ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ|ವೈದ್ಯರ ನಿರ್ಲಕ್ಷ್ಯ ಆರೋಪ: ಜಿಮ್ಸ್‌ ನಿರ್ದೇಶಕ ಸೇರಿ ಮೂವರ ವಿರುದ್ಧ FIR

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು: ಸಂಬಂಧಿಕರ ಆರೋಪ
Published 17 ಜೂನ್ 2024, 3:26 IST
Last Updated 17 ಜೂನ್ 2024, 3:26 IST
ಅಕ್ಷರ ಗಾತ್ರ

ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿ ವೈದ್ಯರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್‌.ಆರ್. ಸೇರಿ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂನ್ 15ರ ಬೆಳಿಗ್ಗೆ ಗಂಗೂಬಾಯಿ ತಳವಾರ ಅವರು ಹೊಟ್ಟೆ ನೋವಿನಿಂದ ಜಿಮ್ಸ್‌ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲವೆಂದು ಡಾ.ಅನುಷಾ ಮತ್ತು ಸಿಬ್ಬಂದಿ ಹೇಳಿದರು. ರೋಗಿಯ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ ಡಾ.ಸ್ವಾತಿ ಅವರು ತಪಾಸಣೆ ಮಾಡಿ, ‘ರಕ್ತದೊತ್ತಡ ಕಡಿಮೆಯಾಗಿದೆ’ ಎಂದು ಹೇಳಿ ಹೊರಟು ಹೋದರು. ಮಧ್ಯಾಹ್ನ 2.30ಕ್ಕೆ ವಾರ್ಡ್ ಒಳಗಡೆ ಕರೆದೊಯ್ದು ಕೆಲ ಹೊತ್ತಿನ ಬಳಿಕ ಮೃತಪಟ್ಟಿದಾಗಿ ವೈದ್ಯರು ಹೇಳಿದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ತಾಯಿ ಗಂಗೂಬಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಪುತ್ರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

₹ 6.65 ಲಕ್ಷದ ಚಿನ್ನಾಭರಣ ಕಳವು: ಮಗಳ ಮದುವೆಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ.

ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಸಮೀನಾ ಹಾಜಿಮಿಯಾ ಅವರು ನಗರದ ಮುಸ್ಲಿಂ ಚೌಕ್‌ನಲ್ಲಿದ್ದ ಸಂಬಂಧಿಕರ ಮನೆಗೆ ಬಂದಿದ್ದರು. ಮಗಳ ಮದುವೆ ತಯಾರಿಗಾಗಿ ಬ್ಯಾಗ್‌ನಲ್ಲಿ ₹ 6.65 ಲಕ್ಷ ಮೌಲ್ಯದ ಚಿನ್ನಾಭರಣ ಇರಿಸಿದ್ದರು. ರಾತ್ರಿ ಬ್ಯಾಗ್‌ ತೆಗೆದು ನೋಡಿದಾಗಿ ಒಡವೆಗಳು ಕಳುವಾಗಿದ್ದ ಗಮನಕ್ಕೆ ಬಂದಿದೆ ಎಂದು ಚೌಕ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಯುವಕ ಸಾವು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಂದೂರು (ಬಿ) ಸಮೀಪದ ಕಾನು ನಾಯಕ ತಾಂಡಾದ ಸಂಜು ರಾಠೋಡ (24) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ತಡರಾತ್ರಿ ಮೃತಪಟ್ಟರು.

ಜೂನ್ 15ರ ಬೆಳಿಗ್ಗೆ ಜೆಸಿಬಿ ಚಾಲನೆಗಾಗಿ ಬೈಕ್ ಮೇಲೆ ತೆರಳುತ್ತಿದ್ದರು. ಜೀವನ ದಾಬಾ ಸಮೀಪದ ರಸ್ತೆಯಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು. ಸಂಜು ಅವರ ತಲೆ, ಎದೆ ಮತ್ತು ಎರಡೂ ಕೈಗಳಿಗೆ ಗಂಭೀರ ಗಾಯವಾಗಿ ಕಿವಿ ಹಾಗೂ ಮೂಗಿನಿಂದ ರಕ್ತ ಸ್ರಾವವಾಯಿತು. ಪ್ರಜ್ಞೆ ತಪ್ಪಿದ್ದ ಸಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಾಲಕ ಪರಾರಿಯಾಗಿದ್ದು, ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT