ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಪುತ್ಥಳಿ; ತುರ್ತು ಭೂಮಿಪೂಜೆ

ಆಳಂದ; ಪುತ್ಥಳಿ ಸ್ಥಾಪನೆಗೆ ಪಟ್ಟುಹಿಡಿದ ಸಂಘಟನೆಗಳು
Last Updated 2 ಜನವರಿ 2022, 3:26 IST
ಅಕ್ಷರ ಗಾತ್ರ

ಆಳಂದ: ಪಟ್ಟಣದ ಹೊಸ ಮಿನಿ ವಿಧಾನಸೌಧ ಕಟ್ಟಡದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು.

ಇಲ್ಲಿನ ಮಿನಿ ವಿಧಾನಸೌಧ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ. 4ರಂದು ಆಗಮಿಸಲಿದ್ದಾರೆ. ಈ ಕುರಿತು ಪೂರ್ವಸಿದ್ಧತೆ ಪರಿಶೀಲಿಸಲು ಪ್ರಭಾರಿ ಜಿಲ್ಲಾಧಿಕಾರಿ ದಿಲೀಷ್ ಶಶಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್‌ ಶನಿವಾರ ಭೇಟಿ ನೀಡಿದರು.

ಇದೇ ವೇಳೆ ಸ್ಥಳಕ್ಕೆ ಬಂದವಿವಿಧ ದಲಿತ ಸಂಘಟನೆಗಳ ಮುಖಂಡರು, ಮಿನಿ ವಿಧಾನಸೌಧದ ಮುಂದೆ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಮಾಡಲೇಬೇಕು. ಇಲ್ಲಿದ್ದರೆ ಮುಖ್ಯಮಂತ್ರಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಪಟ್ಟು ಹಿಡಿದರು.

‘ಅಂಬೇಡ್ಕರ್‌ ಅವರ ಪುತ್ಥಳಿಯನ್ನು 12 ವರ್ಷಗಳ ಹಿಂದೆಯೇ ತಂದು ಪುರಸಭೆ ಆವರಣದಲ್ಲಿ ಶೆಡ್ ಹಾಕಿ ಇಡಲಾಗಿದೆ. ಇದು ರಾಷ್ಟ್ರನಾಯಕರಿಗೆ ಮಾಡಿದ ಅವಮಾನ. ಈ ಪುತ್ಥಳಿಯನ್ನು ಹೊಸ ಮಿನಿ ವಿಧಾನಸೌಧದಲ್ಲಿ ಸ್ಥಾಪಿಸಬೇಕು’ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಿ.ಜಿ.ಸಾಗರ, ಮುಖಂಡರಾದ ಮಹಾದೇವ ಧನ್ನಿ, ಬಸಣ್ಣ ಸಿಂಗೆ, ದಯಾನಂದ ಶೇರಿಕಾರ ಆಗ್ರಹ ಮಾಡಿದರು.

ಈ ವೇಳೆ ಸ್ಥಳದಲ್ಲಿದ್ದ ಶಾಸಕ ಸುಭಾಷ ಗುತ್ತೇದಾರ ಅವರು ಮುಖ್ಯಮಂತ್ರಿ ಕಾರ್ಯದರ್ಶಿ ಜತೆ ಮೊಬೈಲ್‌ನಲ್ಲಿ ಮಾತನಾಡಿ, ‘ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡಲು ಕೂಡಲೇ ಜಿಲ್ಲಾಧಿಕಾರಿಗೆ ಆದೇಶ ರವಾನಿಸಬೇಕು’ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕೂಡ ಇದಕ್ಕೆ ತಕ್ಷಣ ಕ್ರಮ ವಹಿಸಬೇಕು ಎಂದು ಶಾಸಕರು
ಸೂಚಿಸಿದರು.

ಬಳಿಕ ಶಾಸಕ ಸುಭಾಷ ಗುತ್ತೇದಾರ ಅವರು, ಮಿನಿ ವಿಧಾನಸೌಧದ ಹೊಸ ಕಟ್ಟಡ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಆವರಣದಲ್ಲಿದ್ದ ಪುತ್ಥಳಿಯನ್ನು ತಂದು ಜ.4ರಂದು ಮುಖ್ಯಮಂತ್ರಿ ಅವರಿಂದಲೇ ಅನಾವರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಸಂತೋಷ ಹಾದಿಮನಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಪಾಟೀಲ, ಆನಂದರಾವ ಗಾಯಕವಾಡ, ಬಾಬುರಾವ ಅರುಣೋದಯ, ಮಲ್ಲಿಕಾರ್ಜುನ ಬೋಳಣಿ, ಧರ್ಮಾ ಬಂಗರಗಾ, ಚನ್ನವೀರ ಕಾಳಕಿಂಗೆ, ರಾಜಕುಮಾರ ಮುದಗಲೆ, ತುಕರಾಮ ಹೆಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT