ಅಂಗವಿಕಲ ಮತದಾರರನ್ನು ಕರೆತರುವ ಹೊಣೆ ತಾಪಂ ಇಒಗಳಿಗೆ

ಶನಿವಾರ, ಏಪ್ರಿಲ್ 20, 2019
27 °C

ಅಂಗವಿಕಲ ಮತದಾರರನ್ನು ಕರೆತರುವ ಹೊಣೆ ತಾಪಂ ಇಒಗಳಿಗೆ

Published:
Updated:

ಕಲಬುರ್ಗಿ: ‘ಗುಲಬರ್ಗಾ ಲೋಕಸಭಾ ಮತಕ್ಷೇತ್ರದಲ್ಲಿರುವ ಅಂಗವಿಕಲ ಮತದಾರರನ್ನು ಮತಗಟ್ಟೆಗೆ ಕರೆತರುವ ವ್ಯವಸ್ಥೆ ಮಾಡಲು ಆಯಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಹೇಳಿದರು.

ಅಂಗವಿಕಲ ಮತದಾರರಿಗೆ ಮತದಾನದ ವ್ಯವಸ್ಥೆ ಹಾಗೂ ಮತಗಟ್ಟೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ ಇಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವಿಕಲರು ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ತಹಶೀಲ್ದಾರರ ಸಭೆ ಕರೆದು ಅಂಗವಿಕಲ ಮತದಾರರ ಮಾಹಿತಿ ಪಡೆಯಬೇಕು. ಅವರು ಯಾವ ಪ್ರದೇಶದಲ್ಲಿದ್ದಾರೆ ಎಂಬುದನ್ನು ಗುರುತಿಸಿ ಅವರನ್ನು ಮತಗಟ್ಟೆಗೆ ಕರೆತರುವ ವ್ಯವಸ್ಥೆ ಮಾಡಬೇಕು ಎಂದರು.

ಅಂಗವಿಕಲರನ್ನು ಅವರ ಮನೆಯಿಂದ ಮತಗಟ್ಟೆಗಳಿಗೆ ಕರೆತರಲು ಅವಶ್ಯವಿರುವ ವಾಹನ ಹಾಗೂ ಸ್ವಯಂಸೇವಕರ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಮತಗಟ್ಟೆಗಳಲ್ಲಿ ಅಡೆತಡೆ ಇಲ್ಲದೆ ಮತದಾನ ಮಾಡಲು ಅನುಕೂಲವಾಗುವಂತೆ ಗಾಲಿಕುರ್ಚಿ, ಊರುಗೋಲು, ಭೂತಗನ್ನಡಿಗಳ ವ್ಯವಸ್ಥೆ ಮಾಡಬೇಕು. ದೃಷ್ಟಿಮಾಂದ್ಯ ಮತದಾರರಿಗೆ ಅನುಕೂಲವಾಗುವ ಹಾಗೆ ಬ್ರೈಲ್ ಲಿಪಿಯಲ್ಲಿರುವ ಮತದಾರರ ಚೀಟಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಹೆಚ್ಚಿನ ಮತಗಟ್ಟೆಗಳು ಶಾಲೆಗಳಲ್ಲಿರುವುದರಿಂದ ಮೂಲಸೌಕರ್ಯ ಕಲ್ಪಿಸಲು ಅವಕಾಶವಿದೆ. ಎಲ್ಲ ಮತಗಟ್ಟೆಗಳಲ್ಲಿ ರ‍್ಯಾಂಪ್‌, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ಗಾಲಿಕುರ್ಚಿ, ಮತಗಟ್ಟೆಯ ಹೊರಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್, ವೆಂಕಟೇಶ್‍ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 14,584 ಅಂಗವಿಕಲ ಮತದಾರರು ಇದ್ದಾರೆ. ಒಟ್ಟು 2,368 ಮತಗಟ್ಟೆಗಳಿದ್ದು, 1,216 ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 14,584 ಅಂಗವಿಕಲರ ಪೈಕಿ 2,093 ಅಂಧತ್ವ, 936 ಕಿವುಡ ಮತ್ತು ಮೂಗ, 9,481 ನಡೆಯಲು ಬಾರದಿರುವವರು ಹಾಗೂ 2,074 ಇತರೆ ಅಂಗವೈಕಲ್ಯ ಹೊಂದಿರುವವರು ಇದ್ದಾರೆ. ಎಂಟರಿಂದ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನೇಮಿಸಲಾಗುತ್ತಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ಬಿ. ತರನ್ನುಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !