ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 24ರಿಂದ ಅತಿರುದ್ರಯಾಗ, ಗೋಮಂಗಲ ಪೂಜೆ

ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದಲ್ಲಿ ಸಕಲ ಸಿದ್ಧತೆ: ಗಂಗಾಧರ ಶಿವಾಚಾರ್ಯ
Last Updated 15 ಮಾರ್ಚ್ 2023, 5:25 IST
ಅಕ್ಷರ ಗಾತ್ರ

ಕಲಬುರಗಿ: ‘ಜಗದ ಒಳಿತಿಗಾಗಿ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಆವರಣದಲ್ಲಿ ಮಾರ್ಚ್‌ 24ರಿಂದ 31ರ ವರೆಗೆ ಅತಿರುದ್ರಯಾಗ, ಗೋಮಂಗಲ ಪೂಜೆ, ಅಷ್ಟ ಮಂಗಲ ಲಕ್ಷ್ಮೀ– ಕುಬೇರ ಪೂಜೆಯಂತಹ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ’ ಎಂದು ಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯರು ತಿಳಿಸಿದರು.

‘ವಿಶ್ವಾರಾಧ್ಯರ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಮಠದ ವತಿಯಿಂದ ಪ್ರತಿ ಹನ್ನೊಂದು ವರ್ಷಗಳಿಗೆ ಒಮ್ಮೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘24ರ ಮಧ್ಯಾಹ್ನ 2ಕ್ಕೆ 108 ಗೋಮಂಗಲ ಪೂಜೆ ನಡೆಯಲಿದ್ದು, ಗೋವುಗಳನ್ನು ಭೀಮಾ ನದಿಗೆ ಕರೆದೊಯ್ದು ಗಂಗಾ ಸ್ನಾನ ಮಾಡಿಸಲಾಗುವುದು. ರಾತ್ರಿ 8ಕ್ಕೆ ವಿಶ್ವಾರಾಧ್ಯರ ತೊಟ್ಟಿಲೋತ್ಸವ ನಡೆಯಲಿದೆ’ ಎಂದರು.

‘25ರ ಬೆಳಿಗ್ಗೆ 8.30ಕ್ಕೆ ನಡೆಯುವ ಅತಿರುದ್ರಯಾಗಕ್ಕೆ ಶ್ರೀಶೈಲ, ಶಾದನಗರ, ತಿರುಪತಿಗಳಿಂದ ಬರುವ 156 ಋತ್ವಜರು ಪೌರೋಹಿತ್ಯ ವಹಿಸುವರು. 108 ಹೋಮ ಕುಂಡಗಳಲ್ಲಿ 108 ದಂಪತಿ ಏಕಕಾಲದಲ್ಲಿ ಅತಿರುದ್ರಯಾಗ ನೆರವೇರಿಸುವರು. ಸಂಜೆ 6ಕ್ಕೆ ಅಷ್ಟ ಮಂಗಲ ಲಕ್ಷ್ಮೀ– ಕುಬೇರ ಪೂಜೆಯೂ ನಡೆಯಲಿದೆ’ ಎಂದು ವಿವರಿಸಿದರು.

‘770 ಅಮರಗಣಂಗಳ ಮಹಾಮಂಟಪ ಪೂಜೆಯ ಪ್ರಯುಕ್ತ 41 ಅಡಿ ಎತ್ತರದ ಮಂದಿರ ಹಾಗೂ ವಿಶ್ವಾರಾಧ್ಯರ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅದರ ಲೋಕಾರ್ಪಣೆ ಅಂಗವಾಗಿ ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಸಹ ಜರುಗಲಿದೆ’ ಎಂದರು.

‘ರಾಜ್ಯದಲ್ಲಿ ಎರಡನೇ ಬಾರಿಗೆ ಅಬ್ಬೆತುಮಕೂರಿನಲ್ಲಿ ಅತಿರುದ್ರಯಾಗ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಸೇರಿದಂತೆ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಬರುವರು. ಭಕ್ತರಿಗೆ ತಂಗಲು ವಸತಿ ವ್ಯವಸ್ಥೆ, ಸ್ನಾನ ಗೃಹಗಳು, ಶೌಚಾಲಯದ ವ್ಯವಸ್ಥೆಯೂ ಮಾಡಲಾಗಿದೆ’ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ಡಾ. ಅಜಯಸಿಂಗ್, ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಗುರುಪಾಟೀಲ ಶಿರವಾಳ, ಮಠದ ವಕ್ತಾರ ಸುಭಾಶ್ಚಂದ್ರ ಕೌಲಗಿ, ಸಿದ್ದಣ್ಣಗೌಡ ಪಾಟೀಲ ಮಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT