ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಕೊಲೆ ಆರೋಪಿಗೆ ಮರಣ ದಂಡನೆ ವಿಧಿಸಿ: ಕೋಲಿ ಸಮಾಜದಿಂದ CMಗೆ ಮನವಿ

Published 20 ಮೇ 2024, 14:20 IST
Last Updated 20 ಮೇ 2024, 14:20 IST
ಅಕ್ಷರ ಗಾತ್ರ

ಚಿತ್ತಾಪುರ: ‘ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಯುವತಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಘಟನೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಆರೋಪಿಗೆ ಮರಣ ದಂಡನೆಗೆ ಗುರಿಪಡಿಸಬೇಕು. ಅಂಜಲಿ ಕುಟುಂಬಕ್ಕೆ ಸರ್ಕಾರ ಪರಿಹಾರ ಧನ ನೀಡಬೇಕು’ ಎಂದು ತಾಲ್ಲೂಕು ಕೋಲಿ ಸಮಾಜದ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದರು. ಬಳಿಕ ತಹಶೀಲ್ದಾರ್‌ ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಸಮಾಜದ ಮುಖಂಡರು ಮಾತನಾಡಿ, ಸರ್ಕಾರ ಜಾತಿ, ಧರ್ಮ, ರಾಜಕೀಯ ಪಕ್ಷಪಾತ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆರೋಪಿಯ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಭವಿಷ್ಯದಲ್ಲಿ ಯಾರೂ ಇಂತಹ ಕೃತ್ಯ ಎಸಗದಂತೆ ಎಚ್ಚರಿಕೆಯ ಸಂದೇಶ ಸಮಾಜಕ್ಕೆ ರವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಕೊಲೆ ಬೆದರಿಕೆ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಕಡೆಗಣಿಸಿ ಕರ್ತವ್ಯಲೋಪ ಎಸಗಿದ್ದಾರೆ. ಜೀವ ಕಾಪಾಡುವ ಕೆಲಸ ಮಾಡದೆ ಉಡಾಫೆಯಿಂದ ನಡೆದುಕೊಂಡಿದ್ದಾರೆ. ಠಾಣೆಯ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡುವುದಕ್ಕಿಂತ ಸೇವೆಯಿಂದ ವಜಾ ಮಾಡಬೇಕು. ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಈ ರೀತಿಯ ಕರ್ತವ್ಯಲೋಪ ಎಸಗದಂತೆ ಪೊಲೀಸ್ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಪ್ರೀತಿಯ ಹೆಸರಿನಲ್ಲಿ ಕೊಲೆ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಪಾಲಕರು, ಪೋಷಕರು ಭಯ, ಆತಂಕದಲ್ಲಿ ಜೀವನ ಮಾಡುವಂತ ವಾತಾವರಣ ಸೃಷ್ಟಿಯಾಗಿದೆ. ಭಯ, ಆತಂಕ ನಿವಾರಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ‌. ಪ್ರೀತಿ ನಿರಾಕರಣೆ ಅಥವಾ ದ್ವೇಷದಿಂದ ಅಮಾನುಷವಾಗಿ ಕೊಲೆ ಮಾಡುವ ದುಷ್ಕೃತ್ಯಗಳ ಕಡಿವಾಣಕ್ಕೆ ಸರ್ಕಾರ ಹೊಸದಾಗಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

‘ನಾನು ಮಾಡುವ ತಪ್ಪಿಗೆ, ಅಪರಾಧಕ್ಕೆ, ದುಷ್ಕೃತ್ಯಕ್ಕೆ ಸಮಾಜದಲ್ಲಿ ನನ್ನ ಕುಟುಂಬ ಬೀದಿಗೆ ಬರುತ್ತದೆ. ಕುಟುಂಬದವರು ಬಲಿಪಶುವಾಗುತ್ತಾರೆ. ಇಡೀ ಕುಟುಂಬ ಸಮಾಜದಲ್ಲಿ ಅವಮಾನಕ್ಕೆ ಗುರಿಯಾಗುತ್ತದೆ’ ಎಂಬ ಭಯವನ್ನು ಆರೋಪಿಗಳಲ್ಲಿ ಹುಟ್ಟಿಸುವಂತಹ ಕೆಲಸ ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮಾನವ ಜೀವ ತೆಗೆಯುವ ಆರೋಪಿಗಳನ್ನು ಮಾನವ ಹಕ್ಕುಗಳ ವ್ಯಾಪ್ತಿಯಿಂದ ಹೊರಗಿಡುವ ಕಾನೂನು ರೂಪಿಸಬೇಕು. ಇನ್ನೊಬ್ಬರ ಜೀವ ತೆಗೆಯುವ ಆರೋಪಿಗಳ ಜೀವರಕ್ಷಣೆ ಸರ್ಕಾರದ ವೆಚ್ಚದಲ್ಲಿ ಮಾಡುವ ಪದ್ಧತಿ ಕೊನೆಯಾಗಬೇಕು. ಶೀಘ್ರ ವಿಚಾರಣೆ, ನ್ಯಾಯದಾನ ಮಾಡಲು ಆಡಳಿತದಲ್ಲಿ ಬದಲಾವಣೆ ತರಬೇಕು’ ಎಂದು ಮನವಿ ಮಾಡಿದ್ದಾರೆ.

ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ, ಗೌರವಾಧ್ಯಕ್ಷ ಹಣಮಂತ ಸಂಕನೂರು, ನಗರ ಘಟಕದ ಅಧ್ಯಕ್ಷ ಭೀಮಣ್ಣ ಹೋತಿನಮಡಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಗುಂಡು ಐನಾಪುರ, ನಗರ ಯುವ ಅಧ್ಯಕ್ಷ ರಾಜೇಶ ಹೋಳಿಕಟ್ಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ಬೆನಕನಳ್ಳಿ, ಬಸಣ್ಣ ತಳವಾರ, ಖಜಾಂಚಿ, ದಶರಥ ದೊಡ್ಡಮನಿ, ಕರಣಕುಮಾರ ಬೂನಿ ಅಲ್ಲೂರ, ನಾಗೇಂದ್ರ ಜೈಗಂಗಾ, ತಮ್ಮಣ್ಣ ಡಿಗ್ಗಿ, ಶರಣು ಸಿದ್ರಾಮಗೋಳ, ಸಾಬಣ್ಣ ಹೋಳಿಕಟ್ಟಿ, ಸೂರ್ಯಕಾಂತ ಕೊಂಕನಳ್ಳಿ, ಕರಣಪ್ಪ ಹಲಕರ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT