ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲೂರಿ ಸೀತಾರಾಮರಾಜು ಜಯಂತಿ: ಹೋರಾಟಗಾರನ ಸಾಹಸಮಯ ಜೀವನಗಾಥೆ

Last Updated 14 ಆಗಸ್ಟ್ 2022, 2:59 IST
ಅಕ್ಷರ ಗಾತ್ರ

ಕಲಬುರಗಿ: ಬುಡಕಟ್ಟು ಜನಾಂಗದ ಅಸ್ಮಿತೆ, ಶೌರ್ಯ, ಆದರ್ಶ ಮತ್ತು ಮೌಲ್ಯಗಳ ಸಂಕೇತವಾದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರಅಲ್ಲೂರಿ ಸೀತಾರಾಮರಾಜು ಅವರ ಜೀವನ ಚರಿತ್ರೆಯನ್ನು ನೃತ್ಯ ರೂಪಕದ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯಲ್ಲಿ ಸಂಗೀತಾ ಫಣೇಶ್ ತಂಡದ ಕಲಾವಿದರು ಶನಿವಾರ ಪ್ರಸ್ತುತಪಡಿಸಿರು. ಸಭಿಕರು ಮಂತ್ರಮುಗ್ಧರಾದರು.

ಮಧ್ಯಾಹ್ನ ಬೀದರ್‌ನಲ್ಲಿ ಪ್ರದರ್ಶನ ನೀಡಿ, ಅಲ್ಲಿನವರ ಮನಗೆದ್ದು ಮೇಕಪ್‌ ಕಳಚದೆ ನೇರವಾಗಿ ಡಾ.ಎಸ್‌.ಎಂ ಪಂಡಿತ್ ರಂಗಮಂದಿರಕ್ಕೆ ಕಲಾವಿದರು ಬಂದರು. ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬ್ರಿಟಿಷರ ನಿದ್ದೆಗೆಡಿಸಿದ್ದ 27 ವರ್ಷದ ಅಲ್ಲೂರಿ ಸೀತಾರಾಮರಾಜು ಬದುಕಿನ ಕಥೆಯನ್ನು ಕಿಂಚಿತ್ತು ಆಯಾಸಗೊಳ್ಳದೆ ರಂಗದ ಮೇಲೆ ಪ್ರದರ್ಶಿಸಿದರು.

ಇದೆಲ್ಲವೂ ನಡೆದದ್ದು ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ. ಇದೆಲ್ಲವನ್ನೂ ಅನಾವಣರಗೊಳಿಸಿದ್ದು ‘ಅಲ್ಲೂರಿ ಸೀತಾರಾಮರಾಜು–125’ ನೃತ್ಯರೂಪಕ. ಮಬ್ಬುಗತ್ತಲಲ್ಲಿ ತೇಲಿ ಬಂದ ಸೀತಾರಾಮರಾಜು ಪರಿಚಯದ ಹಿನ್ನೆಲೆಯ ಧ್ವನಿ ನೆರೆದಿದ್ದ ಸಭಿಕರನ್ನು 1897ರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪಾಂಡರಂಗಿ ಗ್ರಾಮಕ್ಕೆ ಕರೆದೊಯ್ಯಿತು. ‌

ನವಿಲಿನ ಮೃದುಲಾಸ್ಯದ ಮೆಲ್ಲನೆ ಹೆಜ್ಜೆ ಇರಿಸುತ್ತಾ, ಅಡವಿಯಲ್ಲಿ ರಾಮರಾಜು ಸಹೋದರತೆಯಿಂದ ಬೆಳೆದ ದಿನಗಳ ವಿವಿಧ ಸನ್ನಿವೇಶಗಳು, ರಾಮು ತನ್ನ ಸೀತೆಯೊಂದಿಗೆ ಕಳೆದ ಮುಗ್ಧ ತುಂಟಾಟಗಳ ರೂಪಕ ಮನಮೋಹಕವಾಗಿತ್ತು.

ಬ್ರಿಟಿಷರು ಆಮಿಷದ, ಬಲವಂತದ ಮಾತಿಗೆ ಮರುಳಾಗಿ ರಾಮುವಿನ ಮಾತಿಗೆ ಕಿಗೊಡದೆ ಅವನನ್ನು ದೂರ ತಳ್ಳುವ ಅಡವಿ ಜನರ ತಿರಸ್ಕಾರ, ಬ್ರಿಟಿಷರ ಕೂಲಿ ಕಾಸಿಗೆ ಕೈಯೊಡ್ಡುವವರ ಹಣದ ಹಪಹಪಿತನ, ಹೆಚ್ಚು ಕೂಲಿ ಕೇಳಿ ಚಾಟಿ ಏಟಿನ ಪೆಟ್ಟು ತಿನ್ನುವ ಕರುಣ ರಸವನ್ನು ಮನೋಜ್ಞವಾಗಿ ಅಭಿನಯಿಸಿದರು.

ರಾಮುವಿನ ಬಳಿ ರಕ್ಷಣೆಗೆ ದಾವಿಸಿ ದುಃಖಿತವಾಗಿ ಒಗ್ಗೂಡುವ ಭೀಭತ್ಸ, ಬ್ರಿಟಿಷರ ವಿರುದ್ಧ ಹೋರಾಡುವ ರೌದ್ರ, ಮಹಾತ್ಮ ಗಾಂಧಿಯ ಅಹಿಂಸಿಯ ಮಾತಿಗೆ ಒಪ್ಪದೆ ನಯಾವಾಗಿ ತಿರಸ್ಕರಿಸಿ, ಕ್ರಾಂತಿ ಹಾದಿ ಹಿಡಿಯುವಾಗಿನ ಶಾ೦ತರಸ ಭಾವದ ನೃತ್ಯವನ್ನು ಪ್ರೇಕ್ಷಕರು ತಲೆ ಆಡಿಸಿ ಹಿನ್ನಲೆ ಸಂಗೀತವನ್ನು ಆನಂದಿಸಿದರು.

ವಿಶಾಲ ರಂಗವೇದಿಕೆ, ಪರಸ್ಪರ ಹೆಣೆದುಕೊಂಡಂತೆ ಸಂಯೋಜಿಸಲಾದ ನೆರಳು–ಬೆಳಕು, ವರ್ಣಮಯ ದೀಪಗಳು, ವಸ್ತ ವಿನ್ಯಾಸ ಪ್ರತಿಯೊಂದು ಸನ್ನಿವೇಶಕ್ಕೂ ಪೂರಕವಾಗಿದ್ದವು. ಮುಖದಲ್ಲಿ ನೈಜವಾಗಿ ಮೂಡಿದ ನಿರೀಕ್ಷೆ, ಹಾಸ್ಯ, ಭಯಾನಕ, ಕರುಣ, ರೌದ್ರ, ಭೀಭತ್ಸ, ಶಾ೦ತರಸದ ಹಾವಭಾವಗಳ ಅಭಿನಯ ಅನನನ್ಯವಾಗಿತ್ತು.

ಕಲಾವಿದರ ವೈವಿಧ್ಯಮಯ ಹಸ್ತಮುದ್ರಿಕೆ, ಬಳುಕಿನ ಹೆಜ್ಜೆಗಳ ಕಲಾತ್ಮಕ ‍ಪಾದಚಲನೆಯೊಂದಿಗೆ ಪ್ರಬುದ್ಧ ಕೂಚಿಪುಡಿ, ಶಾಸ್ರೀಯ ಮತ್ತು ಜಾನಪದ ನೃತ್ಯ ಸಮ್ಮಿಲನ ನೃತ್ಯ ರೂಪಕದ ಆಕರ್ಷಕ ಅಂಶಗಳಾಗಿದ್ದವು.

ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜರಾಜೇಶ್ವರಿ ಕಲಾನಿಕೇತನ ಹಾಗೂ ದೆಹಲಿಯ ಸಂಸ್ಕೃತಿ ಸಚಿವಾಲಯದ ವತಿಯಿಂದ ಈ ನೃತ್ಯ ರೂಪಕ ನಡೆಯಿತು.

ವೀಣಾ ಮೂರ್ತಿ ವಿಜಯ್ ಅವರ ನಿರ್ದೇಶನ ಮತ್ತು ನೃತ್ಯವಿದ್ದರೆ, ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ ಅವರ ಜಾನಪದ ತಂಡ, ಪ್ರವೀಣ್ ಡಿ ರಾವ್ ಅವರ ಸಂಗೀತ, ವಿವಿ ಗೋಪಾಲ್ ಅವರ ಸಾಹಿತ್ಯ, ರೇಖಾ ಜಗದೀಶ್ ಅವರ ವಸ್ತ್ರ ವಿನ್ಯಾಸ, ಸೂರ್ಯ ಎವ್ ರಾವ್ ಅವರ ಬೆಳಕು ಮತ್ತು ರಂಗ ಸಜ್ಜಿಕೆಯ ಮನಸೊರೆಗೊಳಿಸಿತು. 26 ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು.

*
ಬೆಂಗಳೂರಿನ ಬಂದ ಕಲಾವಿದರ ಪ್ರದರ್ಶನಕ್ಕೆ ‍ಪೂರಕ ವ್ಯವಸ್ಥೆ ಎಸ್‌.ಎಂ.ಪಂಡಿತ ರಂಗಮಂದಿರ ಹಾಗೂ ಸ್ಥಳೀಯ ಆಡಳಿತದಿಂದ ಸಿಗಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನಿರೀಕ್ಷಿಸಿದ್ದೆವು.
–ಶ್ರೀನಿವಾಸ ಜಿ ಕಪ್ಪಣ್ಣ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT