ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಬೆಳೆ ಸಮೀಕ್ಷೆ, ಬೆಳೆ ವಿಮೆಗೆ ನಿರಾಸಕ್ತಿ!

Published 3 ಆಗಸ್ಟ್ 2023, 5:37 IST
Last Updated 3 ಆಗಸ್ಟ್ 2023, 5:37 IST
ಅಕ್ಷರ ಗಾತ್ರ

ಬಷೀರಅಹ್ಮದ್ ನಗಾರಿ

ಕಲಬುರಗಿ: ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನಡೆಸಿದ ನಿರಂತರ ಜಾಗೃತಿ ಹಾಗೂ ಪ್ರಚಾರದ ಹೊರತಾಗಿಯೂ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಜಿಲ್ಲೆಯ ರೈತರು ನಿರಾಸಕ್ತಿ ತೋರಿದ್ದಾರೆ. ಮೊಬೈಲ್‌ ಬಳಸಿ ಖುದ್ದು ಬೆಳೆ ಸಮೀಕ್ಷೆ ಮಾಡಲು ಕೂಡ ಜಿಲ್ಲೆಯ ರೈತರು ಚೂರೂ ಆಸಕ್ತಿ ತೋರಿಲ್ಲ. ಕೃಷಿ ಇಲಾಖೆ ನೀಡಿರುವ ಈ ಅಂಕಿ–ಅಂಶಗಳು ಇದನ್ನು ಪುಷ್ಟೀಕರಿಸುತ್ತವೆ.

ಬೆಳೆ ವಿಮೆ ನೋಂದಾಯಿಸಲು ರೈತರಿಗೆ ಆಗಸ್ಟ್‌ 1ರ ತನಕ ಕಾಲಾವಕಾಶ ನೀಡಲಾಗಿತ್ತು. ಬೆಳೆ ವಿಮೆಗೆ ನೋಂದಾಯಿಸಿಕೊಂಡವರ ಸಂಖ್ಯೆ 1.61 ಲಕ್ಷ. ಕಳೆದ ವರ್ಷ 2.14 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರು.

ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ತೊಗರಿ, ಮುಸುಕಿನ ಜೋಳ, ಜೋಳ, ಸಜ್ಜೆ, ಉದ್ದು, ತೊಗರಿ, ಹೆಸರು, ಸೋಯಾಅವರೆ, ಎಳ್ಳು, ನೆಲಗಡಲೆ, ಹತ್ತಿ, ಟೊಮೆಟೊ, ಅರಿಸಿನ ಸೇರಿದಂತೆ 17 ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು. ಇನ್ನುಳಿದ, ಭತ್ತ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಐದು ಬೆಳೆಗಳಿಗೆ ಆಗಸ್ಟ್‌ 16ರ ತನಕ ಬೆಳೆ ವಿಮೆ ಪಡೆಯಲು ಅವಕಾಶವಿದೆ.

ಗ್ರಾಮೀಣ ಭಾಗದಲ್ಲಿ ಜಿಂಗಲ್‌ ಸೇರಿದಂತೆ ಹಲವು ಬಗೆಯಲ್ಲಿ ಪ್ರಚಾರದ ಮಾಡಲಾಗಿತ್ತು. ಆದರೂ ರೈತರು ದೊಡ್ಡಮಟ್ಟದಲ್ಲಿ ಬೆಳೆವಿಮೆಗೆ ನೋಂದಾಯಿಸಿಕೊಂಡಿಲ್ಲ.
ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ

‘ಒಂದಿಷ್ಟು ಕಡೆ ರೈತರಿಂದ ವಿಮಾ ಮೊತ್ತ ಪಾವತಿಯಾಗಿ, ದಾಖಲಾತಿಗಳ ಅಪ್‌ಡೇಟ್‌ ತಡವಾಗಿರುತ್ತದೆ. ಈ ಕುರಿತು ಆಗಸ್ಟ್‌ 16ರ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ. ಅದೆಲ್ಲವೂ ಸೇರಿದರೆ ಜಿಲ್ಲೆಯಲ್ಲಿ ಬೆಳೆ ವಿಮೆಗೆ ಒಳಪಡುವ ರೈತರ ಸಂಖ್ಯೆ 2 ಲಕ್ಷ ಮೀರುವ ನಿರೀಕ್ಷೆಗಳಿವೆ’ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಖುದ್ದು ಸಮೀಕ್ಷೆಗಿಲ್ಲ ಸ್ಪಂದನೆ

ಬೆಳೆ ವಿಮೆ, ಇನ್‌ಫುಟ್‌ ಸಬ್ಸಿಡಿ, ಬೆಳೆ ಸಾಲ ಹಾಗೂ ಕೀಟ ರೋಗ ಬಾಧೆಗೆ ಒಳಗಾದ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಧನ ನೀಡಲು ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿ ಬಳಸಲಾಗುತ್ತದೆ. ಹೀಗಾಗಿ ‘ಮುಂಗಾರು ರೈತರ ಬೆಳೆ ಸಮೀಕ್ಷೆ 2023’ ಆ್ಯಪ್‌ನಲ್ಲಿ ರೈತರು ತಪ್ಪದೇ ತಮ್ಮ ಬೆಳೆ ಕುರಿತು ನಿಖರ ಮಾಹಿತಿ ಅಪ್‌ಡೇಟ್‌ ಮಾಡುವಂತೆಯೂ ಅಧಿಕಾರಿಗಳು ಜಾಗೃತಿ ಮೂಡಿಸಿದ್ದರು. ಆದರೆ, ಅನ್ನದಾತರು ಅದಕ್ಕೆ ಸ್ಪಂದಿಸಿಲ್ಲ.

ಜಿಲ್ಲೆಯಲ್ಲಿ ಏಳು ಲಕ್ಷಕ್ಕೂ ಅಧಿಕ ಹಿಡುವಳಿ ಜಮೀನುಗಳಿವೆ. ಮುಂಗಾರು ಹಂಗಾಮಿನಲ್ಲಿ 7.14 ಲಕ್ಷ ಹಿಡುವಳಿ ಜಮೀನುಗಳನ್ನು ಆ್ಯಪ್‌ ಮೂಲಕ ನಡೆಸಲು ಸಮೀಕ್ಷೆ ಮಾಡಲು ಗುರಿ ಹೊಂದಲಾಗಿದೆ. ಈ ಪೈಕಿ ಜುಲೈ 31ರ ತನಕ ಆಗಿದ್ದು ಶೇ 1ಕ್ಕೂ ಕಡಿಮೆ. ಅಂದರೆ, ಬರೀ 1,456 ಹಿಡುವಳಿ ಜಮೀನುಗಳ ರೈತರು ಖುದ್ದಾಗಿ ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಮಾಹಿತಿ ಅಪ್‌ಡೇಟ್‌ ಮಾಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ ಸಾವಿರಕ್ಕೂ (848) ಕಡಿಮೆ ಇತ್ತು.

ಕಲಬುರಗಿ ಜಿಲ್ಲೆಯ ತಾಲ್ಲೂಕುವಾರು ವಿವರ

ತಾಲ್ಲೂಕು;ಬೆಳೆ ವಿಮೆ ನೋಂದಾಯಿಸಿದ ರೈತರು; ಬೆಳೆ ಸಮೀಕ್ಷೆ ;2022–23;2023–24;2022–23;2023–24

ಅಫಜಲಪುರ;12288;11093;193;54

ಆಳಂದ;58534;48953;176;154

ಚಿಂಚೋಳಿ;35703;19693;117;437

ಚಿತ್ತಾಪುರ;14562;15187;37;78

ಜೇವರ್ಗಿ;7922;9568;77;137

ಕಲಬುರಗಿ;13301;14681;56;30

ಕಾಳಗಿ;20429;16265;49;55

ಕಮಲಾಪುರ;16537;7881;28;30

ಸೇಡಂ;28144;25333;70;419

ಶಹಾಬಾದ್;1659;2361;5;3

ಯಡ್ರಾಮಿ;5670;7355;63;59

ಒಟ್ಟು;214749;178370;871;1456

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT