ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಅಪ್ಪನ ಕೆರೆ ಉದ್ಯಾನಕ್ಕೆ ಹೊಸ ರೂಪ

Published 25 ನವೆಂಬರ್ 2023, 5:10 IST
Last Updated 25 ನವೆಂಬರ್ 2023, 5:10 IST
ಅಕ್ಷರ ಗಾತ್ರ

ಕಲಬುರಗಿ: ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಅಪ್ಪನ ಕೆರೆ ಪಕ್ಕದಲ್ಲಿರುವ ಉದ್ಯಾನಕ್ಕೆ ಪ್ರಾದೇಶಿಕ ಆಯುಕ್ತರ ನೇತೃತ್ವದ ಶರಣಬಸವೇಶ್ವರ ಕೆರೆ ಉದ್ಯಾನ ನಿರ್ವಹಣಾ ಸಮಿತಿಯು ಹೊಸ ರೂಪ ನೀಡಿದ್ದು, ಸುಸಜ್ಜಿತ ಹಸಿರು ಉದ್ಯಾನ, ನಡಿಗೆ ಪಥ, ಮಕ್ಕಳ ಆಟೋಟ, ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಪ್ರತ್ಯೇಕ ಜಾಗವನ್ನು ಗುರುತು ಮಾಡಿದೆ.

ಉದ್ಯಾನದ ಭಾಗದಿಂದ ದೋಣಿ ವಿಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ಶುಕ್ರವಾರ ಆರು ದೋಣಿಗಳು ಕೆರೆಯಂಗಳಕ್ಕೆ ಬಂದಿವೆ. ದೋಣಿ ವಿಹಾರ, ಫುಡ್ ಕೋರ್ಟ್‌ಗಳನ್ನು ಟೆಂಡರ್ ಮೂಲಕ ನೀಡಲಾಗಿದ್ದು, ಕುಟುಂಬದ ಸದಸ್ಯರು ಈ ಕೆರೆಯ ಉದ್ಯಾನಕ್ಕೆ ಹೋದರೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ವಿಹಾರ ಮಾಡಲು ಅನುವಾಗುವಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರು ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದಾಗ ಅಪ್ಪನ ಕೆರೆಯ ಪಕ್ಕದ ನಾಲ್ಕು ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನ ರೂಪಿಸಿದ್ದರು. ಇದರ ನಿರ್ವಹಣೆಗಾಗಿ ಶರಣಬಸವೇಶ್ವರ ಕೆರೆ ಉದ್ಯಾನ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದರು. ನಂತರ ನಿರ್ವಹಣೆಯ ಕೊರತೆಯಿಂದಾಗಿ ಪಾಳು ಬಿದ್ದಿತ್ತು. ಅಲ್ಲಿ ಹಾವು, ಚೇಳುಗಳು ಸಂಚರಿಸುತ್ತಿದ್ದವು. ಹೀಗಾಗಿ, ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದ್ದ ರಜನೀಶ್ ಗೋಯಲ್ ಅವರು ಕೆರೆ ಉದ್ಯಾನವನ್ನು ಮರುಬಳಕೆಗೆ ಸಜ್ಜುಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದರು. ಜುಲೈನಲ್ಲಿ ಕಾರ್ಯಪ್ರವೃತ್ತರಾದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಉದ್ಯಾನಕ್ಕೆ ಭೇಟಿ ನೀಡಿ ಮೊದಲಿನಂತೆ ಉದ್ಯಾನವನ್ನು ಪುನರ್ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಧಿಕಾರದಲ್ಲಿದ್ದ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ಹುಲ್ಲು ಹಾಸು, ಮಕ್ಕಳಿಗಾಗಿ ಜೋಕಾಲಿ, ಜಾರು ಬಂಡಿ, ಕುಳಿತುಕೊಳ್ಳಲು ಬೆಂಚ್, ನೀರಿನ ಕಾರಂಜಿ, ಫುಡ್ ಕೋರ್ಟ್‌, 800 ಮೀಟರ್ ನಡಿಗೆ ಪಥವನ್ನು ನಿರ್ಮಿಸಲಾಗಿದೆ.

ವಿಶಾಲವಾದ ಹುಲ್ಲಿನ ಹಾಸನ್ನು ನಿರ್ಮಿಸಲಾಗಿದ್ದು, ನಡಿಗೆ ಪಥದ ಇಕ್ಕೆಲಗಳಲ್ಲಿ ಸಾಕಷ್ಟು ಆಸನದ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆಟದ ಸ್ಥಳದಲ್ಲಿ ಮರಳನ್ನು ಹಾಕಲಾಗಿದೆ. ಉದ್ಯಾನ ಪ್ರವೇಶಿಸಿದ ಕೂಡಲೇ ಬಲಭಾಗದಲ್ಲಿ ಕುಟೀರವೊಂದನ್ನು ನಿರ್ಮಿಸಲಾಗಿದ್ದು, ಅದನ್ನು ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಇದಕ್ಕೆ ಎಬಿಸಿಡಿ (ಎನಿ ಬಡಿ ಕ್ಯಾನ್ ಡ್ಯಾನ್ಸ್) ಎಂದು ಹೆಸರಿಡಲಾಗಿದ್ದು, ಆಸಕ್ತರು ಇಲ್ಲಿ ಸಂಗೀತ ಕಛೇರಿ ನಡೆಸಿಕೊಡಬಹುದು. ಹಾಡಿಗೆ ನೃತ್ಯ ಮಾಡಿ ಮನಸ್ಸು ಹಗುರ ಮಾಡಿಕೊಳ್ಳಬಹುದು.

ಕರ್ನಾಟಕ ಹಾಲು ಒಕ್ಕೂಟಕ್ಕೆ ನಂದಿನಿ ಮಳಿಗೆ ನಿರ್ಮಿಸಲು ಉದ್ಯಾನದಲ್ಲಿ ಉಚಿತವಾಗಿ ಜಾಗವನ್ನು ನೀಡಲಾಗಿದೆ.

ಮಕ್ಕಳಿಗೆ ₹ 10 ದೊಡ್ಡವರಿಗೆ ₹ 20

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಆಹ್ವಾನಿಸಿ ನವೀಕೃತ ಅಪ್ಪನ ಕೆರೆ ಉದ್ಯಾನವನ್ನು ಉದ್ಘಾಟಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮಕ್ಕಳಿಗೆ ₹ 10 ಹಾಗೂ ದೊಡ್ಡವರಿಗೆ ₹ 20 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಶುಲ್ಕವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕವೂ ಪಾವತಿ ಮಾಡಬಹುದಾಗಿದೆ. ಆರಂಭದಲ್ಲಿ ಆರು ದೋಣಿಗಳನ್ನು ತರಿಸಲಾಗಿದ್ದು ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ದೋಣಿಗಳನ್ನು ತರಿಸಲಾಗುತ್ತಿದೆ. ಸದ್ಯಕ್ಕೆ ಆರು ಜನ ಭದ್ರತಾ ಸಿಬ್ಬಂದಿ ಇದ್ದು ಒಟ್ಟಾರೆ ಮಾಸಿಕ ನಿರ್ವಹಣೆಗೇ ₹ 4.5 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ವೀಕ್ಷಣಾ ಗೋಪುರ ನಿರ್ಮಾಣ

ಅಪ್ಪನ ಕೆರೆಯ ಮಧ್ಯ ಭಾಗದಲ್ಲಿರುವ ದ್ವೀಪದಲ್ಲಿ ಅಪರೂಪದ ಹಕ್ಕಿಗಳು ಆವಾಸ ಮಾಡಿಕೊಂಡಿದ್ದು ಅವುಗಳನ್ನು ಉದ್ಯಾನದ ಆವರಣದಿಂದಲೇ ವೀಕ್ಷಿಸಲು ಸುಮಾರು 20 ಅಡಿ ಎತ್ತರದ ವೀಕ್ಷಣಾ ಗೋಪುರವನ್ನು ನಿರ್ಮಿಸುವ ಪ್ರಸ್ತಾವ ಇದೆ. ಅಲ್ಲಿ ಬೈನಾಕ್ಯುಲರ್ ಇರಿಸಲಾಗುತ್ತದೆ. ಆಸಕ್ತರು ಹಕ್ಕಿಗಳನ್ನು ದೂರದಿಂದಲೇ ವೀಕ್ಷಿಸಬಹುದಾಗಿದೆ. ಅಪ್ಪನ ಕೆರೆಯಲ್ಲಿ ಆವಾಸ ಕಂಡುಕೊಂಡಿರುವ ಹಕ್ಕಿಗಳ ಬಗ್ಗೆ ಒಂದು ಕಿರು ಹೊತ್ತಿಗೆಯನ್ನೂ ಕೆರೆ ಉದ್ಯಾನ ನಿರ್ವಹಣಾ ಪ್ರಾಧಿಕಾರವು ಪ್ರಕಟಿಸಲಿದೆ. ದೋಣಿಗಳ ಸರಾಗ ವಿಹಾರಕ್ಕೆ ಕೆರೆಯ ದಂಡೆಯನ್ನು ಸ್ವಚ್ಛಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಕಲಬುರಗಿ ಜನತೆಯ ಬಹು ನಿರೀಕ್ಷೆಯ ಅಪ್ಪ ಕೆರೆ ಉದ್ಯಾನವನ್ನು ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಎಲ್ಲ ಕೆಲಸಗಳು ಅಂತಿಮ ಹಂತಕ್ಕೆ ಬಂದಿವೆ
ಕೃಷ್ಣ ಬಾಜಪೇಯಿ, ಅಧ್ಯಕ್ಷ, ಅಪ್ಪನ ಕೆರೆ ಉದ್ಯಾನ ನಿರ್ವಹಣಾ ಸಮಿತಿ
ಅಪ್ಪ ಕೆರೆ ಉದ್ಯಾನಕ್ಕೆ ಬಂದವರಿಗೆ ಮನರಂಜನೆ ನೆಮ್ಮದಿ ಸಿಗಬೇಕು ಎಂಬ ಉದ್ದೇಶದಿಂದ ಸಂಗೀತ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಬೋಟಿಂಗ್ ಹಕ್ಕಿಗಳ ವೀಕ್ಷಣೆಯೂ ಇರಲಿದೆ.
ಭರತ್ ಭೂಷಣ್, ತಾಂತ್ರಿಕ ಸಲಹೆಗಾರ, ಕೆರೆ ಉದ್ಯಾನ ನಿರ್ವಹಣಾ ಸಮಿತಿ
ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ ಬೆಂಚುಗಳನ್ನು ಅಳವಡಿಸಿರುವುದು
ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ ಬೆಂಚುಗಳನ್ನು ಅಳವಡಿಸಿರುವುದು
ಶರಣಬಸವೇಶ್ವರ ಕೆರೆಯಲ್ಲಿ ಮಕ್ಕಳ ಆಟಕ್ಕೆ ಸಜ್ಜುಗೊಂಡಿರುವ ಜೋಕಾಲಿಗಳು
ಶರಣಬಸವೇಶ್ವರ ಕೆರೆಯಲ್ಲಿ ಮಕ್ಕಳ ಆಟಕ್ಕೆ ಸಜ್ಜುಗೊಂಡಿರುವ ಜೋಕಾಲಿಗಳು
ಕೆರೆ ಉದ್ಯಾನದ ಆವರಣದಲ್ಲಿ ಅಳವಡಿಸಿರುವ ಡಾಲ್ಫಿನ್ ರೂಪದ ವಾಟರ್ ಫೌಂಟೆನ್
ಕೆರೆ ಉದ್ಯಾನದ ಆವರಣದಲ್ಲಿ ಅಳವಡಿಸಿರುವ ಡಾಲ್ಫಿನ್ ರೂಪದ ವಾಟರ್ ಫೌಂಟೆನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT