ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಅಯೋಧ್ಯೆ ತೀರ್ಪಿನದ್ದೇ ಮಾತು

ಕೆಡಿಪಿ ಸಭೆ ರದ್ದು; ರಸ್ತೆಯಲ್ಲಿ ವಾಹನ ಸಂಚಾರ ವಿರಳ
Last Updated 9 ನವೆಂಬರ್ 2019, 19:32 IST
ಅಕ್ಷರ ಗಾತ್ರ

ಕಲಬುರ್ಗಿ: ಅತ್ತ ದೆಹಲಿಯ ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಶನಿವಾರ ಬೆಳಿಗ್ಗೆ ಅಯೋಧ್ಯೆ ವಿವಾದ ಕುರಿತ ತೀರ್ಪನ್ನು ನೀಡುತ್ತಿದ್ದರೆ ಇತ್ತ ಕಲಬುರ್ಗಿ ನಗರದಲ್ಲಿ ಕ್ಷಣಕ್ಷಣವೂ ತೀರ್ಪನ್ನು ತಿಳಿದುಕೊಳ್ಳುವ ಕಾತುರ ಹೆಚ್ಚುತ್ತಿತ್ತು.

ನಗರದ ಹೋಟೆಲ್‌, ರಸ್ತೆ ಪಕ್ಕದ ಚಹಾ ಅಂಗಡಿಗಳ ಬಳಿ ನಿಂತ ಜನರು ಮೊಬೈಲ್‌ಗಳಲ್ಲಿ ಎಲೆಕ್ಟ್ರಾನಿಕ್‌ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ವೆಬ್‌ಸೈಟ್‌ಗಳನ್ನು ನೋಡಿ ತೀರ್ಪಿನ ಮುಖ್ಯಾಂಶಗಳನ್ನು ತಿಳಿದುಕೊಳ್ಳುತ್ತಿದ್ದರು. 11 ಗಂಟೆ ಸುಮಾರಿಗೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ತೀರ್ಪಿನ ಬಗ್ಗೆ ಚರ್ಚೆ ನಡೆಸಿದರು.

ಕೆಡಿ‍ಪಿ ಸಭೆ ರದ್ದು: 14 ತಿಂಗಳ ಬಳಿಕ ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದ ಆಯೋಜನೆಗೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯನ್ನು, ಅಯೋಧ್ಯೆ ತೀರ್ಪು ಹೊರಬೀಳುವ ನಿಮಿತ್ತಮುನ್ನೆಚ್ಚರಿಕೆ ಕ್ರಮವಾಗಿ ಕೊನೆಗಳಿಗೆಯಲ್ಲಿ ರದ್ದುಗೊಳಿಸಲಾಯಿತು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಕಾರಜೋಳ ಅವರು, ‘ಉಪವಿಭಾಗಾಧಿಕಾರಿ, ತಹಶೀಲ್ದಾರರು ಕೇಂದ್ರ ಸ್ಥಾನ ಬಿಡದಂತೆ ಸೂಚನೆ ನೀಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಅಲ್ಲಿಯೇ ಇದ್ದು ಮೇಲ್ವಿಚಾರಣೆ ನಡೆಸಬೇಕಿದೆ. ಅವರು ಕೆಡಿಪಿ ಸಭೆಗೆ ಬರದಿದ್ದರೆ ಯೋಜನೆಗಳ ಸಂಪೂರ್ಣ ಪರಾಮರ್ಶೆ ನಡೆಸಲು ಆಗುವುದಿಲ್ಲ. ಹೀಗಾಗಿ, ಸಭೆ ರದ್ದುಪಡಿಸಲಾಗಿದೆ. ಮುಂದಿನ ಕೆಡಿಪಿ ಸಭೆಯನ್ನು ಶೀಘ್ರವೇ ನಡೆಸಲಾಗುವುದು’ ಎಂದರು.

ಶರಣಬಸವೇಶ್ವರ ವಿದ್ಯಾಸಂಸ್ಥೆಗಳ ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಮೂರು ದಿನಗಳ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಬೇಕಿತ್ತು. ಆದರೆ, 144ನೇ ಕಲಂ ಜಾರಿಯಲ್ಲಿದ್ದುದರಿಂದ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಶನಿವಾರದ ಇಡೀ ದಿನದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು.

ವಾಹನ ಸಂಚಾರ ವಿರಳ: ಅಯೋಧ್ಯೆ ತೀರ್ಪಿನ ಬಳಿಕ ವಾಹನ ಸಂಚಾರ ಹಾಗೂ ರಸ್ತೆಯಲ್ಲಿ ಜನರ ಓಡಾಟವೂ ಕಡಿಮೆಯಾಯಿತು. ಬೆಳಿಗ್ಗೆಯಿಂದಲೇ ಟಿ.ವಿ.ಗಳ ಮುಂದೆ ಕುಳಿತು ತೀರ್ಪು ಏನಾಗುತ್ತದೋ ಎಂದು ಜನರು ಕಾಯುತ್ತಿದ್ದರು. ಎರಡನೇ ಶನಿವಾರ ಇದ್ದುದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ನಗರದ ಪ್ರಮುಖ ವೃತ್ತಗಳಲ್ಲಿ ನಿಷೇಧಾಜ್ಞೆ ಅಂಗವಾಗಿ ಪೊಲೀಸ್‌ ಬಂದೋಬಸ್ತ್ ಇತ್ತು. ಹೀಗಾಗಿ ಬಹುತೇಕ ಜನರು ಹೊರಗಡೆ ಬರಲಿಲ್ಲ. ಅಷ್ಟಾಗಿಯೂ, ಆಸ್ಪತ್ರೆಗಳು, ಹೋಟೆಲ್‌, ಅಂಗಡಿಗಳು, ಮಾಲ್‌ಗಳು ಎಂದಿನಂತೆ ಕೆಲಸ ನಿರ್ವಹಿಸಿದವು.

ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸ್‌ ಅಧಿಕಾರಿಗಳು ಜನರ ಸಹಜ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಪೊಲೀಸರ ಸೂಚನೆ ಮೇರೆಗೆ ಪೂಜೆ ಕೈಬಿಟ್ಟರು

ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ತಮ್ಮ ಸಂಗಡಿಗರೊಂದಿಗೆ ರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ನಗರದಲ್ಲಿ ಶನಿವಾರ ನಿಷೇಧಾಜ್ಞೆ ವಿಧಿಸಿದ್ದರಿಂದ ಗುಂಪು ಕಟ್ಟಿಕೊಂಡು ಹೋಗುವಂತಿಲ್ಲ ಎಂದು ತಿಳಿಸಿದರು. ಇದರಿಂದಾಗಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವ ಯೋಚನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT