುದಕ್ಕೆ ತೃಪ್ತಿಯಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಆಯೋಜನೆಯಾಗಲಿ.

–ಸುಶ್ಮಿತಾ ಗುರುಲಿಂಗಯ್ಯ, ತೃತೀಯ ಸ್ಥಾನ, ಮಹಿಳೆಯರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT