ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ: 8.65ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ

Published 20 ಮೇ 2024, 4:54 IST
Last Updated 20 ಮೇ 2024, 4:54 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲ ಹೀಗೆ ಎರಡು ಪ್ರಕೃತಿಯ ಅತಿರೇಕಗಳಿಂದ ನಲುಗಿರುವ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಅವಕಾಳಿ ಮಳೆ ಸುರಿಯುತ್ತಿರುವುದರಿಂದ ಹೊಲಗಳನ್ನು ಹದ ಮಾಡಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 8.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಹೊಂದಲಾಗಿದೆ.

ಜಿಲ್ಲೆಯ ಹಲವೆಡೆ ಈಗಾಗಲೇ ಒಂದೆರಡು ಮಳೆ ಬಿದ್ದಿದ್ದರಿಂದ ನೆಲ ತಂಪಾಗಿದೆ. ಕಳೆದ ಮೂರು ತಿಂಗಳಿಂದ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರೈತರು ಹೊಲದಲ್ಲಿ ಕುಂಟಿ ಹೊಡೆಯಲು ಎತ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೋಯಾ, ಹೆಸರು, ಉದ್ದು ಬೆಳೆಯಲು ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಕಳೆದ ಬಾರಿ ಅನಾವೃಷ್ಟಿಯಿಂದ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ತೊಗರಿ ಕೈಕೊಟ್ಟಿತ್ತು. ಎರಡು ಬಾರಿ ಬಿತ್ತನೆ ಮಾಡಿದರೂ ಮಳೆಯ ಅಭಾವದಿಂದಾಗಿ ಕಾಯಿ ಕಟ್ಟಿರಲಿಲ್ಲ. ಹೀಗಾಗಿ, ರೈತರು ನಷ್ಟದ ಸುಳಿಗೆ ಸಿಲುಕಿದ್ದರು. 

ಅದರಲ್ಲೂ, ಅತಿ ಹೆಚ್ಚು ತೊಗರಿ ಬೆಳೆಯುವ ಅಫಜಲಪುರ, ಜೇವರ್ಗಿ, ಶಹಾಬಾದ್, ಚಿತ್ತಾಪುರ, ಸೇಡಂ, ಆಳಂದ ತಾಲ್ಲೂಕಿನ ಹಲವೆಡೆ ರೈತರು ಇಳುವರಿ ಬಾರದೇ ತೀವ್ರ ನಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ರೈತರ ಕೈಗೆ ಹಣ ಸಿಗಲೇ ಇಲ್ಲ. ಸಾಲದ ಮೊತ್ತ ಏರುತ್ತಲೇ ಇತ್ತು. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳು ಬಿಡುಗಡೆ ಮಾಡಿದ್ದರಿಂದ ರೈತರಿಗೆ ಒಂದಷ್ಟು ಸಮಾಧಾನ ತಂದಿದೆ. ಅದೇ ಹಣವನ್ನು ಬಳಸಿಕೊಂಡು ಇದೀಗ ಬಿತ್ತನೆ ಬೀಜ, ಗೊಬ್ಬರವನ್ನು ಖರೀದಿಸಲು ಮುಂದಾಗಿದ್ದಾರೆ.

ಈ ಬಾರಿ ಮುಂಗಾರು ಉತ್ತಮವಾಗಿರುವುದರಿಂದ ಅಲ್ಪಾವಧಿಯ ಬೆಳೆಗಳಾದ ಹೆಸರು, ಸೋಯಾ, ಉದ್ದು, ಅಲಸಂದೆ ಕಾಳು ಬೆಳೆಯಲು ರೈತರು ನೆಲವನ್ನು ಹದಗೊಳಿಸುತ್ತಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಈ ಬೆಳೆಗಳನ್ನು ಬೆಳೆದಿರಲಿಲ್ಲ. ಜುಲೈನಲ್ಲಿ ಅಲ್ಪ ಮಳೆ ಬಂದರೂ ಅದಾಗಲೇ ಈ ಬೆಳೆಗಳನ್ನು ಬೆಳೆಯುವ ಮಿತಿ ಮುಗಿದು ಹೋಗಿತ್ತು. ಹೀಗಾಗಿ, ರೈತರು ನೇರವಾಗಿ ತೊಗರಿ ಬಿತ್ತನೆ ಮಾಡಿದರು. ಆದರೆ, ತೊಗರಿ ಬೀಜ ಮೊಳಕೆಯೊಡೆಯಲೇ ಇಲ್ಲ. ಇದರಿಂದ ಬೇಸತ್ತ ರೈತರು ಹೊಲವನ್ನು ಹರಗಿದರು. ಬೆಳೆಯ ಆಸೆಯನ್ನೇ ಕೈಬಿಟ್ಟು ಕೂಲಿ ಕೆಲಸ ಮಾಡಲು ಬೇರೆ ಕಡೆ ತೆರಳಿದರು. 

ಇಳುವರಿ ಕಡಿಮೆ ಆಗಿದ್ದರಿಂದ ಮಾರುಕಟ್ಟೆಗೆ ತೊಗರಿ ಆವಕವೂ ಕಡಿಮೆಯಾಯಿತು. ಹೀಗಾಗಿ, ತೊಗರಿ ದರ ಒಂದು ಹಂತದಲ್ಲಿ ಕ್ವಿಂಟಲ್‌ಗೆ ₹ 13 ಸಾವಿರ ದಾಟುವ ಮೂಲಕ ಸಾರ್ವಕಾಲಿನ ದಾಖಲೆಯನ್ನು ಬರೆದಿತ್ತು. 

ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳಲು ಕಾರಣವಾಗಿದೆ. ಸರಾಸರಿ 15 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈಗಾಗಲೇ 33 ಎಂ.ಎಂ. ಬಿದ್ದಿದ್ದು, ಶೇ 119ರಷ್ಟಾಗುತ್ತದೆ. ಮೇ 31ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ಅಲ್ಪಾವಧಿಯ ಬೆಳೆ ಹಾಗೂ ಅಂತರ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್.

ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ

ಯಾರು ಏನೆಂದರು?

‘ಈ ಬಾರಿ ಉತ್ತಮ ಮುಂಗಾರು’
ಜಿಲ್ಲೆಯ ರೈತರಿಗೆ ಅಗತ್ಯವಿರುವಷ್ಟು ತೊಗರಿ ಹೆಸರು ಸೋಯಾ ಉದ್ದು ಸಜ್ಜೆ ಸೂರ್ಯಕಾಂತಿ ಮೆಕ್ಕೆಜೋಳದ ಬೀಜಗಳನ್ನು ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಬೀಜಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಬಾರಿ ಉತ್ತಮ ಮುಂಗಾರು ಇರುವ ಬಗ್ಗೆ ಮಾಹಿತಿ ಇದ್ದು ರೈತರು ಮುಖ್ಯ ಬೆಳೆಯ ಜೊತೆಗೆ ಅಂತರ ಬೆಳೆಗಳನ್ನು ಬೆಳೆಯಬಹುದು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸರ್ಕಾರ ಕೃಷಿ ಹೊಂಡಗಳ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ. -ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ 
‘ಬಿತ್ತನೆಗೆ ಸಿದ್ಧತೆ’
ಮಾಗಿಯ‌‌ ಉಳುಮೆ ಮಾಡಿದ ರೈತರು ಮುಂಗಾರು ಬಿತ್ತನೆಗಾಗಿ‌ ಹೊಲ‌ ಹದಗೊಳಿಸುತ್ತಿದ್ದಾರೆ. ನಮ್ಮಲ್ಲಿ‌ ಸಕಾಲದಲ್ಲಿ ಮಳೆಯಾದರೆ ಜೂನ್ 7ರ ನಂತರ ಬಿತ್ತನೆ ಪ್ರಾರಂಭವಾಗುತ್ತದೆ. - ಶರಣಗೌಡ ಪಾಟೀಲ ಕೃಷಿಕ ಚಂದನಕೇರಾ ತಾ. ಚಿಂಚೋಳಿ
‘ಮಳೆಗಾಗಿ ಕಾಯುತ್ತಿದ್ದೇವೆ’
ಜಿಲ್ಲೆಯಲ್ಲಿ ಐನಾಪುರ ಹೋಬಳಿಯ ರೈತರು ಬೇಗ ಮುಂಗಾರು ಬಿತ್ತನೆ ಪ್ರಾರಂಭಿಸುವುದು ವಾಡಿಕೆ. ಉತ್ತಮ ಮಳೆಯಾದರೆ ರೋಹಿಣಿ ಮಳೆ ನಕ್ಷತ್ರದಲ್ಲಿಯೇ ಭೂಮಿಗೆ ಬೀಜ ಹಾಕುವುದು ಸಾಮಾನ್ಯ. ಸದ್ಯ ಮಳೆಗಾಗಿ‌ ಕಾಯುತ್ತಿದ್ದೇವೆ. - ಲಕ್ಷ್ಮಣ ರಾಠೋಡ ಕೃಷಿಕ ಭೂಂಯಾರ ತಾಂಡಾ ತಾ. ಚಿಂಚೋಳಿ
₹ 330 ಕೋಟಿ ಬೆಳೆ ನಷ್ಟ ಪರಿಹಾರ 
ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಹಂಗಾಮು ಕೈಕೊಟ್ಟಿದ್ದರಿಂದ ಬೆಳೆ ನಷ್ಟವಾದ 282010 ರೈತರಿಗೆ ರಾಜ್ಯ ಸರ್ಕಾರ ಎರಡು ಕಂತುಗಳಲ್ಲಿ ₹ 330.53 ಕೋಟಿ ಬೆಳೆ ನಷ್ಟ ಪರಿಹಾರವನ್ನು (ಇನ್ ಪುಟ್ ಸಬ್ಸಿಡಿ) ಪಾವತಿಸಿದೆ. ಇದಕ್ಕೆ ಪೂರಕವಾಗಿ ಬೆಳೆ ವಿಮೆಯೂ ಹಲವು ರೈತರ ಕೈ ಹಿಡಿದಿದೆ. ಕೃಷಿ ಕಂದಾಯ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಮಾತುಕತೆ ನಡೆಸಿ ಹೆಚ್ಚು ಮೊತ್ತದ ವಿಮಾ ಪರಿಹಾರವನ್ನು ರೈತರಿಗೆ ಕೊಡಿಸಿದ್ದಾರೆ. ಬೆಳೆ ನಷ್ಟ ಪರಿಹಾರದ ಮೊದಲ ಕಂತಾಗಿ ₹ 56.02 ಕೋಟಿ ಹಾಗೂ 2ನೇ ಹಂತದಲ್ಲಿ ₹ 274.51 ಕೋಟಿ ಪರಿಹಾರವನ್ನು ವಿತರಣೆ ಮಾಡಲು ಅನುಮೋದನೆ ನೀಡಿ ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ.
54 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಸಂದರ್ಭದಲ್ಲಿ ಬಳಕೆಗಾಗಿ ಸುಮಾರು 54 ಸಾವಿರ ಟನ್ ರಸಗೊಬ್ಬರವನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಂಡಿದೆ. 23562 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ 12880 ಮೆಟ್ರಿಕ್ ಟನ್ ಡಿಎಪಿ 15539 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಸೇರಿದಂತೆ ಎಂಒಪಿ ಹಾಗೂ ಎಸ್‌ಎಸ್‌ಪಿ ರಸಗೊಬ್ಬರದ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಕಳೆದ ಬಾರಿ 1.11 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಖರ್ಚಾಗಿತ್ತು. ಈ ಬಾರಿ ಬಿತ್ತನೆ ಪ್ರಮಾಣ ಜಾಸ್ತಿಯಾದರೆ ಹೆಚ್ಚುವರಿ ಗೊಬ್ಬರದ ಬೇಡಿಕೆಯನ್ನು ಪೂರೈಸಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಲಭ್ಯವಿರುವ ಬೀಜದ ಪ್ರಮಾಣ
ಬೀಜ; ಪ್ರಮಾಣ (ಕ್ವಿಂಟಲ್‌ಗಳಲ್ಲಿ) ತೊಗರಿ; 6801 ಹೆಸರು; 642 ಉದ್ದು; 413 ಸೋಯಾ ಅವರೆ; 11255 ಮೆಕ್ಕೆಜೋಳ; 125 ಸೂರ್ಯಕಾಂತಿ; 135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT