ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ಎಂಜಿನಿಯರಿಂಗ್ ಪದವೀಧರೆ ಅಂಗನವಾಡಿ ಕಾರ್ಯಕರ್ತೆ

Published 19 ನವೆಂಬರ್ 2023, 5:41 IST
Last Updated 19 ನವೆಂಬರ್ 2023, 5:41 IST
ಅಕ್ಷರ ಗಾತ್ರ

ಚಿಂಚೋಳಿ(ಕಲಬುರಗಿ ಜಿಲ್ಲೆ): ಸಿವಿಲ್ ಎಂಜಿನಿಯರಿಂಗ್ ಪದವೀಧರೆ ಶಿವಲೀಲಾ ಕೋಡಗಿ ಅವರು ಚಿಂಚೋಳಿ ತಾಲ್ಲೂಕಿನ ಭೂತಪೂರ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ.

2018ರಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಶಿವಲೀಲಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

‘ನಾನು ಮದುವೆಯ ನಂತರವೇ ಬಿಇ ವ್ಯಾಸಂಗ ಮಾಡಿದ್ದೇನೆ. ರಾಯಚೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಪದವಿ ಪಡೆದಿದ್ದೇನೆ. ವೃತ್ತಿಯಲ್ಲಿ ಮೇಲು ಕೀಳು ಎಂಬುದಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ಮನೆಯ ಜವಾಬ್ದಾರಿ ಮತ್ತು ಕುಟುಂಬದವರು ಬೇರೆ ಕಡೆ ಹೋಗಿ ಕೆಲಸ ಮಾಡುವುದು ಬೇಡ ಎಂದಿದಕ್ಕೆ ನಮ್ಮ ಊರಿನಲ್ಲೇ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಶಿವಲೀಲಾ ಕೋಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರು ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಕುಂಚಾವರಂನ ಧನಸಿಂಗ್ ನಾಯಕ ತಾಂಡಾದಲ್ಲಿ ಎಂಎ, ಬಿಇಡಿ ಪೂರ್ಣಗೊಳಿಸಿದವರು, ಹೊಡೇಬೀರನಹಳ್ಳಿ, ಚಿಂದಾನೂರ, ಸುಲೇಪೇಟ, ಸುಲೇಪೇಟ ತಾಂಡಾ, ರುಸ್ತಂಪುರ, ತೇಗಲತಿಪ್ಪ ಹಾಗೂ ರಟಕಲ್ ಗ್ರಾಮದಲ್ಲಿ ಎಂಎಸ್‌ಡಬ್ಲ್ಯು ಓದಿದವರು ಹಾಗೂ ಮಳ್ಳಿಕೊಳ್ಳ ತಾಂಡಾದಲ್ಲಿ ಬಿಎಸ್‌ಸಿ, ಬಿಇಡಿ ಓದಿದವರು ಮತ್ತು ಪೋಲಕಪಳ್ಳಿಯಲ್ಲಿ ಬಿಕಾಂ ಪದವೀಧರೆ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ತಾಲ್ಲೂಕಿನಲ್ಲಿ 375 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಮಕ್ಕಳ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲಾಗಿದೆ. ಉಳಿದ ಕೇಂದ್ರಗಳಿಗೂ ಇದನ್ನು ವಿಸ್ತರಿಸಲಾಗುವುದು’ ಎಂದು ಸಿಡಿಪಿಒ ಗುರುಪ್ರಸಾದ ಕವಿತಾಳ ತಿಳಿಸಿದರು.

ಭೂತಪೂರ ಅಂಗನವಾಡಿ ಕೇಂದ್ರದಲ್ಲಿ 22 ಮಕ್ಕಳಿದ್ದು 15ರಿಂದ 18 ಮಕ್ಕಳು ನಿತ್ಯ ಕೇಂದ್ರಕ್ಕೆ ಬರುತ್ತಿದ್ದಾರೆ. ಚಟುವಟಿಕೆ ಮೂಲಕ ಅವರಿಗೆ ಕಲಿಸುತ್ತಿದ್ದೇನೆ.
ಶಿವಲೀಲಾ ಕೋಡಗಿ, ಅಂಗನವಾಡಿ ಕಾರ್ಯಕರ್ತೆ, ಭೂತಪೂರ
ನಮ್ಮ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಉನ್ನತ ಶಿಕ್ಷಣ ಪಡೆದವರೂ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಗುರುಪ್ರಸಾದ ಕವಿತಾಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಚಿಂಚೋಳಿ
ಶಿವಲೀಲಾ ಕೋಡಗಿ
ಶಿವಲೀಲಾ ಕೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT